ಕರ್ನಾಟಕ

ಸತ್ಯಶೋಧಕರು ಭಯದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣ: ನಿಡುಮಾಮಿಡಿ ಶ್ರೀ

Pinterest LinkedIn Tumblr

nidumamidi_____ಬೆಂಗಳೂರು, ನ. 15: ರಾಜ್ಯದಲ್ಲಿ ಸತ್ಯ ಶೋಧಕರು ಹಾಗೂ ಪ್ರಗತಿಪರರು ಸಾವಿನ ಭಯದಲ್ಲಿ ಜೀವಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದ್ದಾರೆ.

ರಂಗಸಮುದ್ರ ಹಾಗೂ ಗಾರ್ಗಿ ಪ್ರಕಾಶನ ವತಿಯಿಂದ ನಗರದ ಕಸಾಪದಲ್ಲಿ ಆಯೋಜಿಸಿದ್ದ ಪ್ರೊ.ನಾರಾಯಣ ಶೆಟ್ಟಿರವರ ‘ಸತ್ಯಂ ಬ್ರೂಯಾತ್…’ ಮತ್ತು ‘ಮೇಘದೂತ ದರ್ಶನಂ’ ಕೃತಿಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.ರಾಜ್ಯದಲ್ಲಿ ಸಣ್ಣ ಸಣ್ಣ ವಿಚಾರಗಳು ವಿವಾದಕ್ಕೆ ಕಾರಣವಾಗುತ್ತಿವೆ. ಸಮಾಜದಲ್ಲಿ ಮುಕ್ತ ವಾತಾವರಣ ಇಲ್ಲದಂತಾಗಿದ್ದು, ಜನತೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಭಯ ಪಡುತ್ತಿದ್ದಾರೆ. ಇಂತಹ ಪ್ರಕ್ಷುಬ್ಧ ವಾತಾವರಣವನ್ನು ತಿಳಿಗೊಳಿಸುವಂತಹ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕೆಂದು ಅವರು ಅಭಿಪ್ರಾಯಿಸಿದರು.

ಮೂಲಭೂತವಾದಿಗಳು ವಿಜೃಂಭಿಸುತ್ತಿರುವ ಈ ಹೊತ್ತಿನಲ್ಲಿ ಪ್ರಗತಿಪರರ ಮತ್ತಷ್ಟು ಗಟ್ಟಿಗೊಳ್ಳಬೇಕು. ಮೂಲಭೂತವಾದಿಗಳ ಯಾವುದೇ ಮೂಲಾಜಿಗೆ ಒಳಗಾಗದೆ ಸತ್ಯ ಶೋಧನೆಯಲ್ಲಿ ತೊಡಗಬೇಕು. ಕ್ರಮೇಣ ಪ್ರಗತಿಪರರು ಒಟ್ಟಾಗುತ್ತಾ ಹೋದರೆ ಮೂಲಭೂತವಾದಿಗಳ ಉಪಟಳ ಕಡಿಮೆಯಾಗುತ್ತದೆ ಎಂದು ಅವರು ತಿಳಿಸಿದರು.ಸತ್ಯಶೋಧನೆಯಲ್ಲಿ ತೊಡಗುವವರು ತೀವ್ರವಾದಿಗಳಾಗ ಬೇಕಾಗಿಲ್ಲ. ಸತ್ಯವನ್ನು ಬೇರೆ, ಬೇರೆ ಮಾರ್ಗಗಳ ಮೂಲಕ ಹೇಳುವಂತಹ ಅವಕಾಶವಿದೆ. ಅದನ್ನು ಸಮರ್ಥವಾಗಿ ಬಳಸಿಕೊಂಡು ಜನತೆಯನ್ನು ಚಿಂತನೆಗೆ ಹಚ್ಚುವಂತಹ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಜನತೆಯನ್ನು ಉದ್ರೇಕಿಸುವಂತಹ ಕೆಲಸವಾಗಬಾರದೆಂದು ನಿಡುಮಾಮಿಡಿ ಸ್ವಾಮೀಜಿ ತಿಳಿಸಿದರು.ಹಿರಿಯ ಸಾಹಿತಿ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿ, ಜಾತಿ, ಭಾಷೆ ಹಾಗೂ ಅಂತಸ್ತು ಈ ಮೂರರಲ್ಲಿ ಎರಡನ್ನು ಹೊಂದಿರುವವರು ಮೇಲ್ಜಾತಿಯವರೇ ಆಗಿರುತ್ತಾರೆ ಎಂದು ಲೋಹಿಯಾ ಹೇಳಿದ್ದರು ಅದು ಇಂದಿಗೂ ಬದಲಾಗದೆ ಹಾಗೆಯೇ ಉಳಿದಿದೆ. ಇದನ್ನು ಹೋಗಲಾಡಿಸಲು ಸರಕಾರಗಳು ಪ್ರಯತ್ನಿಸುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.ಜನತೆಗೆ ಅರ್ಥವಾಗದ ಭಾಷೆಯಲ್ಲಿ ವ್ಯವಹರಿಸುವ ಮೂಲಕ ಜ್ಞಾನವನ್ನು ಮುಚ್ಚಿಡುವ ಪ್ರಯತ್ನ ನಡೆಯುತ್ತಿದೆ. ಹಿಂದೆ ವೈದಿಕರು ಸಂಸ್ಕೃತವನ್ನು ತಮ್ಮಲ್ಲಿಯೇ ಬಚ್ಚಿಟ್ಟುಕೊಂಡು ಜನತೆಗೆ ದ್ರೋಹ ಬಗೆದರು. ಈಗ ಆ ಸ್ಥಾನವನ್ನು ಇಂಗ್ಲಿಷ್ ಪಡೆದು ಬಹುಸಂಖ್ಯಾತರಿಗೆ ತೀವ್ರ ಸಮಸ್ಯೆಯನ್ನು ಒಡ್ಡುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ.ಚಂದ್ರಶೇಖರ ಪಾಟೀಲ ವಹಿಸಿದ್ದರು. ಈ ವೇಳೆ ಸಂಸ್ಕೃತ ವಿವಿ ಪ್ರೊ.ಶ್ರೀನಿವಾಸ ವರಖೇಡಿ, ಡಾ.ಸಿ.ಎಸ್.ಹನುಮಂತಪ್ಪ, ಲೇಖಕ ಪ್ರೊ.ನಾರಾಯಣ ಘಟ್ಟ ಉಪಸ್ಥಿತರಿದ್ದರು.

Write A Comment