ಕನ್ನಡ ವಾರ್ತೆಗಳು

ಉಡುಪಿ: ಮನೆಯವರಿಂದ ಅಂತ್ಯಸಂಸ್ಕಾರ ಮಾಡಿಸಿಕೊಂಡ ವ್ಯಕ್ತಿ ಮರಳಿ ಮನೆಗೆ ಬಂದ..!

Pinterest LinkedIn Tumblr

ಉಡುಪಿ: ಆ ಮನೆಯಲ್ಲಿ ಕೆಲವು ದಿನಗಳ ನೀರವ ಮೌನವೇ ಆವರಿಸಿತ್ತು. ಆ ಮನೆಯಾತನೋರ್ವ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದ ಎಂದು ಇಡೀ ಕುಟುಂಬ ಆತನ ಸಂಸ್ಕಾರ ನಡೆಸಿ ದುಃಖತಪ್ತರಾಗಿದ್ದರು. ಸತ್ತನೆಂದು ತಿಳಿದ ಅದೇ ವ್ಯಕ್ತಿ ಜೀವಂತವಾಗಿ ವಾಪಾಸ್ಸಾದಾಗ ಆ ಮನೆಯವರಿಗೆ ಸಂತಸದೊಂದಿಗೆ ಆಶ್ಚರ್ಯವೂ ಆಗಿದೆ. ಈ ರೀತಿಯಾಗಿ ನಡೆದ ಕೂತೂಹಲಕಾರಿ ವರದಿಯೊಂದು ಇಲ್ಲಿದೆ.

ಸಾಸ್ತಾನ ಸಮೀಪದ ಗುಂಡ್ಮಿ ರಸ್ತೆಯ ನಿವಾಸಿ ಶಂಕರ್ (52) ಎನ್ನುವವರೇ ಈ ಕಥೆಯ ನಾಯಕರು. ಅಗಾಗ್ಗೇ ಕೆಲಸವನ್ನರಿಸಿ ಮನೆಯವರಿಗೂ ಹೇಳದೇ ಕೇಳದೇ ತನ್ನ ಪಾಡಿಗೆ ತಾನೂ ಮನೆಬಿಟ್ಟು ಹೋಗುತ್ತಿದ್ದ ಶಂಕರ್ ಬಹುದಿನಗಳ ಕಾಲ ಊರಿನತ್ತ ಸುಳಿಯುತ್ತಿರಲಿಲ್ಲ. ಇತ್ತೀಚೆಗೂ ಮನೆಯಲ್ಲಿ ಹೇಳದೇ ತೆರಳಿದ್ದ ಅವರು ಸುರತ್ಕಲ್ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು ಎಂಬ ಸುದ್ದಿ ಇವರ ಮನೆಗೆ ತಲುಪಿತ್ತು. ಅಂತೆಯೇ ಕುಟುಂಬಿಕರು ಸುರತ್ಕಲಿಗೆ ತೆರಳಿ ಅಲ್ಲಿ ಶವದ ಪರಿಶೀಲನೆ ನಡೆಸಿದ್ದರು. ಎಲ್ಲಾ ಆಯಾಮಗಳಲ್ಲಿಯೂ ಸತ್ತ ವ್ಯಕ್ತಿ ಶಂಕರ್ ಎಂಬುದಾಗಿ ದ್ರಢಪಡಿಸಿಕೊಂಡ ಬಳಿಕ ಶವವನ್ನು ಮನೆಗೆ ತಂದು ಸಕಲ ವಿಧಿವಿಧಾನಗಳೊಂದಿಗೆ ಶಂಕರ್ ಅವರ ಹುಟ್ಟೂರು ಬೆಣ್ಣೆಕುದ್ರುವಿನಲ್ಲಿ ಅಂತ್ಯಸಂಸ್ಕಾರವನ್ನು ಮಾಡಿಮುಗಿಸಿದ್ದರು.

ಸತ್ತಿದ್ದು ಶಂಕರ್ ಅಲ್ಲ.!
ಶಂಕರ್ ಸಾವಿನ ಸುದ್ದಿ ಎಲ್ಲರಿಗೂ ತಿಳಿದುಹೋಗಿತ್ತು. ಅಂತೆಯೇ ಇವರ ದೂರದ ಸಂಬಂಧಿಕರೋರ್ವರು ಶಂಕರ್ ಅವರಂತೆಯೇ ಇರುವ ವ್ಯಕ್ತಿಯನ್ನು ಕಲಬುರ್ಗಿ ಸಮೀಪದ ಹೋಟೇಲೊಂದರಲ್ಲಿ ನೋಡಿದ್ದು ಈ ಬಗ್ಗೆ ಶಂಕರ್ ಕುಟುಂಬಕ್ಕೆ ತಿಳಿಸಿದ್ದಾರೆ. ಬಳಿಕ ವ್ಯಕ್ತಿಯ ಸಹಕಾರದಲ್ಲಿ ಮಾಲೀಕರ ವಾಟ್ಸಾಪ್ ಫೋಟೋ ತರಿಸಿಕೊಂಡು ಆತ ಶಂಕರ್ ಎಂದು ಖಚಿತಪಡಿಸಿಕೊಂಡು ಕುಟುಂಬಿಕರು ಕಲ್ಬುರ್ಗಿಗೆ ತೆರಳಿ ಶಂಕರನನ್ನು ಕರೆತರುತ್ತಾರೆ.

ಇನ್ನು ಸತ್ತನೆಂದು ತಿಳಿದ ಶಂಕರ್ ಜೀವಂತವಾಗಿರೋದು ಗ್ಯಾರೆಂಟಿಯಾದ ಬಳಿಕ ತಾವು ಅಂತ್ಯಸಂಸ್ಕಾರ ಮಾಡಿದ ಶವ ಯಾರದ್ದೆಂಬ ಪ್ರಶ್ನೆ ಸದ್ಯ ಶಂಕರ್ ಮನೆಯವರನ್ನು ಕಾಡುತ್ತಿದೆ. ಈ ಕ್ಷಣಕ್ಕೂ ಎಲ್ಲವೂ ಕನಸೋ ಎಂಬಂತಿದೆ ಎನ್ನುತ್ತಾರೆ ಶಂಕರ್ ಕುಟುಂಬಿಕರು. ಅವರೇ ಹೇಳುವ ಪ್ರಕಾರ ಕೈಯಲ್ಲಿನ ಹಚ್ಚೆ ಸೇರಿದಂತೆ ಒಂದೆರಡು ಸಾಮ್ಯತೆಗಳು ಶಂಕರ್ ಎಂದು ಕಲ್ಪಿಸಿಕೊಳ್ಳಲು ಸಾಧ್ಯವಾಗಿತ್ತು. ಅದಕ್ಕಾಗಿ ಶವದ ಅಂತ್ಯಸಂಸ್ಕಾರ ಮಾಡಿದೆವು ಎನ್ನುತ್ತಾರೆ.

ಒಟ್ಟಿನಲ್ಲಿ ಅಗಲಿದ ಜೀವ ಮನೆಗೆ ಬಂದದ್ದು ಒಂದೆಡೆಯಾದರೇ ಅನಾಥ ಶವಕ್ಕೊಂದು ಅಂತ್ಯಸಂಸ್ಕಾರ ಭಾಗ್ಯ ಸಿಕ್ಕಿದ್ದು ಮಾತ್ರ ಸುಳ್ಳಲ್ಲ.

Write A Comment