ಕರ್ನಾಟಕ

ಈತ ಅಂತಿಂಥ ಕಳ್ಳ ಅಲ್ಲ…ಈತನ ಘನಂಧಾರಿ ಕೆಲಸ ಕೇಳಿದರೆ ದಿಗ್ಬ್ರಮೆ ಆಗಬಹುದು…

Pinterest LinkedIn Tumblr

anthony

ಬೆಂಗಳೂರು: ನೋ ಟ್ಯಾಕ್ಸ್, ನೋ ರಿಟನ್ರ್ಸ್! ಗೊತ್ತಿರೋದು ಕದಿಯೋದಷ್ಟೆ. ಅದೂ ಬರೋಬ್ಬರಿ 30 ವರ್ಷದಿಂದ. ಸಿಕ್ಕಿಬಿದ್ದು ಜೈಲಿಗೆ ಹೋಗಿದ್ದು ಒಂದೇ ಬಾರಿ. ಆಮೇಲೆ ನೋ ಚಾನ್ಸ್ ಅಂದ್ಕೊಂಡು ಇಷ್ಟು ವರ್ಷ ಚಾನ್ಸ್ ತಗೊಂಡು ಕದಿಯುತ್ತಾ ಬಂದು ಬಹುಕೋಟಿ ಒಡೆಯನಾಗಿದ್ದ ಈ ಭೂಪ ಅಂತೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಮಾರುತಿ ಸೇವಾ ನಗರದ ನಾಗಣ್ಣ ಪಾಳ್ಯದ ನಿವಾಸಿ ಚಂದರ್ ಅಲಿಯಾಸ್ ಅಂಥೋಣಿ (50) ಬಂಧಿತ ಆರೋಪಿ. ಈತ ನಿಂದ 2 ಕೆಜಿ 317 ಗ್ರಾಂ ಚಿನ್ನಾಭರಣ, 3 ಕೆಜಿ 750 ಗ್ರಾಂ ಬೆಳ್ಳಿ,ರು.5 ಲಕ್ಷ ನಗದು, 2 ಕಾರುಗಳು, 1 ಆಟೋ, 2 ಬೈಕ್ ಸೇರಿ ಒಟ್ಟು ರು.80 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಕಳ್ಳತನದ ಹಣದಿಂದಲೇ 4 ಮನೆಗಳನ್ನು ಕಟ್ಟಿಸಿಕೊಂಡಿದ್ದು ಆ ಆಸ್ತಿಯನ್ನು ಜಪ್ತಿ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭಿಸಲಾಗಿದೆ.

1983ರಿಂದ 1985ರ ಅವ„ಯಲ್ಲಿ ಈತ ಕೋಲಾರದ ಬಂಗಾರಪೇಟೆ ಹಾಗೂ ರಾಬಟ್ರ್ ಸನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವು ಮಾಡಿ ನ್ಯಾಯಾಲಯದಿಂದ ಜೈಲು ಶಿಕ್ಷೆಗೆ ಗುರಿಯಾಗಿದ್ದ. ಬಿಡುಗಡೆಯಾಗಿ ನೇರವಾಗಿ ಬೆಂಗಳೂರಿಗೆ ಬಂದಿದ್ದ ಈತ 30 ವರ್ಷಗಳಿಂದ ಮನೆಕಳವು ಪ್ರಕರಣಗಳಲ್ಲಿ ತೊಡಗಿಕೊಂಡಿದ್ದ. ಆಟೋವನ್ನೂ ಇಟ್ಟುಕೊಂಡಿದ್ದ ಅಂಥೋನಿ,

ಯಾರೂ ಇಲ್ಲದ ಮನೆಗಳನ್ನು ಹುಡುಕಿ ಬಾಗಿಲು ಮುರಿದು ಕಳವು ಮಾಡುತ್ತಿದ್ದ ಎಂದು ಪಶ್ಚಿಮ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಭಿಕ್ಷುಕನ ವೇಷ: ಕೆಲವೊಮ್ಮೆ ಬಿಕ್ಷುಕನ ವೇಷದಲ್ಲಿ ಹೋಗಿ, ಮನೆಗಳ ಮುಂದೆ ಫುಟ್ ಪಾತ್‍ನಲ್ಲಿ ಕುಳಿತು ಮನೆಯವರ ಚಟುವಟಿಕೆಯನ್ನು ಗಮನಿಸುತ್ತಿದ್ದ. ಯಾರೂ ಇಲ್ಲದ ವೇಳೆ ಒಳಗೆ ನುಗ್ಗುತ್ತಿದ್ದ. ಬಾಗಿಲುಗಳ ಮೀಟಲೆಂದೇ ರಾಡ್ ತಯಾರಿಸಿಕೊಂಡಿದ್ದ ಈತ, ಒಂದು ಸ್ಕ್ರೂಡ್ರೈವರ್, ರಾಡ್, ಎರಡು ಸಣ್ಣ ಕಲ್ಲುಗಳನ್ನು ಬಾಗಿಲು ಒಡೆಯಲು ಬಳಸುತ್ತಿದ್ದ. ಕಳವು ಮಾಡಿದ ವಸ್ತುಗಳನ್ನು ಸೊಂಟದ ಸುತ್ತಲೂ ಇಟ್ಟುಕೊಳ್ಳುತ್ತಿದ್ದ. ಅದಕ್ಕಾಗಿ ದೊಡ್ಡ ಅಂಗಿಗಳನ್ನೇ ಧರಿಸುತ್ತಿದ್ದ. ಮನೆಯೊಳಗೆ ನುಗ್ಗಿದರೆ ಕೇವಲ 5ರಿಂದ 8 ನಿಮಿಷಗಳಲ್ಲಿ ಚಿನ್ನ ಹಾಗೂ ನಗದು ದೋಚಿ ಪರಾರಿಯಾಗುತ್ತಿದ್ದ. ಕೆಲವೊಮ್ಮೆ ಕಾರಿನಲ್ಲಿ ಹೋಗಿ ಕಳ್ಳತನ ಮಾಡುತ್ತಿದ್ದೂ ಇದೆ ಎಂದು ರೆಡ್ಡಿ ತಿಳಿಸಿದರು.

