ಕರ್ನಾಟಕ

ಬಿಹಾರದಲ್ಲಿ ಬಿಜೆಪಿಗೆ ಜನತೆ ತಕ್ಕ ಪಾಠ ಕಲಿಸಿದ್ದಾರೆ : ಖರ್ಗೆ

Pinterest LinkedIn Tumblr

khargeಬೆಂಗಳೂರು, ನ.8- ಮೀಸಲಾತಿ ಪುನರ್‌ರಚನೆ, ಅಸಹಿಷ್ಣುತೆ, ದಾದ್ರಿ ಘಟನೆ, ದಲಿತ ಮಕ್ಕಳ ಸಜೀವ ದಹನ ಮುಂತಾದ ಘಟನೆಗಳನ್ನು ಸಮರ್ಥಿಸಿಕೊಂಡಿದ್ದ ಬಿಜೆಪಿಗೆ ಬಿಹಾರ ಜನತೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ಇಂದು ಪ್ರಕಟಗೊಂಡ ಬಿಹಾರ ಚುನಾವಣೆಯ ಫಲಿತಾಂಶದ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ಚುನಾವಣೆಯ ಫಲಿತಾಂಶ ಜೆಡಿಯು ಮೈತ್ರಿ ಕೂಟದ ಮಹಾ ಗೆಲುವು. ಅದೇ ರೀತಿ ಸಂವಿಧಾನಕ್ಕಿಂತ ನಾನೇ ಮಿಗಿಲು ಎಂದು ಹೇಳಿಕೊಳ್ಳುತ್ತಿದ್ದ ಪ್ರಧಾನಿ ನರೇಂದ್ರ ಮೋದಿಯವರ ಮಹಾ ಸೋಲು ಎಂದು ಅವರು ಬಣ್ಣಿಸಿದ್ದಾರೆ.

ನರೇಂದ್ರ ಮೋದಿ, ಅಮಿತ್ ಶಾ ಆರ್‌ಎಸ್‌ಎಸ್ ಅವರನ್ನು ಬಿಹಾರ ಜನತೆ ಸಾರಾ ಸಗಟಾಗಿ ತಿರಸ್ಕರಿಸಿದ್ದಾರೆ. ಅಸಹಿಷ್ಣುತೆ , ದಲಿತ ಮಕ್ಕಳ ಸಜೀವ ದಹನ , ದಾದ್ರಿಯಲ್ಲಿ ಹತ್ಯೆ ಮಾಡಿದ ಘಟನೆಗಳನ್ನು ಬಿಜೆಪಿ ನಾಯಕರು ಸಮರ್ಥಿಸಿಕೊಂಡಿದ್ದರು. ದಲಿತರನ್ನು ನಾಯಿಗೆ ಹೋಲಿಸಿ ಮಾತನಾಡಿದರು. ಸಂವಿಧಾನದ ವ್ಯವಸ್ಥೆಯಲ್ಲಿ ಎಲ್ಲರಿಗೂ ಅವರದೇ ಆದ ಗೌರವವಿರುತ್ತದೆ. ಅದನ್ನು ಬಿಜೆಪಿ ಅರಿತುಕೊಳ್ಳಲಿಲ್ಲ. ಬಿಹಾರ ಜನತೆ ಅದಕ್ಕೆ ತಕ್ಕ ಪಾಠ ಕಲಿಸಿದ್ದಾರೆ. ನಾವು ಕೂಡ ಜೆಡಿಯು ಮೈತ್ರಿಕೂಟದೊಂದಿಗೆ ಕೈ ಜೋಡಿಸಿದ್ದೆವು. ಜಾತ್ಯತೀತ ಶಕ್ತಿಗಳನ್ನು ಅಲ್ಲಿನ ಜನತೆ ಬೆಂಬಲಿಸಿದ್ದಾರೆ. ಮೋದಿ ಅಲೆ ನಡೆಯುವುದಿಲ್ಲ ಎಂದು ಸಾಬೀತಾಗಿದೆ ಎಂದು ಖರ್ಗೆ ತಿಳಿಸಿದರು.

Write A Comment