ಕರ್ನಾಟಕ

ಬಿಹಾರ ಚುನಾವಣೆ ಸೋಲು: ರಾಜ್ಯ ಬಿಜೆಪಿಯಲ್ಲಿ ಒಳಗೊಳಗೇ ಖುಷಿ!

Pinterest LinkedIn Tumblr

BJP-STATEಬೆಂಗಳೂರು: ಇಂಥದೊಂದು ಫ‌ಲಿತಾಂಶಕ್ಕಾಗಿ ಬಿಜೆಪಿಯ ರಾಷ್ಟ್ರೀಯ ನಾಯಕರೂ ಸೇರಿದಂತೆ ರಾಜ್ಯದ ಅನೇಕ ನಾಯಕರು ಒಳಗಿಂದೊಳಗೇ ಚಾತಕ ಪಕ್ಷಿಯಂತೆ ಕಾಯುತ್ತಿದ್ದರು.

ದೆಹಲಿ ವಿಧಾನಸಭಾ ಚುನಾವಣೆಯ ಫ‌ಲಿತಾಂಶ ಹೊರಬಿದ್ದಾಗಲೂ ಬಿಜೆಪಿಯ ಅನೇಕ ನಾಯಕರು ಆಂತರಿಕವಾಗಿ ಸಂತಸ ವ್ಯಕ್ತಪಡಿಸಿದ್ದರು. ಆದರೆ, ದೆಹಲಿ ಚುನಾವಣೆಯ ಸೋಲು ಅಷ್ಟೊಂದು ಪರಿಣಾಮ ಬೀರದೇ ಇದ್ದುದರಿಂದ ಈ ಬಾರಿಯ ಬಿಹಾರ ಚುನಾವಣೆಯಲ್ಲಾದರೂ ಆಗಲಿ ಎಂಬ ನಿರೀಕ್ಷೆಯನ್ನೇ ಅನೇಕ ನಾಯಕರು ಹೊಂದಿದ್ದರು. ಭಾನುವಾರ ಫ‌ಲಿತಾಂಶ ಹೊರಬಿದ್ದ ನಂತರ ಪಕ್ಷದ ಅನೇಕ ನಾಯಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು ಸುಳ್ಳೇನಲ್ಲ.

ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ನಾಗಾಲೋಟಕ್ಕೆ ಬ್ರೇಕ್‌ ಬೀಳಬೇಕು ಎಂಬ ನಿರೀಕ್ಷೆ ಇತರ ಪಕ್ಷಗಳ ನಾಯಕರಿಗಿಂತ ಬಿಜೆಪಿಯ ನಾಯಕರಲ್ಲೇ ತುಸು ಹೆಚ್ಚಾಗಿತ್ತು ಎನ್ನುವುದು ಉತ್ಪ್ರೇಕ್ಷೆಯೇನಲ್ಲ.
ಈ ಬಿಹಾರ ಚುನಾವಣೆಯ ಫ‌ಲಿತಾಂಶ ಮುಂಬರುವ ನೂತನ ರಾಜ್ಯಾಧ್ಯಕ್ಷನ ಆಯ್ಕೆ ವಿಷಯದಲ್ಲೂ ಪರಿಣಾಮ ಬೀರುವುದು ನಿಚ್ಚಳವಾಗಿದೆ.

ಒಂದು ವೇಳೆ ಬಿಜೆಪಿ ಅಲ್ಲಿ ಭರ್ಜರಿ ಜಯ ಗಳಿಸಿದ್ದರೆ ರಾಜ್ಯಾಧ್ಯಕ್ಷರನ್ನು ಯಾರನ್ನಾಗಿಸಬೇಕು ಎಂಬುದರ ಬಗ್ಗೆ ರಾಜ್ಯದ ಪ್ರಮುಖ ನಾಯಕರ ಅಭಿಪ್ರಾಯ-ಸಲಹೆಗಳಿಗೆ ಮನ್ನಣೆ ನೀಡದೆ ಏಕಪಕ್ಷೀಯವಾಗಿ ತಮಗೆ ಸರಿ ಎನಿಸಿದವರನ್ನೇ ನೇಮಕ ಮಾಡುವ ಸಾಧ್ಯತೆ ಹೆಚ್ಚಾಗಿತ್ತು. ಹೊಸ ಪ್ರಯೋಗಕ್ಕೆ ಮುಂದಾಗುವ ಸಂಭವವಿತ್ತು. ಇದು ಹೀಗೆ ಮುಂದುವರೆದಲ್ಲಿ ಈಗ ಬಿಹಾರದಲ್ಲಿ ನಡೆದ “ಬಿಹಾರಿ ವರ್ಸಸ್‌ ಬಾಹರಿ’ ಎಂಬುದು ಮುಂದೊಂದು ದಿನ ಕರ್ನಾಟಕದಲ್ಲೂ ನಡೆಯಬಹುದು ಎಂಬುದು ಪಕ್ಷದ ಹಲವು ನಾಯಕರಲ್ಲಿ ಆತಂಕ ಉಂಟು ಮಾಡಿತ್ತು ಎನ್ನಲಾಗಿದೆ.

