ಕರ್ನಾಟಕ

ವಿಜ್ಞಾನಿಗಳಿಂದ ಚಿರತೆಗಳ ಮಹತ್ವದ ಮಾಹಿತಿ ನೀಡಬಲ್ಲ ವರದಿ ಬಿಡುಗಡೆ

Pinterest LinkedIn Tumblr

chirateಬೆಂಗಳೂರು, ನ.15- ಮಾಧ್ಯಮಗಳು ಭಾರತದಲ್ಲಿ ಚಿರತೆಗಳ ಚದುರುವಿಕೆ ಕುರಿತಂತೆ ವಿಜ್ಞಾನಿಗಳಿಗೂ ಮಹತ್ವದ ಮಾಹಿತಿ ನೀಡಬಲ್ಲವು. ಇತ್ತೀಚಿನ ಅಧ್ಯಯನದಲ್ಲಿ ವೈಲ್ಡ್ ಲೈಫ್ ಕನ್ಸರ್ವೇಷನ್ ಸೊಸೈಟಿ ಆಫ್ ಇಂಡಿಯದ ವಿಜ್ಞಾನಿಗಳು ಪತ್ರಿಕಾ ಮಾಧ್ಯಮದ ವರದಿಗಳ ವಿನೂತನ ಬಳಕೆ ಮಾಡಿಕೊಂಡು ಚಿರತೆಯಂತಹ ವನ್ಯಜೀವಿಯ ಪ್ರಾದೇಶಿಕ ಚದುರುವಿಕೆಯನ್ನು ಗಮನಿಸಿ, ಕರ್ನಾಟಕದ ರಕ್ಷಿತ ಪ್ರದೇಶದ ಹೊರಗಿರುವ ಚಿರತೆಗಳ ಬದುಕಿನ ಬಗ್ಗೆ ಕುತೂಹಲಕಾರಿ ಅಂಶಗಳನ್ನು ಹೊರ ತಂದಿದ್ದಾರೆ.   ಮಾರ್ಚ್ 2013-ಎಪ್ರಿಲ್ 2014ರ ಅವಧಿಯಲ್ಲಿ 175 ತಾಲ್ಲೂಕುಗಳಲ್ಲಿ ನಡೆದ ಮಾನವ-ಚಿರತೆ ಮುಖಾಮುಖಿಯಾದ 245 ಪ್ರತ್ಯೇಕ ಘಟನೆಗಳನ್ನು ಈ ಅಧ್ಯಯನವು ಪರಿಶೀಲಿಸಿತು.

ಚಿರತೆಗಳ ಚದುರುವಿಕೆ, ಮಾನವನ ಪ್ರದೇಶಗಳಲ್ಲಿ ಚಿರತೆ ಇರುವಿಕೆಯನ್ನು ನಿಶ್ಚಯಿಸುವ ಅಂಶಗಳು, ಜಾನುವಾರು-ಮಾನವ ಮೇಲೆ ಚಿರತೆ ದಾಳಿ ಮಾಡಲು ಕಾರಣವಾದ ಆಯಾಮ ಮತ್ತು ಸ್ವರೂಪಗಳು, ಮತ್ತು ಕರ್ನಾಟಕದಲ್ಲಿನ ವಿಶಾಲವಾದ ಮಾನವ ಬಳಕೆಯ ಪ್ರದೇಶಗಳಲ್ಲಿ ಚಿರತೆ ಇರುವಿಕೆಯಿಂದಲೇ ಉಂಟಾಗುವ ಪರಿಣಾಮಗಳನ್ನು ವಿಜ್ಞಾನಿಗಳು ಪರಿಶೀಲಿಸಿದರು.  ಚಿರತೆಗಳನ್ನು ಸೆರೆಹಿಡಿಯುವುದು ಮತ್ತು ಸ್ಥಳಾಂತರ ಮಾಡುವ ಪ್ರಸ್ತುತ ನಿರ್ವಹಣಾ ಪ್ರಯತ್ನಗಳನ್ನೂ ಕೂಡ ಈ ಅಧ್ಯಯನವು ವಿಮರ್ಶಿಸಿತು.  ಅಧ್ಯಯನದ ಪ್ರಕಾರ, ರಾಷ್ಟ್ರೀಯ ಉದ್ಯಾನ ಮತ್ತು ವನ್ಯಜೀವಿಧಾಮಗಳನ್ನು ಹೊರತುಪಡಿಸಿ, ರಾಜ್ಯದ ಇತರ ಭೂಪ್ರದೇಶಗಳಲ್ಲಿ ಪ್ರಚಲಿತ 84,000 ಚದರ ಕಿ.ಮೀ (47%) ವ್ಯಾಪ್ತಿಯಲ್ಲಿ ಚಿರತೆಗಳು ವಾಸಿಸುತ್ತಿವೆ. ಮಾನವ ಬಳಿಕೆ ಪ್ರದೇಶಗಳಲ್ಲಿ ನಿರ್ಭಾದಿತವಾಗಿ ಓಡಾಡುವ ನಾಯಿಗಳು, ಸಸ್ಯಾವರಣ, ಕಲ್ಲು-ಗುಡ್ಡ ಪ್ರದೇಶ ಮತ್ತು ನೀರಾವರಿ ಪ್ರದೇಶಗಳು ಚಿರತೆಯ ಆವಾಸಕ್ಕೆ ಅನುಕೂಲವಾದವು.

