ಕರ್ನಾಟಕ

ಜನನ-ಮರಣ ಪ್ರಮಾಣ ಪತ್ರ ಗೋಲ್‌ಮಾಲ್ : ಅರ್ಜಿ ಸಲ್ಲಿಕೆಗೆ ಮೊಬೈಲ್ ನಂಬರ್ ಕಡ್ಡಾಯ

Pinterest LinkedIn Tumblr

phone

ಬೆಂಗಳೂರು, ನ.9- ನಿಮಗೆ ತುರ್ತಾಗಿ ಜನನ, ಮರಣ ಪ್ರಮಾಣ ಪತ್ರ ಬೇಕೇ? ಕಚೇರಿಯಿಂದ ಕಚೇರಿಗೆ ಅಲೆದರೂ ಯಾವುದೇ ಪ್ರಯೋಜನವಿಲ್ಲ. ಆದರೆ ಏಜೆಂಟರ ಕೈ ಬಿಸಿ ಮಾಡಿದರೆ ಕ್ಷಣಾರ್ಧದಲ್ಲಿ ಪ್ರಮಾಣ ಪತ್ರ ಕೈ ಸೇರುತ್ತದೆ. ಇಂತಹ ಗೋಲ್‌ಮಾಲ್ ನಡೆಯುತ್ತಿರುವುದು ನಗರದ ಉಪ್ಪಾರಪೇಟೆ ಪೊಲೀಸ್ ಠಾಣೆ ಸಮೀಪವಿರುವ ಬಿಬಿಎಂಪಿ ಜನನ-ಮರಣ ಪ್ರಮಾಣ ಪತ್ರ ನೋಂದಣಿ ಕಚೇರಿಯಲ್ಲಿ… ಈ ಕಚೇರಿಯಲ್ಲಿ ಸಾಕಷ್ಟು ಗೋಲ್‌ಮಾಲ್ ನಡೆಯುತ್ತಿದೆ ಎಂಬ ಬಗ್ಗೆ ಬಂದ ಸಾರ್ವಜನಿಕರ ದೂರನ್ನು ಆದರಿಸಿ ಇಂದು ಕಚೇರಿ ಮೇಲೆ ದಿಢೀರ್ ದಾಳಿ ನಡೆಸಿದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸ್ಥಾಯಿ ಸಮಿತಿಗೆ ಅಲ್ಲಿನ ಅವ್ಯವಹಾರಗಳು ಎಳೆ ಎಳೆಯಾಗಿ ತಿಳಿದು ಬಂತು.

ಜನನ ಮತ್ತು ಮರಣ ಪ್ರಮಾಣ ಪತ್ರಕ್ಕೆ ಆನ್‌ಲೈನ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಬಿಬಿಎಂಪಿ ಬೊಬ್ಬೆ ಹೊಡೆದು ಕೊಂಡರೂ ಈ ಕಚೇರಿಯಲ್ಲಿ ಸುಮಾರು ಆರೇಳು ತಿಂಗಳ ಪ್ರಮಾಣ ಪತ್ರಗಳು ಸಂಬಂಧಪಟ್ಟವರಿಗೆ ತಲುಪದೆ ಕಚೇರಿಯಲ್ಲೇ ಕೊಳೆಯುತ್ತಿರುವುದು ಕಂಡು ಬಂತು.

