ಕರ್ನಾಟಕ

ಪ್ರತಿವರ್ಷ ಮಕ್ಕಳ ಹಬ್ಬ ಆಚರಣೆ; ಹೆಣ್ಣು ಮಕ್ಕಳ ರಕ್ಷಣೆಗೆ ಸಂರಕ್ಷಣಾ ನೀತಿ ಜಾರಿಗೆ ಚಿಂತನೆ; ಸಚಿವೆ ಉಮಾಶ್ರೀ

Pinterest LinkedIn Tumblr

sanmana-fi

ಬೆಂಗಳೂರು, ನ.14: ಹೆಣ್ಣು ಮಕ್ಕಳ ರಕ್ಷಣೆಗಾಗಿ ಬಾಲಕಿಯರ ನೀತಿ ಹಾಗೂ ಶಾಲೆಗಳಲ್ಲಿ ಮಕ್ಕಳ ರಕ್ಷಣೆಗೆ ಸಂರಕ್ಷಣಾ ನೀತಿಯನ್ನು ಜಾರಿಗೆ ತರಲು ಸರಕಾರ ಮುಂದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಹೇಳಿದ್ದಾರೆ.

ಶನಿವಾರ ಮಕ್ಕಳ ದಿನಾಚರಣೆ ಅಂಗವಾಗಿ ಬೆಂಗಳೂರಿನ ಬಾಲ ಭವನದಲ್ಲಿ ಏರ್ಪಡಿಸಿದ್ದ ‘ಶೌರ್ಯ ಪ್ರಶಸ್ತಿ ಪ್ರದಾನ’ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶಾಲೆಗಳಲ್ಲಿ ಮಕ್ಕಳ ರಕ್ಷಣೆ ಹೇಗಿರಬೇಕು ಎನ್ನುವ ಕುರಿತು ನವೆಂಬರ್ 27 ರಂದು ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಮುಕ್ತ ಸಮಾಲೋಚನೆ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಪೋಷಕರು, ತಜ್ಞರು ಸಲಹೆ ಅಭಿಪ್ರಾಯಗಳನ್ನು ನೀಡಬಹುದು ಎಂದು ಮುಕ್ತ ಆಹ್ವಾನ ನೀಡಿದರು.

ಸಾರ್ವಜನಿಕರಿಂದ ವ್ಯಕ್ತವಾಗುವ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಆ ಬಳಿಕ ಶಾಲೆ ಮತ್ತು ಮನೆಯಿಂದ ಹೊರಗೆ ಮಕ್ಕಳ ರಕ್ಷಣೆ ಹೇಗಿರಬೇಕು ಎನ್ನುವ ಕುರಿತು ಸಮಗ್ರ ನೀತಿಯನ್ನು ರಾಜ್ಯ ಸರಕಾರ ಜಾರಿಗೆ ತರಲಿದೆ ಎಂದರು.

ಮಕ್ಕಳಲ್ಲಿ ನಮ್ಮತನ, ಭಾಷೆ, ಸಂಸ್ಕೃತಿ ಬಿಂಬಿಸುವ ಕೆಲಸ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಪೋಷಕರು ಕಟಿಬದ್ಧರಾಗುವ ಅಗತ್ಯವಿದೆ. ಅಲ್ಲದೆ, ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕೆಂದು ಹೇಳಿದರು. ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರೂ ಅವರ ಜನ್ಮದಿನಾಚರಣೆಯನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ನೆಹರೂ ಅವರು ಮಕ್ಕಳನ್ನು ಅತಿಯಾಗಿ ಪ್ರೀತಿಸುತ್ತಿದ್ದರು ಎಂದರು.

ಮಕ್ಕಳಲ್ಲಿ ಉತ್ತಮ ವಾತಾವರಣವನ್ನು ಮೂಡಿಸುವ ನಿಟ್ಟಿನಲ್ಲಿ ಸರಕಾರ ಈ ವರ್ಷದಿಂದ ಮಕ್ಕಳ ಹಬ್ಬವನ್ನು ಆಚರಿಸಲು ನಿರ್ಧರಿಸಲಾಗಿದೆ. ಮಕ್ಕಳಲ್ಲಿ ಜಾನಪದ, ಸಾಹಿತ್ಯ, ಕ್ರೀಡೆ ಸೇರಿದಂತೆ ವಿವಿಧ ಕಲೆಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ಅದರಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಸರಕಾರದ ಉದ್ದೇಶ ಎಂದರು.

ಮಕ್ಕಳ ಧೈರ್ಯ, ಸಾಹಸ, ಪ್ರತಿಭೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಮಕ್ಕಳು ಪ್ರಶಸ್ತಿ ಪಡೆಯುತ್ತಿರುವುದು ಇನ್ನಷ್ಟು ಮಕ್ಕಳಿಗೆ ಸ್ಫೂರ್ತಿಯಾಗಲಿ. ಮಕ್ಕಳ ಉತ್ತಮ ಭವಿಷ್ಯ ಪಾಲಕರ ಕೈಯಲ್ಲಿದೆ. ಅದನ್ನು ರೂಪಿಸುವ ನಿಟ್ಟಿನಲ್ಲಿ ಪೋಷಕರು ಮುಂದಾಗಬೇಕೆಂದು ಹೇಳಿದರು.

Write A Comment