ಇದೀಗ ಬಿಹಾರದಲ್ಲಿ ಬಿಜೆಪಿ ಹೀನಾಯ ಸೋಲುಂಡಿರುವ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರು ರಾಜ್ಯಾಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಎಲ್ಲ ಹಿರಿಯ ನಾಯಕರೊಂದಿಗೆ ಮುಕ್ತ ಸಮಾಲೋಚನೆ ನಡೆಸಿ, ಅವರ ಅಭಿಪ್ರಾಯ, ಸಲಹೆಗಳನ್ನು ಗಮನದಲ್ಲಿ ಇಟ್ಟುಕೊಂಡು ತೀರ್ಮಾನ ಕೈಗೊಳ್ಳಬಹುದು. ಸ್ಥಳೀಯ ರಾಜಕೀಯ ಲೆಕ್ಕಾಚಾರಕ್ಕೆ ಅನುಗುಣವಾಗಿ ಸಮರ್ಥರೊಬ್ಬರಿಗೆ ನಾಯಕತ್ವ ವಹಿಸಬಹುದು. ಕೇಂದ್ರದಲ್ಲಿ ಲಾಲ್‌ಕೃಷ್ಣ ಅಡ್ವಾಣಿ, ಮುರಳಿ ಮನೋಹರ್‌ ಜೋಶಿ ಸೇರಿದಂತೆ ಹಲವು ಹಿರಿಯರನ್ನು ಹಿಂದೆ ಸರಿಸಿದಂತೆ ರಾಜ್ಯದಲ್ಲೂ ಮಾಡಲಿಕ್ಕಿಲ್ಲ ಎಂಬ ನಿರೀಕ್ಷೆಯನ್ನು ರಾಜ್ಯ ಹಲವು ಹಿರಿಯ ನಾಯಕರು ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ಒಂದೂವರೆ ವರ್ಷಗಳಿಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಸಂಘಟನೆಯಲ್ಲಿ ಕೇಳಿಬಂದಿದ್ದು ಎರಡೇ ಹೆಸರುಗಳು. ಒಂದು ಪ್ರಧಾನಿ ನರೇಂದ್ರ ಮೋದಿ. ಮತ್ತೂಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ. ಅವರಿಬ್ಬರನ್ನು ಬಿಟ್ಟರೆ ಕೇಂದ್ರ ಮಟ್ಟದಲ್ಲಿ ಅನೇಕ ಹಿರಿಯರು, ಅನುಭವಿಗಳು ಇದ್ದರೂ ಯಾರೊಬ್ಬರೂ ಹೆಚ್ಚು ಬಾಯಿ ಬಿಡುವಂತಿರಲಿಲ್ಲ. ರಾಷ್ಟ್ರೀಯ ನಾಯಕರದ್ದೇ ಈ ಪರಿಸ್ಥಿತಿಯಾದ ಮೇಲೆ ಇನ್ನು ರಾಜ್ಯ ನಾಯಕರ ಪಾಡಂತೂ ಕೇಳುವಂತಿರಲಿಲ್ಲ. ಅಷ್ಟರಮಟ್ಟಿಗೆ ಪ್ರತಿಯೊಂದು ವಿಷಯದಲ್ಲಿ ಸ್ಥಳೀಯ ನಾಯಕರು ಕಡೆಗಣಿಸಲ್ಪಟ್ಟಿದ್ದರು ಎನ್ನುವುದು ಗುಟ್ಟಿನ ವಿಷಯವೇನಲ್ಲ.

