ಕರ್ನಾಟಕ

ಟಿಪ್ಪು ಜಯಂತಿಗೆ ಹಲವೆಡೆ ವಿರೋಧ: ಮಡಿಕೇರಿಯಲ್ಲಿ ಕಲ್ಲುತೂರಾಟದ ವೇಳೆ ಓಡುವಾಗ ಓರ್ವ ಸಾವು; ; ಲಾಠಿ ಚಾರ್ಜ್

Pinterest LinkedIn Tumblr

madi

ಬೆಂಗಳೂರು: ರಾಜ್ಯದಲ್ಲಿ ಆಚರಣೆ ಮಾಡಲಾಗುತ್ತಿರುವ ಟಿಪ್ಪು ಜಯಂತಿಗೆ ಹಲವು ಹಿಂದೂಪರ ಸಂಘನೆಗಳು ವಿರೋಧ ವ್ಯಕ್ತಪಡಿಸಿದ್ದು, ಹಲವೆಡೆ ಮಂಗಳವಾರ ಪ್ರತಿಭಟನೆಗಳು ನಡೆಯುತ್ತಿವೆ.

ಟಿಪ್ಪು ಸುಲ್ತಾನ್ ಅವರ ಜನ್ಮದಿನಾಚರಣೆ ವಿರೋಧಿಸಿ ಹಿಂದೂಪರ ಸಂಘಟನೆಗಳು ಕೊಡಗು ಬಂದ್ ಗೆ ಮಂಗಳವಾರ ಕರೆ ನೀಡಿತ್ತು. ಈ ಬಂದ್ ಇದೀಗ ಹಿಂಸಾಚಾರ ರೂಪಕ್ಕೆ ತಿರುಗಿದ್ದು, ಹಲವೆಡೆ ಕಲ್ಲು ತೂರಾಟ ನಡೆದಿದೆ. ಅಲ್ಲದೆ, ಕಲ್ಲುತೂರಾಟದಿಂದಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ಕಲ್ಲು ತೂರಾಟದ ವೇಳೆ ಓಡುವಾಗ ಜಾರಿಬಿದ್ದು ಮಡಿಕೇರಿ ವಿಶ್ವ ಹಿಂದೂ ಪರಿಷತ್ ಸಂಘಟನಾ ಕಾರ್ಯದರ್ಶಿ ಕುಟ್ಟಪ್ಪ (50) ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಟಿಪ್ಪು ಜಯಂತಿ ವಿರೋಧಿಸಿ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಪ್ರತಿಭಟನೆ ವೇಳೆ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಕಲ್ಲು ತೂರಾಟದಿಂದಾಗಿ ಕುಟ್ಟಪ್ಪ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಗೊಂಡ ಕುಟ್ಟಪ್ಪ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

ಟಿಪ್ಪು ಪರ ಮೆರಮಣಿಗೆ ನಡೆಸಲು ಅನುಮತಿ ನೀಡದ ಹಿನ್ನೆಲೆಯಲ್ಲಿ ತಿಮ್ಮಯ್ಯ ಸರ್ಕಲ್ ನಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಆರಂಭವಾಗಿದೆ. ಘರ್ಷಣೆ ವೇಳೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ. ಪರಿಸ್ಥಿತಿ ಕೈಮೀರಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರನ್ನು ಚದುರಿಸುವ ಸಲುವಾಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ, ಅಶ್ರುವಾಯು ಸಿಡಿಸಿದ್ದಾರೆ. ಅಲ್ಲದೆ, ಲಾಠಿ ಚಾರ್ಜ್ ನಡೆಸಿದ್ದಾರೆ. ಉದ್ನಿಗ್ನ ವಾತಾವರಣ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಅಧಿಕಾರಿಗಳು ಕೊಡಗಿನಾದ್ಯಂತ ಆರ್ಎಎಫ್, ಕೆಎಸ್ಆರ್ ಪಿ ಹೆಚ್ಚುವರಿ ತುಕಡಿಗಳನ್ನು ನಿಯೋಜಿಸಿದ್ದು, ಹಲವೆಡೆ ನಿಷೇಧಾಜ್ಞೆಯನ್ನು ಜಾರಿ ಮಾಡಿದ್ದಾರೆಂದು ತಿಳಿದುಬಂದಿದೆ. ಇದೀಗ ಸ್ಥಳದಲ್ಲಿ ಪರಿಸ್ಥಿತಿ ಹತೋಟಿಯಲ್ಲಿದ್ದರೂ ಬೂದಿ ಮುಚ್ಚಿದ ಕೆಂಡದಂತಾಗಿದೆ.

ಟಿಪ್ಪು ಜಯಂತಿ ಬ್ಯಾನರ್’ಗೆ ಹಾನಿ
ಮೂಡಬಿದಿರೆಯ ತೋಡಾರ್ ನಲ್ಲಿ ಹಾಕಲಾಗಿದ್ದ ಟಿಪ್ಪು ಸುಲ್ತಾನ್ ಜಯಂತಿ ಕುರಿತಾದ ಬ್ಯಾನರ್ ಗೆ ಕೆಲವು ಪ್ರತಿಭಟನಾಕಾರರು ಹಾನಿಯುಂಟು ಮಾಡಿದ್ದು, ಪ್ರಕರಣ ಸಂಬಂಧ ಮೂವರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.

ಇದರಂತೆ ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಹಲವೆಡೆ ಟಿಪ್ಪು ದಿನಾಚರಣೆಗೆ ವಿರೋಧ ವ್ಯಕ್ತವಾಗುತ್ತಿದ್ದು, ಹಲವು ಸಂಘಟನೆಗಳ ಪ್ರತಿಭಟನೆ ಮುಂದುವರೆದಿದೆ.

Write A Comment