ಕರ್ನಾಟಕ

ಅಧಿಕಾರಕ್ಕೆ ಬಂದ 24 ತಾಸಲ್ಲಿ ರೈತರ ಸಾಲ ಮನ್ನಾ: ಎಚ್‌ಡಿಕೆ

Pinterest LinkedIn Tumblr

h-d-kumaraswamy-2ಹಾವೇರಿ/ಹುಬ್ಬಳ್ಳಿ: ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ತಂದರೆ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡಲಾಗುವುದು. ಸಾಲ ಮತ್ತು ಬಡ್ಡಿಯ ಚಿಂತೆ ಬಿಟ್ಟು ನೆಮ್ಮದಿಯಿಂದ ಜೀವನ ನಡೆಸಿ. ನಾನಿದ್ದೇನೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ರೈತರಿಗೆ ಅಭಯ ಹಸ್ತ ನೀಡಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಆತ್ಮಹತ್ಯೆಯ ಪ್ರಯತ್ನ ಮಾಡಬಾರದು. ಸಾಲದ ಚಿಂತೆ ಮಾಡಬಾರದು. ಈ ನಿಟ್ಟಿನಲ್ಲಿ ಅವರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಕೈಗೊಳ್ಳಲು ಜೆಡಿಎಸ್‌ ಗಂಭೀರ ಚಿಂತನೆ ನಡೆಸಿದೆ ಎಂದರು.

ಯುವಕರ ಪಡೆ ರಚನೆ:
ರೈತರ ಸ್ಥಿತಿಗತಿ ಅಧ್ಯಯನ ಹಾಗೂ ಆತ್ಮಹತ್ಯೆ ತಡೆಗಾಗಿ ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 200-300 ಯುವಕರ ತಂಡ ರಚಿಸಲಾಗುವುದು. ಈ ಪಡೆ ಪ್ರತಿ ರೈತರ ಮನೆಗೆ ತೆರಳಿ ಅವರು ಹೊಂದಿದ ಹೊಲ, ಸಾಲದ ಪ್ರಮಾಣ ಇನ್ನಿತರ ಮಾಹಿತಿ ಸಂಗ್ರಹಿಸಲಿದೆ. ಅವರಲ್ಲಿ ಆತ್ಮವಿಶ್ವಾಸ ತುಂಬಲಿದೆ ಎಂದ ಅವರು, ರೈತರು ಆತ್ಮಹತ್ಯೆ ಮಾಡಿಕೊಂಡು ಕುಟುಂಬವನ್ನು ಅನಾಥವನ್ನಾಗಿ ಮಾಡಬಾರದು. ರೈತರು ಬಯಸಿದರೆ ಅವರ ಪರವಾಗಿ ಅನ್ನ, ನೀರು ಬಿಟ್ಟು ಸರ್ಕಾರದ ಎದುರು ದೇಹದಂಡನೆ ಮಾಡಿಕೊಳ್ಳಲು ಸಿದ್ಧವಿರುವುದಾಗಿ ತಿಳಿಸಿದರು.

ರೈತರ ಸಂಪೂರ್ಣ ಸಾಲಮನ್ನಾ ಮಾಡಿ ಅವರನ್ನು ಋಣಮುಕ್ತರನ್ನಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ರೈತರ ಆತ್ಮಹತ್ಯೆ ತಡೆಯುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.

ರಾಹುಲ್‌ ಗಾಂಧಿ ರಾಜ್ಯಕ್ಕೆ ಬಂದಾಗ ಸಂಪೂರ್ಣ ಸಾಲಮನ್ನಾ ಮಾಡುತ್ತಾರೆಂಬ ನಿರೀಕ್ಷೆ ಇತ್ತು. ರಾಹುಲ್‌ ಕಾರ್ಯಕ್ರಮಕ್ಕಾಗಿ ಸರ್ಕಾರ ಮಾಡಿದ ಖರ್ಚಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಎಲ್ಲ ಕುಟುಂಬಗಳಿಗೆ ಪರಿಹಾರ ನೀಡಬಹುದಿತ್ತು. ಸುಸ್ತಿಬಡ್ಡಿ ಮನ್ನಾ ಎಂದು ಘೋಷಿಸಿದ್ದು, ಇದು ಕೇವಲ ಜನರಿಗೆ ಟೋಪಿ ಹಾಕುವ ಕಾರ್ಯಕ್ರಮ ಅಷ್ಟೇ ಎಂದು ಕುಟುಕಿದರು.