ರಾಜ್ಯ ನಾಯಕರು ಲೆಕ್ಕಕ್ಕೇ ಇಲ್ಲವಂತೆ
ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಅಮಿತ್‌ ಶಾ ರಾಷ್ಟ್ರೀಯ ಅಧ್ಯಕ್ಷರಾದ ನಂತರ ಎದುರಿಸಿದ ಮಹಾರಾಷ್ಟ್ರ, ಹರಿಯಾಣ, ಜಾರ್ಖಂಡ್‌ ಹಾಗೂ ಜಮ್ಮು -ಕಾಶ್ಮೀರ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಜಯಭೇರಿ ಬಾರಿಸಿದ್ದರಿಂದ ಈ ಮೋದಿ-ಶಾ ಜೋಡಿಯನ್ನು ಹಿಡಿಯುಂತಿರಲಿಲ್ಲ. ಆ ಸಂದರ್ಭದಲ್ಲಿ ರಾಜ್ಯ ನಾಯಕರು ಕೇಂದ್ರದಲ್ಲಿ ತಮ್ಮದೇ ಸರ್ಕಾರವಿದೆ ಎಂಬ ಉತ್ಸಾಹದೊಂದಿಗೆ ಯಾವುದೇ ಸ್ಥಳೀಯ ವಿಷಯಗಳನ್ನು ಮುಂದಿಟ್ಟುಕೊಂಡು ಹೋದರೂ ಅದಕ್ಕೆ ಹೆಚ್ಚಿನ ಮನ್ನಣೆ ಸಿಗುತ್ತಿರಲಿಲ್ಲ. ಪಕ್ಷದ ಸಂಘಟನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊತ್ತೂಯ್ಯುವಂತಿರಲಿಲ್ಲ. ಹೋದರೂ, ಸಮಸ್ಯೆ ಬಗ್ಗೆ ಪೂರ್ಣ ಹೇಳುವ ಮೊದಲೇ, “ನಮಗೆ ಎಲ್ಲವೂ ಗೊತ್ತಿದೆ..ನಾವು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ..’ ಎಂಬ ಸಿದ್ಧ ಉತ್ತರ ಸಿಗುತ್ತಿತ್ತು.

ರಾಜ್ಯ ನಾಯಕರೊಂದಿಗೆ ಯಾವುದೇ ವಿಷಯಗಳ ಬಗ್ಗೆ ರಾಷ್ಟ್ರೀಯ ನಾಯಕರು ಮುಕ್ತವಾಗಿ ಮಾತುಕತೆಯನ್ನೇ ನಡೆಸುತ್ತಿರಲಿಲ್ಲ. ಮಾತುಕತೆ ನಡೆಸುವ ಬಗ್ಗೆ ಆಸಕ್ತಿಯನ್ನೂ ತೋರುತ್ತಿರಲಿಲ್ಲ. ನೀವು ನಿಮ್ಮ ಕೆಲಸ ಮಾಡಿ. ನಾವು ನಮ್ಮ ಕೆಲಸ ಮಾಡುತ್ತೇವೆ ಎಂಬ ಧಾಟಿಯಲ್ಲೇ ಸಾಗ ಹಾಕುತ್ತಿದ್ದರು. ಸ್ಥಳೀಯ ಸಮಸ್ಯೆಗಳ ಬಗ್ಗೆ ರಾಜ್ಯ ನಾಯಕರೊಂದಿಗೆ ಚರ್ಚೆ ಮಾಡುವ ಬದಲು ತಮ್ಮದೇ ಆದ ಆಪ್ತ ವಲಯದ ಮೂಲಕ ಮಾಹಿತಿ ತರಿಸಿಕೊಂಡು ನಂತರ ನಿರ್ಧಾರವನ್ನು ಮೇಲಿನಿಂದ ಹೇರುತ್ತಿದ್ದರು. ಒಟ್ಟಿನಲ್ಲಿ ರಾಜ್ಯ ನಾಯಕರು ಕೇಂದ್ರದ ಪಾಲಿಗೆ ಲೆಕ್ಕಕ್ಕೇ ಇರಲಿಲ್ಲ ಎನ್ನಲಾಗಿದೆ.

ಕರ್ನಾಟಕದಲ್ಲಿ ಪ್ರತಿಪಕ್ಷ ಸ್ಥಾನದಲ್ಲಿರುವ ಬಿಜೆಪಿಯ ನಾಯಕರಿಗೆ ರಾಜ್ಯದ ಕುರಿತಂತೆ ಕೇಂದ್ರ ಸರ್ಕಾರದಿಂದ ಯಾವುದೇ ನೆರವನ್ನೂ ಬಯಸುವಂತಿರಲಿಲ್ಲ. ಕಳೆದ ಒಂದೂವರೆ ವರ್ಷದಲ್ಲಿನ ಬೆಳವಣಿಗೆಗಳನ್ನು ಗಮನಿಸಿದರೆ ಇದೆಲ್ಲವೂ ಸ್ಪಷ್ಟವಾಗುತ್ತದೆ. ರಾಜ್ಯ ಸರ್ಕಾರದ ನಿಯೋಗದೊಂದಿಗೆ ಕೇಂದ್ರದ ಬಳಿ ನೆರವು ಕೋರಲು ತೆರಳಿದ್ದು ಬಿಟ್ಟರೆ ಬಿಜೆಪಿ ನಾಯಕರು ಪ್ರತ್ಯೇಕವಾಗಿ ನಿಯೋಗದಲ್ಲಿ ತೆರಳಿದ್ದು ತೀರಾ ಕಡಮೆ. ಒಂದೆರಡು ಉದಾಹರಣೆಗಳನ್ನು ಮಾತ್ರ ನೀಡಬಹುದೇನೊ. ಹಾಗೆ ತೆರಳಿದಾಗಲೂ ರಾಜ್ಯ ನಾಯಕರಿಗೆ ಕೇಂದ್ರದ ನಾಯಕರಿಂದ ಸೂಕ್ತ ಸ್ಪಂದನೆ ದೊರೆತಿಲ್ಲ ಎಂಬ ಅಳಲನ್ನು ಅನಧಿಕೃತವಾಗಿ ಹೊರಹಾಕಿದ್ದಾರೆ.