ಇದರಲ್ಲಿ ವಿಸ್ಮಯಕಾರಿ ಅಂಶವೆಂದರೆ, ಜಾನುವಾರುಗಳ ಸಾಂದ್ರತೆಗೂ ಚಿರತೆಯ ಅಸ್ತಿತ್ವಕ್ಕೂ ಸಂಬಂಧವಿರಲಿಲ್ಲ.  ಚಿರತೆ ಸೆರೆಹಿಡಿಯುವುದೇ ಪರಿಹಾರ ಎಂಬ ಜನಾಭಿಪ್ರಾಯಕ್ಕೆ ವಿರುದ್ಧವಾಗಿ, ವಿಶ್ಲೇಷಣೆಯ ಪ್ರಕಾರ ಚಿರತೆ ಸ್ಥಳಾಂತರ ಹೆಚ್ಚಾದಂತೆ ಮಾನವ-ಜಾನುವಾರು ಮೇಲೆ ಚಿರತೆಯು ದಾಳಿ ಮಾಡುವ ಸಂಭವವೂ ಹೆಚ್ಚಾಗುವುದು. 14 ತಿಂಗಳ ಅಧ್ಯಯನ ಅವಧಿಯಲ್ಲಿ ಮನುಷ್ಯನ ಮೇಲಿನ ದಾಳಿಗಳು ಅಪರೂಪವಾಗಿದ್ದು, ದಾಖಲಾದ 32 ಘಟನೆಗಳಲ್ಲಿ, 3 ಘಟನೆಗಳು ಮಾರಕವಾಗಿದ್ದವು. ಸಂಘರ್ಷ ಕಡಿಮೆ ಮಾಡುವ ನಿರ್ವಹಣಾ ಕ್ರಿಯೆಗಳಲ್ಲಿ ಚಿರತೆ ಸೆರೆ ಹಿಡಿದು ಸ್ಥಳಾಂತರಿಸಿದ 56 ಘಟನೆಗಳು ದಾಖಲಾಗಿದ್ದು, ಇದರಲ್ಲಿ ಶೇ. 91ರಷ್ಟು  ಘಟನೆಗಳು ಜಾನುವಾರುಗಳ ಮೇಲಿನ ಹಲ್ಲೆಯಿಂದಾಗಿ ಅಥವಾ ಕೇವಲ ಚಿರತೆ ಕಾಣಿಸಿಕೊಂಡಿದ್ದಕ್ಕೆ ಮಾತ್ರ ನಡೆದ ಪ್ರತಿಕ್ರಿಯೆಗಳು.

ಚಿರತೆ ಸೆರೆ ಹಿಡಿದ ಈ ಪ್ರಕರಣಗಳು, 2001ರ ಪರಿಸರ ಮತ್ತು ಅರಣ್ಯ ಸಚಿವಾಲಯ ಹೊರತಂದಿರುವ ಮಾರ್ಗಸೂಚಿಯನ್ನು ಉಲ್ಲಂಘಿಸುತ್ತದೆ ಎಂದು ಅಧ್ಯಯನವು ಹೇಳುತ್ತದೆ. ಈ ಮಾರ್ಗಸೂಚಿ ಪ್ರಕಾರ, ಪ್ರತಿ ರಾಜ್ಯದಲ್ಲಿ ಮಾನವ-ಜಾನುವಾರು ಜೀವ ರಕ್ಷಣೆಗಾಗಿ ಪ್ರತಿಕ್ರಿಯಾ ನಿರ್ವಹಣಾ ಕ್ರಮಗಳನ್ನು ತೂರೆದು ಮುಂಜಾಗ್ರತಾ ಕ್ರಮಗಳನ್ನು ಕೈಗೂಳ್ಳಬೇಕು. ಹಾಗೆಯೇ ಈ ಪ್ರಕರಣಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ನಿಯಮಗಳನ್ನೂ ಉಲ್ಲಂಘಿಸಿರುವ ಸಾಧ್ಯತೆಗಳಿವೆ. ಏಕೆಂದರೆ, ಚಿರತೆಯು ಮನುಷ್ಯನಿಗೆ ಅಪಾಯಕಾರಿಯಾದಲ್ಲಿ ಮಾತ್ರ ಅದನ್ನು ಸೆರೆಹಿಡಿಯಬಹುದು, ಕೇವಲ ಕಾಣಿಸಿಕೂಂಡಿದ್ದಕ್ಕೆ ಮಾತ್ರವಲ್ಲ ಎಂದು ಕಾಯ್ದೆಯು ಹೇಳುತ್ತದೆ.