ಮಹದಾಯಿ ಯೋಜನೆಯಲ್ಲಿ ಪ್ರಧಾನಿ ಮಧ್ಯ ಪ್ರವೇಶ ಹಾಗೂ ರಾಜ್ಯದಲ್ಲಿ ರೈತರ ಬೆಳೆಹಾನಿಗೆ ಪರಿಹಾರಕ್ಕೆ ಸಂಬಂಧಿಸಿ ಕೇಂದ್ರ ಸರಕಾರ ಸ್ಪಷ್ಟ ಕ್ರಮ ಕೈಗೊಳ್ಳದಿದ್ದರೆ, ಬಿಹಾರದಲ್ಲಿ ನೀಡಿದ ರೀತಿಯಲ್ಲಿ ಕರ್ನಾಟಕದಲ್ಲೂ ಬಿಜೆಪಿಗೆ ಜನ ಪೆಟ್ಟು ನೀಡೋದು ಖಚಿತ ಎಂದು ಭವಿಷ್ಯ ನುಡಿದರು.

ಪರಿಹಾರ ವಿತರಣೆ:
ಈ ನಡುವೆ ಹಾವೇರಿಯಲ್ಲಿ ರೈತ ಸಮಾವೇಶ ನಡೆಸಿದ ಕುಮಾರಸ್ವಾಮಿ, ಆತ್ಮಹತ್ಯೆ ಮಾಡಿಕೊಂಡ 70 ರೈತ ಕುಟುಂಬಗಳಿಗೆ ಪಕ್ಷದ ವತಿಯಿಂದ ತಲಾ 50 ಸಾವಿರ ರೂ. ಪರಿಹಾರ ಧನ ವಿತರಿಸಿದರು.

ಇದೇ ವೇಳೆ ವೇದಿಕೆ ಮೇಲೆ ತೆರಳಿದ ಬಾಲಕಿಯೊಬ್ಬಳು ತಮ್ಮ ತಂದೆ ದ್ಯಾಮಪ್ಪ ಚೂರಿ 2012ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ ಈವರೆಗೆ ತಮ್ಮ ಕುಟುಂಬಕ್ಕೆ ಸರ್ಕಾರ ಪರಿಹಾರವನ್ನೇ ಕೊಟ್ಟಿಲ್ಲ ಎಂದು ಕುಮಾರಸ್ವಾಮಿಯವರ ಗಮನ ಸೆಳೆದಳು. ಆಗ ಕುಮಾರಸ್ವಾಮಿ ಆ ಕುಟುಂಬಕ್ಕೆ 50 ಸಾವಿರ ರೂ. ಪರಿಹಾರ ನೀಡಿದರು. ವೇದಿಕೆಯಲಿದ್ದ ಶಾಸಕ ಡಿ.ಸಿ.ತಮ್ಮಣ್ಣ ಬಾಲಕಿ ವಿದ್ಯಾಭ್ಯಾಸದ ಖರ್ಚನ್ನು ಭರಿಸುವುದಾಗಿ ಹೇಳಿದರು.

ಮೇಕ್‌ ಇನ್‌ ಇಂಡಿಯಾ
ಈಗ ಡೈ ಇನ್‌ ಇಂಡಿಯಾ
ಬಿಹಾರದಲ್ಲಿ ನಿತೀಶ್‌ ಕುಮಾರ್‌ ಅವರನ್ನು ಮುಳುಗಿಸಿ ಬಿಡುತ್ತೇವೆ ಎಂದು ಬಿಜೆಪಿ ನಾಯಕರು ಶಪಥ ಮಾಡಿದ್ದರು. ಇದೀಗ ಮುಳಗಿದವರು ಯಾರು ಎಂಬುದನ್ನು ಅಲ್ಲಿನ ಫ‌ಲಿತಾಂಶ ತೋರಿಸಿದೆ. ಫ‌ಲಿತಾಂಶದಿಂದ ನಾವೇ ಎಂದು ಬೀಗುತ್ತಿದ್ದವರಿಗೆ ಮಹತ್ವದ ಸಂದೇಶ ರವಾನಿಸಿದೆ. ಪ್ರಧಾನಿ ಮೋದಿ ಅವರ ಮೇಕ್‌ ಇನ್‌ ಇಂಡಿಯಾ ಡೈ ಇನ್‌ ಇಂಡಿಯಾ ಆಗಿದೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
-ಉದಯವಾಣಿ

Write A Comment