ಕರ್ನಾಟಕ

ಆಂಜನೇಯ ಮೇಲಿನ ಆರೋಪ ನಿರಾಧಾರ : ಜಾತೀವಾದಿಗಳಿಂದ ಪೂರ್ವನಿಯೋಜಿತ ಸಂಚು

Pinterest LinkedIn Tumblr

anjaಬೆಂಗಳೂರು, ನ.8- ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಚ್.ಆಂಜನೇಯ ಅವರ ಮೇಲೆ ಹೊರಿಸಲಾಗಿರುವ ಆರೋಪಗಳು ನಿರಾಧಾರವಾಗಿದ್ದು, ಸದಾಶಿವ ಆಯೋಗದ ವರದಿಯು ಸಚಿವ     ಸಂಪುಟದಿಂದ ಬಂದಿರುವ ಸಂದರ್ಭದಲ್ಲೇ ಜಾತೀವಾದಿಗಳು ನಡೆಸಿರುವ ಇದೊಂದು ಪೂರ್ವನಿಯೋಜಿತ ಸಂಚು ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಕಿಡಿಕಾರಿದೆ.

ಆಯೋಗದ ವರದಿಯು ಚರ್ಚಿಸುವ ಸಂದರ್ಭದಲ್ಲೇ ಪಿತೂರಿ ನಡೆಸಿ ಹಗರಣವನ್ನು ಬಿಂಬಿಸಿ ರಾಜ್ಯಾದ್ಯಂತ ಪ್ರಚಾರವಾಗುವಂತೆ ಮಾಡುತ್ತಿರುವ ಹುನ್ನಾರದ ಹಿಂದೆ ಬಹಳ ದೊಡ್ಡ ಶಕ್ತಿಗಳ ಕೈವಾಡವಿರುವುದು ಸ್ಪಷ್ಟವಾಗಿದೆ. ಅದನ್ನು ಬಹಿರಂಗಪಡಿಸಲು ಸೂಕ್ತ ಸಮಿತಿಯನ್ನು ರಚಿಸಿ ಅಸ್ಪಶ್ಯರಲ್ಲಿ ಅಸ್ಪಶ್ಯರ ಪರವಾಗಿ ಪ್ರತಿನಿಧಿಸುತ್ತಿರುವ ಏಕೈಕ ಮಾದಿಗ ಸಮುದಾಯದ ಸಚಿವರಿಗೆ ಆಗುತ್ತಿರುವ ಶೋಷಣೆಯನ್ನು ತಪ್ಪಿಸಿ ವಿರೋಧ ಪಕ್ಷಗಳು ರಾಜೀನಾಮೆ ಕೇಳುವುದನ್ನು ಕೂಡಲೇ ನಿಲ್ಲಿಸಬೇಕು.

ಆಧಾರಗಳೇ ಇಲ್ಲದ ಹಗರಣದ ನೆಪವೊಡ್ಡಿ ಸಚಿವ ಸ್ಥಾನ ತಪ್ಪಿಸಲು ಪ್ರಯತ್ನಿಸಿದರೆ ಇದು ಜಾತಿವಾದಿಗಳ ಕುತಂತ್ರವೆಂದು ಸಮುದಾಯವು ಭಾವಿಸಬೇಕಾಗುತ್ತದೆ. ಈಗಾಗಲೇ ಸದಾಶಿವ ಆಯೋಗದ ವರದಿ ಜಾರಿಯಾಗದೇ ಇರುವುದರಿಂದ ಮಾದಿಗ ಸಮುದಾಯಕ್ಕೆ ತೀವ್ರ ನೋವುಂಟಾಗಿದೆ. ಇನ್ನು ರಾಜಿನಾಮೆ ಕೇಳಿದರೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎಂದು ಸಮಿತಿಯ ಗೌರವಾಧ್ಯಕ್ಷ ಮಾರೆಪ್ಪ ಹಾಗೂ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುತಂತ್ರ ಮಾಡುವವರು ಯಾರೇ ಆಗಿರಲಿ ಯಾವುದೇ ಪಕ್ಷವಾಗಿರಲಿ ಅಂತಹವರಿಗೆ ಮುಂದಿನ ಚುನಾವಣೆಯಲ್ಲಿ ಮಾದಿಗ ಸಮುದಾಯದವರು ತಕ್ಕ ಪಾಠ ಕಲಿಸುತ್ತೇವೆ.

ರಾಜ್ಯದಲ್ಲಿ ಎಷ್ಟೋ ದೊಡ್ಡ ಮನುಷ್ಯರೆನಿಸಿಕೊಂಡವರ ಹಗರಣಗಳು ಹೇಗೆ ಸೂಕ್ತ ಸಮಿತಿಯ ಮೂಲಕ ತನಿಖೆಗೊಳಪಡಿಸಲಾಗಿದೆಯೋ ಹಾಗೆಯೇ ಇದನ್ನು ಕೂಡ ತನಿಖೆಗೊಳಪಡಿಸಿ ಸತ್ಯಾ ಸತ್ಯತೆಗಳನ್ನು ಬಹಿರಂಗಪಡಿಸಲಿ. ಇಲ್ಲವಾದರೆ ನಾವು ರಾಜ್ಯಾದ್ಯಂತ ಹಂತ ಹಂತವಾಗಿ ಉಗ್ರವಾದ ಹೋರಾಟವನ್ನು ಸಮಿತಿಯಿಂದ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ಸಚಿವರ ಎಲ್ಲಾ ಕ್ರಾಂತಿಕಾರಿ ಅಭಿವೃದ್ಧಿ ಕೆಲಸಗಳಿಗೆ ನಾವು ಸದಾ ಬೆಂಬಲಿಸುತ್ತೇವೆ ಎಂದೂ, ಒಬ್ಬ ಸಚ್ಛಾರಿತ್ರ್ಯವುಳ್ಳ ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸುತ್ತಿರುವ ಹೋರಾಟಗಾರರಾದ ಎಚ್. ಆಂಜನೇಯ ಇವರಿಗೆ ರಾಜ್ಯದ ಎಲ್ಲಾ ಪ್ರಗತಿಪರ ಚಿಂತಕರು, ಹೋರಾಟಗಾರರು ನೈತಿಕ ಬೆಂಬಲ ನೀಡಬೇಕೆಂದು ಮನವಿ ಮಾಡಿದ್ದಾರೆ.

Write A Comment