ರಾಷ್ಟ್ರೀಯ

ದೇಶಕ್ಕೆ ನೆಹರೂ ಕೊಡುಗೆ ಅಪಾರ: ರಾಜನಾಥ್ ಸಿಂಗ್

Pinterest LinkedIn Tumblr

Raja_____ಹೊಸದಿಲ್ಲಿ, ನ.14: ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಶನಿವಾರ ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂರವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ನೆಹರೂರವರ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುವ ಹಾಗೂ ರಾಷ್ಟ್ರವನ್ನು ಕಟ್ಟುವ ಉದ್ದೇಶವನ್ನು ಯಾರೂ ಸಂಶಯಿಸುವಂತಿಲ್ಲವೆಂದು ಅವರು ಹೇಳಿದ್ದಾರೆ.

ತಮಗೆ ನೆಹರೂರವರೊಂದಿಗೆ ಅನೇಕ ವಿಷಯಗಳಲ್ಲಿ ಭಿನ್ನಾಭಿಪ್ರಾಯವಿದೆ. ಅವರ ನೀತಿಗಳ ಬಗ್ಗೆ ತಮಗೆ ಭಿನ್ನಮತವಿದೆ. ಆದರೆ, ತಾವವರ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುವ ಹಾಗೂ ರಾಷ್ಟ್ರವನ್ನು ಕಟ್ಟುವ ಉದ್ದೇಶವನ್ನು ಸಂಶಯಿಸುವಂತಿಲ್ಲವೆಂದು ನೆಹರೂರವರ 125ನೆ ಜಯಂತಿಯ ಸಂದರ್ಭ ಏರ್ಪಡಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ರಾಜನಾಥ್ ತಿಳಿಸಿದರು. ತಾನೆಂದೂ ನೆಹರೂರವರನ್ನು ‘ರಾಜಕೀಯದ ಕನ್ನಡಿಯಲ್ಲಿ ಕಂಡಿರಲಿಕ್ಕಿಲ್ಲ. ಆದರೆ, ಸದಾ ‘ರಾಷ್ಟ್ರೀಯ ಕನ್ನಡಿಯಲ್ಲಿ’ ಕಂಡಿದ್ದೇನೆಂದು ಅವರು ಹೇಳಿದರು.

ನೆಹರೂರವರಂತಹ ನಾಯಕರ ಅಗಾಧ ಕೊಡುಗೆಗಳಿಂದಾಗಿ ಭಾರತವಿಂದು ಬೃಹತ್ ಸಂಸತ್ತು, ಸಮರ್ಥ ಅಧಿಕಾರಶಾಹಿ, ಸ್ವತಂತ್ರ ನ್ಯಾಯಾಂಗ ಹಾಗೂ ನಿರ್ಭೀತ ಮಾಧ್ಯಮಗಳನ್ನು ಹೊಂದಿದೆ. ನೆಹರೂರವರಂತಹ ನಾಯಕರ ಕೊಡುಗೆಯಿಂದಾಗಿಯೇ ಭಾರತವು ವಿಶ್ವದಲ್ಲೇ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೆನಿಸಿದೆ. ಭಾರತವೀಗ ಪ್ರಜಾಪ್ರಭುತ್ವದ ಯಶಸ್ಸನ್ನು ಆಚರಿಸುತ್ತಿದೆಯೆಂದು ರಾಜನಾಥ್ ಶ್ಲಾಘಿಸಿದರು.

ನೆಹರೂರವರ ನಾಯಕತ್ವದಲ್ಲೇ ಭಾರತವು ಭಿಲಾಯಿ, ರೂರ್ಕೆಲಗಳಲ್ಲಿ ಭಾರೀ ಕೈಗಾರಿಕೆಗಳನ್ನು, ಐಐಟಿ ಹಾಗೂ ಐಐಎಂಗಳಂತಹ ಅಗ್ರಮಾನ್ಯ ಶಿಕ್ಷಣ ಸಂಸ್ಥೆಗಳನ್ನು ಹಾಗೂ ಅಣುಸ್ಥಾವರಗಳನ್ನು ಸ್ಥಾಪಿಸಿದೆ. ನೆಹರೂ ಕೈಗಾರಿಕೆಗಳಿಗೆ ಒತ್ತು ನೀಡಿದ್ದರೂ, ದೇಶಕ್ಕೆ ಕೃಷಿಯೇ ಪ್ರಧಾನವೆಂದು ಅವರು ತಿಳಿಸಿದ್ದರು. ‘‘ತಾನು ಕೈಗಾರಿಕೆಗಾಗಿದ್ದೇನೆ. ತಾನು ಉಕ್ಕು ಸ್ಥಾವರಗಳಿಗಾಗಿದ್ದೇನೆ. ಆದರೆ, ಕೃಷಿಯು ಕೈಗಾರಿಕೆಗಳಿಗಿಂತ ಎಷ್ಟೋ ಪಾಲು ಪ್ರಧಾನವಾದುದು’’ ಎಂದು ನೆಹರೂ ಹೇಳಿದ್ದರೆಂದು ಅವರು ತಿಳಿಸಿದರು.

ಭಾರತದ ಮಕ್ಕಳು ಸರಿಯಾಗಿ ವಿದ್ಯಾವಂತರಾದರೆ ಮಾತ್ರ ಅದು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬಹುದೆಂದು ನೆಹರೂ ಅರಿತಿದ್ದರು. ಅದಕ್ಕಾಗಿಯೇ ಅವರು ಮಕ್ಕಳಿಗೆ ಸೂಕ್ತ ಶಿಕ್ಷಣ ಹಾಗೂ ಮಾರ್ಗದರ್ಶನಕ್ಕಾಗಿ ಕ್ರಮ ಕೈಗೊಂಡರು. ನೆಹರೂ ಅವರ ಕಾಲದ ಅತ್ಯುನ್ನತ ವಿಶ್ವ ನಾಯಕರಾಗಿದ್ದರು. ಅವರ ಧೈರ್ಯದ ನಾಯಕತ್ವದಲ್ಲೇ ಅಲಿಪ್ತ ಚಳವಳಿ ಆರಂಭವಾಗಿತ್ತೆಂದು ರಾಜನಾಥ್ ಸ್ಮರಿಸಿದರು.

ಆರ್ಥಿಕತೆ, ವಿಜ್ಞಾನ ಮತ್ತು ತಂತ್ರಜ್ಞಾನಗಳ ಬಗ್ಗೆ ನೆಹರೂರವರ ನೀತಿಗಳು ಶ್ಲಾಘನೀಯವಾಗಿದೆ. ಇಂದು ಹೆಚ್ಚು ಪ್ರಸ್ತುತವೆನಿಸಿರುವ ಸಾರ್ವಜನಿಕ-ಖಾಸಗಿ ಭಾಗಿದಾರಿಕೆಯ ಯೋಜನೆಗಳನ್ನು ಅವರೇ ಮೊದಲು ಆರಂಭಿಸಿದರೆಂದು ರಾಜನಾಥ್ ತಿಳಿಸಿದರು.

Write A Comment