ಕಚೇರಿಯ ಅವ್ಯವಸ್ಥೆ ಕಂಡು ಕೆಂಡಾಮಂಡಲರಾದ ಸಮಿತಿ ಅಧ್ಯಕ್ಷ ರಾಜಣ್ಣ ಅವರು ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದೇ ಅಲ್ಲದೆ ಸಮರ್ಪಕ ದಾಖಲೆ ನೀಡುವಂತೆ ಆಗ್ರಹಿಸಿದರು. ಆದರೆ ಕಚೇರಿಯ ಜಂಟಿ ನಿರ್ದೇಶಕ ಮಂಗಳ್‌ದಾಸ್ ನಾನು ಇತ್ತೀಚೆಗಷ್ಟೇ ಸೇವೆಗೆ ಬಂದಿದ್ದೇನೆ. ಸಮರ್ಪಕ ಮಾಹಿತಿ ಇಲ್ಲ ಎಂದು ಸಬೂಬು ಹೇಳಿದರು. ಇದರಿಂದ ಮತ್ತಷ್ಟು ಕುಪಿತರಾದ ರಾಜಣ್ಣ ಕೂಡಲೇ ಎಲ್ಲಾ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಸೂಚಿಸಿದ್ದೇ ಅಲ್ಲದೆ ಕಚೇರಿಗೆ ಸಂಬಂಧಿಸಿದ ಕಡತಗಳನ್ನು ವಶಕ್ಕೆ ಪಡೆದುಕೊಂಡರು.

ಮೊಬೈಲ್ ನಂಬರ್ ಕಡ್ಡಾಯ:

ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ ಸಾರ್ವಜನಿಕರ ಮೊಬೈಲ್ ನಂಬರ್ ನಮೂದಾಗದಿರುವುದನ್ನು ಕಂಡ ರಾಜಣ್ಣ ಅವರು ಪ್ರಮಾಣ ಪತ್ರ ರೆಡಿಯಾದ ನಂತರ ಸಂಬಂಧಪಟ್ಟವರಿಗೆ ಯಾವ ರೀತಿ ಪತ್ರ ತಲುಪಿಸಿದ್ದೀರಿ.  ಇನ್ನು ಮುಂದೆ ಅರ್ಜಿ ಸಲ್ಲಿಸುವ ನಾಗರಿಕರಿಂದ ಕಡ್ಡಾಯವಾಗಿ ಮೊಬೈಲ್ ನಂಬರ್ ಪಡೆದುಕೊಳ್ಳಲೇಬೇಕು. ನಂತರ ಅವರ ಪ್ರಮಾಣ ಪತ್ರ ಸಿದ್ಧವಾದ ಕೂಡಲೇ ದೂರವಾಣಿ ಕರೆ ಮಾಡಿ ವಿತರಿಸುವಂತೆ ಸೂಚಿಸಿದರು. ಸ್ಥಳದಲ್ಲೇ ಇದ್ದ ಹಿರಿಯ ಅಧಿಕಾರಿಯೊಬ್ಬರು ಎಲ್ಲರ ಬಳಿಯೂ ಮೊಬೈಲ್ ಇರಲ್ಲ ಸಾರ್… ಅಂದರು. ಕೂಡಲೇ ರೀ ಸ್ವಾಮಿ ನೀವು ಯಾವ ಕಾಲದಲ್ಲಿದ್ದೀರಾ.. ಪ್ರತಿಯೊಬ್ಬರ ಬಳಿಯೂ ಮೊಬೈಲ್ ಇದ್ದೇ ಇರುತ್ತೆ. ನೀವು ಹೇಳಿದ ಕೆಲ್ಸ ಮಾಡ್ರಿ ಎಂದು ಧಮಕಿ ಹಾಕಿದರು.

ಇನ್ನು ಮುಂದೆ ಯಾವುದೇ ಸಾರ್ವಜನಿಕರು ಸರಿಯಾದ ಸಮಯಕ್ಕೆ ಪ್ರಮಾಣ ಪತ್ರ ದೊರೆಯುತ್ತಿಲ್ಲ. ಪ್ರಮಾಣ ಪತ್ರ ಬೇಕಾದರೆ ಮಧ್ಯವರ್ತಿಗಳನ್ನು ಸಂಪರ್ಕಿಸಬೇಕಾಗುತ್ತದೆ ಎಂಬ ದೂರು ಬಂದರೆ ನಿಮ್ಮ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ರಾಜಣ್ಣ ಎಚ್ಚರಿಕೆ ನೀಡಿದರು.  ಪರಿಶೀಲನೆ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಭದ್ರೇಗೌಡ ಮತ್ತಿತರರು ಹಾಜರಿದ್ದರು.

Write A Comment