ಕರ್ನಾಟಕ

ಪ್ಲಾಸ್ಟಿಕ್ ಬಳಕೆ ಕೈಬಿಡುವಂತೆ ಮೇಯರ್ ಕರೆ; ಬಿಜೆಪಿ ಮಾಡಿದ ಸಾಲಕ್ಕೆ ಪ್ರತಿದಿನ 1 ಕೋಟಿ ರೂ.ಬಡ್ಡಿ

Pinterest LinkedIn Tumblr

mayor-fiಬೆಂಗಳೂರು, ನ. 7: ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ಕೈಬಿಡುವಂತೆ ಸಾರ್ವಜನಿಕರಿಗೆ ಮೇಯರ್ ಬಿ.ಎನ್. ಮಂಜುನಾಥರೆಡ್ಡಿ ಕರೆ ನೀಡಿದ್ದಾರೆ. ಶನಿವಾರ ಕೆ.ಆರ್.ಪುರದ ವಿಜ್ಞಾನನಗರ ವಾರ್ಡ್‌ನಲ್ಲಿ ಬಿಬಿಎಂಪಿ ವತಿಯಿಂದ ನಿರ್ಮಾಣವಾಗಿರುವ ಬಹುಪಯೋಗಿ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬೆಂಗಳೂರಿನ ನಾಗರಿಕರಾದ ನಾವು ಸ್ವಾರ್ಥಿಗಳಾಗಿದ್ದೇವೆ. ನಮ್ಮ ಮನೆ ಹಾಗೂ ನಮ್ಮ ಬಡಾವಣೆಗಳಲ್ಲಿನ ಕಸ ಸ್ವಚ್ಛವಾದರೆ ಸಾಕು. ಆ ಕಸ ಯಾವ ಊರಿಗೆ ಹೋಗುತ್ತಿದೆ ಅಲ್ಲಿನ ಜನ, ಪರಿಸರದ ಮೇಲೆ ಯಾವ ರೀತಿಯ ದುಷ್ಪರಿಣಾಮ ಬೀರುತ್ತಿದೆ ಎಂಬುದರ ಕುರಿತು ಆಲೋಚನೆ ಮಾಡುವುದೆ ಇಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಕಸ ವಿಲೇವಾರಿ ಘಟಕಗಳು ಸ್ಥಾಪನೆಯಾಗಿರುವ ಗ್ರಾಮಗಳಲ್ಲಿ ವಾಸಿಸುವ ಜನರ ಪರಿಸ್ಥಿತಿ ಹೇಳಲು ಸಾಧ್ಯವಾಗುವುದಿಲ್ಲ. ಆದುದರಿಂದ, ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆಯನ್ನು ಕೈಬಿಡುವ ಮೂಲಕ ಬೆಂಗಳೂರಿನ ಸ್ವಚ್ಛತೆಗೆ ನಿಮ್ಮ ಕೊಡುಗೆಯನ್ನು ನೀಡಿ ಎಂದು ಅವರು ಮನವಿ ಮಾಡಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರವು ಈಗಾಗಲೇ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಿ ಆದೇಶ ಹೊರಡಿಸಿದೆ. ಸಾರ್ವಜನಿಕರ ಸಹಕಾರವಿಲ್ಲದೆ ಯಾವುದೇ ಕೆಲಸಗಳನ್ನು ಯಶಸ್ವಿಯಾಗಿ ಪೂರೈಸಲು ಸಾಧ್ಯವಿಲ್ಲ. ಆದುದರಿಂದ, ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ನಿಮ್ಮ ಸಹಕಾರವು ಅತ್ಯಗತ್ಯ ಎಂದು ಮೇಯರ್ ಹೇಳಿದರು. ಬಿಬಿಎಂಪಿ ವತಿಯಿಂದ 1.50 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಬಹುಮಹಡಿ ಕಟ್ಟಡದ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು. ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಯುವಕರಿಗೆ ಅನುಕೂಲವಾಗುವಂತೆ ಈ ಕಟ್ಟಡದಲ್ಲಿನ ಗ್ರಂಥಾಲಯವನ್ನು ಡಿಜಿಟಲೀಕರಣಗೊಳಿಸಲು ನೆರವು ನೀಡಲಾಗುವುದು ಎಂದು ಅವರು ಹೇಳಿದರು.

ಪಾಲಿಕೆಯಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಮಹಾನುಭಾವರು(ಬಿಜೆಪಿ) ಗುತ್ತಿಗೆದಾರರಿಗೆ ಬಾಕಿ ಪಾವತಿ ಮಾಡಲು ಸಾಧ್ಯವಿಲ್ಲದಂತೆ ಆರ್ಥಿಕ ಪರಿಸ್ಥಿತಿಯನ್ನು ಹದಗೆಡಿಸಿದ್ದಾರೆ. ಇದರಿಂದಾಗಿ, ಪ್ರತೀ ದಿನ 1 ಕೋಟಿ ರೂ.ಬಡ್ಡಿ ಕಟ್ಟುವಂತಾಗಿದೆ ಎಂದು ಅವರು ಕಿಡಿಕಾರಿದರು. ಶಾಸಕ ಬಿ.ಎ.ಬಸವರಾಜ ಮಾತನಾಡಿ, ಬಿಬಿಎಂಪಿಯ 1 ಕೋಟಿ ರೂ.ಹಾಗೂ ಶಾಸಕರ ಅನುದಾನದಿಂದ 50 ಲಕ್ಷ ರೂ.ಗಳನ್ನು ಒದಗಿಸಿ ಈ ಕಟ್ಟಡವನ್ನು ನಿರ್ಮಿಸಲಾಗಿದೆ. ಬಡಾವಣೆಯ ನಿವಾಸಿಗಳ ಅನುಕೂಲಕ್ಕಾಗಿ ವಾರ್ಡ್ ಕಚೇರಿ, ಸಾರ್ವಜನಿಕ ಗ್ರಂಥಾಲಯ, ಟೇಬಲ್ ಟೆನಿಸ್ ಕೋರ್ಟ್, ತೆರಿಗೆ ಹಾಗೂ ಆರೋಗ್ಯ ವಿಭಾಗವನ್ನು ತೆರೆಯಲಾಗಿದೆ ಎಂದರು. ಈ ಕಟ್ಟಡದ ಮೇಲ್ಭಾಗವನ್ನು 1.50 ಕೋಟಿ ರೂ.ವೆಚ್ಚದಲ್ಲಿ ಪೂರ್ಣಗೊಳಿಸಿ, ಸಾರ್ವಜನಿಕರಿಗೆ ಇನ್ನು ಹೆಚ್ಚಿನ ಅನುಕೂಲಗಳನ್ನು ಕಲ್ಪಿಸಲಾಗುವುದು. ಕೆ.ಆರ್.ಪುರ ಕ್ಷೇತ್ರಕ್ಕೆ 100 ಕೋಟಿ ರೂ.ಅನುದಾನ ಮಂಜೂರಾಗಿದ್ದು, ಎಲ್ಲ ವಾರ್ಡ್‌ಗಳಿಗೂ ತಲಾ 8-10 ಕೋಟಿ ರೂ.ಗಳನ್ನು ಹಂಚಿಕೆ ಮಾಡಿ, ರಸ್ತೆ, ಚರಂಡಿ, ಬೀದಿ ದೀಪ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯರಾದ ಎಸ್.ಜಿ.ನಾಗರಾಜ್, ವಿ.ಸುರೇಶ್, ನಿತೀನ್ ಪುರುಷೋತ್ತಮ್, ರಾಧಮ್ಮ ವೆಂಕಟೇಶ್, ಉದಯ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಪ್ರಸಾದ್‌ರೆಡ್ಡಿ, ಜಂಟಿ ಆಯುಕ್ತ ಉಮಾನಂದ ರೈ, ಕೆಆರ್‌ಡಿಎಲ್ ಅಧಿಕಾರಿ ಶಶಿಧರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Write A Comment