ಆರೋಪಿಗೆ ಇಬ್ಬರು ಪತ್ನಿಯರಿದ್ದು, ಮೊದಲನೇ ಪತ್ನಿಗೆ ಶೀಟ್‍ನ ಮನೆ ನಿರ್ಮಿಸಿಕೊಟ್ಟಿದ್ದ. ಅವರಿಗೆ ಇಬ್ಬರು ಮಕ್ಕಳಿದ್ದು ಈತನಿಂದ ದೂರವಿದ್ದರು. ಎರಡನೇ ಪತ್ನಿಗೆ 4 ಅಂತಸ್ತಿನ ಮನೆ ಮಾಡಿಕೊಟ್ಟು ಅದರಲ್ಲಿ ವಾಸವಿದ್ದ. ಈಕೆಗೂ ಮೂವರು ಮಕ್ಕಳಿದ್ದು, ಇಬ್ಬರು ಪ್ರೌಢಶಾಲೆ ವ್ಯಾಸಂಗ ಮಾಡುತ್ತಿದ್ದರೆ, ಮತ್ತೊಬ್ಬ ಪಿಯು ಅನುತ್ತೀರ್ಣನಾಗಿದ್ದಾನೆ. ನಾಲ್ಕಂತಸ್ತಿನ ಮನೆ ಸುಮಾರು ರು.1 ಕೋಟಿ ಮೌಲ್ಯದ್ದಾಗಿದ್ದು, 3 ಮನೆ ಬಾಡಿಗೆ ನೀಡಿ ಅದರಿಂದ ರು.30 ಸಾವಿರ ಆದಾಯ ಬರುತ್ತಿತ್ತು.

ಬ್ಯಾಂಕ್ ಲಾಕರ್‍ನಲ್ಲಿ ಕದ್ದ ಒಡವೆ: ಸದ್ಯ ಆರೋಪಿಯಿಂದ ವಶಪಡಿಸಿಕೊಂಡಿರುವ ಒಡವೆಗಳ ಪೈಕಿ ಕೆಲವು ಬ್ಯಾಂಕ್ ಲಾಕರ್‍ನಲ್ಲಿ ಇರಿಸಲಾಗಿತ್ತು. ಪತ್ನಿ ಇವುಗಳ ನಿರ್ವಹಣೆ ಮಾಡುತ್ತಿದ್ದಳು. ಹೀಗಾಗಿ, ಪ್ರಕರಣದಲ್ಲಿ ಆತನ ಪತ್ನಿಯನ್ನೂ ಆರೋಪಿಯನ್ನಾಗಿ ಮಾಡಲಾಗುತ್ತಿದೆ. ಇನ್ನು ಆರೋಪಿಯಿಂದ ಆಭರಣಗಳನ್ನು ಸ್ವೀಕರಿಸುತ್ತಿದ್ದ ಇಬ್ಬರು ಪಾನ್ ಬ್ರೋಕರ್‍ಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತ ಅಂಥೋಣಿ 15 ವರ್ಷಗಳ ಹಿಂದೆಯೇ ಎರಡನೇ ಪತ್ನಿ ಹಾಗೂ ಮೂವರು ಮಕ್ಕಳು ಸೇರಿ ಐವರ ಹೆಸರಿನಲ್ಲಿ ಪಾಸ್‍ಪೋರ್ಟ್ ಮಾಡಿಸಿಟ್ಟುಕೊಂಡಿದ್ದ. ಪರಿಶೀಲನೆ ವೇಳೆ ಆರೋಪಿ ವಿದೇಶಕ್ಕೆ ಹೋಗಿದ್ದ ಬಗ್ಗೆ ಮಾಹಿತಿ ಇಲ್ಲ. ಪೊಲೀಸರಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದಲೇ ಆತ ಪಾಸ್‍ಪೋರ್ಟ್ ಮಾಡಿಸಿಕೊಂಡಿದ್ದನಾ ಎನ್ನುವ ಬಗ್ಗೆ ಪರಿಶೀಲನೆ ನಡೆಸಬೇಕಿದೆ ಎಂದು ಅಧಿಕಾರಿ ಹೇಳಿದರು. ಈತನ ಬಂಧನದಿಂದ ವಿವೇಕನಗರದ 11, ಕೋರಮಂಗಲದ 7, ಅಶೋಕನಗರದ 5, ವೈಯಾಲಿಕಾವಲ್‍ನ 7 ಹಾಗೂ ಶೇಷಾದ್ರಿಪುರ ಠಾಣೆಯ 2 ಸೇರಿ 32 ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.

Write A Comment