“ಕೇಂದ್ರದಲ್ಲಿ ನಮ್ಮದೊಂದು ಸರ್ಕಾರ ಇದೆ ಎಂಬ ಭಾವನೆಯೇ ಬರುತ್ತಿಲ್ಲ. ದೆಹಲಿಗೆ ತೆರಳಿ ಕೇಂದ್ರ ಸರ್ಕಾರದ ಅಥವಾ ಪಕ್ಷದ ವರಿಷ್ಠರನ್ನು ಭೇಟಿ ಮಾಡುವಂತಿಲ್ಲ. ದೆಹಲಿಗೆ ಯಾಕೆ ಬರುತ್ತೀರಿ? ಇಲ್ಲಿಗೆ ಬರುವ ಅಗತ್ಯವಿಲ್ಲ ಎಂಬ ಮಾತುಗಳನ್ನು ನಮ್ಮವರಿಂದಲೇ ಕೇಳಬೇಕಾಗಿದೆ. ಕೆಲವು ವಿಷಯಗಳಲ್ಲಿ ವರಿಷ್ಠರ ನಿಲುವು ಸರಿಯಾಗಿದೆ ಎಂಬುದನ್ನು ಒಪ್ಪುತ್ತೇವೆ. ಆದರೆ, ಎಲ್ಲವೂ ಅಲ್ಲ. ರಾಜ್ಯಕ್ಕೆ ಸಂಬಂಧಿಸಿದ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವಾಗಲೂ ನಮ್ಮ ಒಂದು ಅಭಿಪ್ರಾಯವನ್ನೂ ಕೇಳುವುದಿಲ್ಲ. ದೆಹಲಿ ಚುನಾವಣೆಯ ನಂತರವೇ ಪಕ್ಷದ ವರಿಷ್ಠರ ಧೋರಣೆ ಬದಲಾಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಅದು ಹುಸಿಯಾಯಿತು. ಕನಿಷ್ಟ ಪಕ್ಷ ಈ ಬಿಹಾರ ಚುನಾವಣೆಯ ಫ‌ಲಿತಾಂಶದಿಂದಾದರೂ ಪಾಠ ಕಲಿಯಬೇಕು.

ಏಕಪಕ್ಷೀಯ ತೀರ್ಮಾನಗಳ ಬದಲು ಸಾಮೂಹಿಕ ಚರ್ಚೆ ಮೂಲಕ ನಿರ್ಧಾರ ಕೈಗೊಳ್ಳುವಂತಾಗಬೇಕಿದೆ’ ಎಂದು ತಮ್ಮ ಹೆಸರು ಬಹಿರಂಗಪಡಿಸಲು ಇಚ್ಛಿಸದ ರಾಜ್ಯ ಬಿಜೆಪಿಯ ಹಿರಿಯ ನಾಯಕರೊಬ್ಬರು “ಉದಯವಾಣಿ’ ಜತೆ ಮಾತನಾಡಿ ಪರೋಕ್ಷವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಈ ಫ‌ಲಿತಾಂಶದ ಬೆನ್ನಲ್ಲೇ ಪಕ್ಷದ ಹಲವು ರಾಜ್ಯ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂಬ ಹೇಳಿಕೆಗಳನ್ನು ನೀಡತೊಡಗಿದ್ದಾರೆ. ಆ ಮೂಲಕ ಪಕ್ಷದಲ್ಲಿನ ವ್ಯವಸ್ಥೆ ಬದಲಾಗಬೇಕು ಎಂಬ ಆಶಯವನ್ನು ಪರೋಕ್ಷವಾಗಿ ಹೊರಹಾಕುತ್ತಿದ್ದಾರೆ.
ವಿಜಯ್‌ ಮಲಗಿಹಾಳ
-ಉದಯವಾಣಿ

Write A Comment