ಈ ಅಧ್ಯಯನದಲ್ಲಿ ಹೊಲ ಗದ್ದೆಗಳಲ್ಲಿ 19 ಚಿರತೆ ಮರಿಗಳು ಸಿಕ್ಕಿದ್ದು, ಸಂತಾನೋತ್ಪತ್ತಿ ಮಾಡುತ್ತಿರುವ ಚಿರತೆಗಳ ವಾಸವನ್ನು ಖಚಿತ ಪಡಿಸುವುದರ ಜೊತೆಗೆ ಚಿರತೆಗಳು ದಾರಿ ತಪ್ಪಿ ಬಂದಿವೆ ಎಂಬ ಪ್ರಸ್ತುತ ನಿರ್ವಹಣಾ ಸಿದ್ಧಾಂತಗಳಿಗೆ ಪ್ರತಿಯಾಗಿ, ಮಾನವಪ್ರದೇಶದ ಭಾಗದಲ್ಲಿಯೂ ವ್ಯಾಪಕವಾಗಿ ಚಿರತೆಗಳು ವಾಸವಾಗಿವೆ ಎಂಬುದನ್ನು ಧೃಢಗೊಳಿಸುತ್ತದೆ.  ಮಾನವಪ್ರದೇಶದಲಿರುವ ಚಿರತೆಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ನಮ್ಮ ಚಿಂತನೆ ಮತ್ತು ಪ್ರವೃತ್ತಿಯಲ್ಲಿ ಗಮನಾರ್ಹ ಬದಲಾವಣೆ ಅಗತ್ಯವಿದೆ ಎನ್ನುವುದು ಈ ಅಧ್ಯಯನದಿಂದ ತಿಳಿದುಬರುವುದು. ಸೆರೆ ಹಿಡಿದು ಸ್ಥಳಾಂತರ ಮಾಡುವ ಪ್ರಸ್ತುತ ಪ್ರತಿಕ್ರಿಯಾ ಚಿಂತನೆಯಿಂದ ಜನ ಮತ್ತು ಜಾನುವಾರುಗಳ ಜೀವ ಉಳಿಸಲು ಮುಂಜಾಗ್ರತಾ ಕ್ರಮಗಳಿಗೆ ಒತ್ತು ಕೊಡಬೇಕು  ಎಂದು ಲೇಖಕರು ಕರೆಕೊಟ್ಟಿದ್ದಾರೆ. ಜನರ ತಿಳುವಳಿಕೆ ಹೆಚ್ಚಿಸಲು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ನಡೆಸಿದರೆ ಚಿರತೆ ಅಸ್ತಿತ್ವವನ್ನು ಜನರು ಒಪ್ಪಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಲೇಖಕರು ಮನವಿ ಮಾಡುತ್ತಾರೆ.

ಮಾನವನ ಒಪ್ಪಿಗೆಯಿಂದಾಗಿ ಮಾನವಪ್ರದೇಶದಲ್ಲಿ ಮಾಂಸಾಹಾರಿ ಪ್ರಾಣಿಗಳ ವ್ಯಾಪಕ ಪುನರುತ್ಥಾ ನವಾಗಿರುವುದು ಅವುಗಳ ಪರಿಸರ ಕುರಿತು ತಿಳುವಳಿಕೆ ನೀಡುವಂತಹ ಸಂಶೋಧನಾ ಕಾರ್ಯಕ್ರಮಗಳನ್ನಾಧರಿಸಿದ ಸಾಮರ್ಥ್ಯ ಪಡೆದಂತಹ ನಿರ್ವಹಣಾ ಯೋಜನೆಗಳು ಬೇಕಾಗಿವೆ ಎನ್ನುತ್ತಾರೆ ಸೈನ್ಸ್-ಏಷ್ಯಾ ವೈಲ್ಡ್‌ಲೈಫ್ ಕನ್‌ರ್ವೇಷನ್ ಸೊಸೈಟಿ ನಿರ್ದೇಶಕ ಡಾ.ಉಲ್ಲಾಸ್ ಕಾರಂತ್.

Write A Comment