ಕರ್ನಾಟಕ

ಮತ್ತೆ ಗಾರ್ಬೆಜ್ ಸಿಟಿಯಾದ ಬೆಂಗಳೂರು

Pinterest LinkedIn Tumblr

garbegeಬೆಂಗಳೂರು, ನ.5- ನಗರದ ಕಸ ವನ್ನು ಯಾವುದೇ ಕಾರಣಕ್ಕೂ ಕಸ ವಿಲೇವಾರಿ ಘಟಕಗಳಿಗೆ ಸಾಗಿಸಲು ಅನುಮತಿ ನೀಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಎಲ್ಲೆಂದರಲ್ಲಿ ರಾಶಿ ರಾಶಿ ಕಸ ಕಂಡು ಬರುತ್ತಿದೆ. ದಸರಾ ಹಬ್ಬದ ಕಸವೂ ಸೇರಿದಂತೆ ರಸ್ತೆ ಬದಿಗಳಲ್ಲಿ ರಾಶಿ ರಾಶಿ ಕಸ ಬಿದ್ದಿರುವ ನಡುವೆಯೇ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಕಸ ಕೊಳೆತು ದುರ್ವಾಸನೆ ಬೀರುತ್ತಿರು ವುದರಿಂದ ನಾಗರಿಕರು ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ಒಂದೆರಡು ದಿನಗಳಲ್ಲಿ ಬೆಳಕಿನ ದೀಪಾವಳಿ ಹಬ್ಬವೂ ಸಮೀಪಿಸುತ್ತಿದ್ದು, ಪಟಾಕಿ ಕಸವೂ ಸೇರಿದರೆ ಇಡೀ ಬೆಂಗಳೂರು ನಗರ ಗಾರ್ಬೆಜ್ ಸಿಟಿಯಾಗಿ ಪರಿವರ್ತನೆ ಗೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ.

ದೊಡ್ಡಬಳ್ಳಾಪುರದ ಚಿಗರನಹಳ್ಳಿ ಸಮೀಪದ ಎಂಎಸ್‌ಜಿಪಿ ಮತ್ತು ಟೆರ್ರಾಫಾರಂ ಕಸ ವಿಲೇವಾರಿ ಘಟಕಗಳಿಗೆ ಕಸ ಹಾಕಲು ಅವಕಾಶ ನೀಡುವುದಿಲ್ಲ ಎಂದು ಸ್ಥಳೀಯರು ಕಳೆದ 5 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ನಿನ್ನೆ ಬೆಂಗಳೂರು ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಮೇಯರ್ ಮಂಜುನಾಥ ರೆಡ್ಡಿ, ಉಪ ಮೇಯರ್ ಹೇಮಲತಾ ಗೋಪಾಲಯ್ಯ ಮತ್ತಿತರರು ಪ್ರತಿಭಟನಾ ಸ್ಥಳಕ್ಕೆ ತೆರಳಿ ಗ್ರಾಮಸ್ಥರ ಮನವೊಲಿಸುವಲ್ಲಿ ನಡೆಸಿದ ಯತ್ನ ವಿಫಲವಾಗಿದೆ. ರಾತ್ರಿಯಿಂದ ಪ್ರತಿಭಟನಾಕಾರರು ಅಹೋ ರಾತ್ರಿ ಧರಣಿ ನಡೆಸುತ್ತಿರು ವುದರಿಂದ ಬಿಬಿಎಂಪಿ ಕಸದ ಲಾರಿಗಳು ಕಸ ವಿಲೇವಾರಿ ಘಟಕ ಗಳತ್ತ ತೆರಳದಿರುವುದರಿಂದ ಇಂದು ಮತ್ತು ನಾಳೆ ನಗರದಲ್ಲಿ ಮತ್ತಷ್ಟು ಕಸ ಸಂಗ್ರಹವಾಗಿ ಹಲವಾರು ರೋಗ, ರುಜಿನಗಳು ಹೆಚ್ಚಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

ಕಸ ವಿಲೇವಾರಿಗೆ ವಿರೋಧವೇಕೆ?:

ಮಂಡೂರು ಮತ್ತು ಮಾವಳ್ಳಿ ಪುರದ ಸಮಸ್ಯೆ ನಂತರ ಬೆಂಗಳೂರಿನ ಕಸವನ್ನು ದೊಡ್ಡಬಳ್ಳಾಪುರ ಸಮೀಪದ ಟೆರ್ರಾಫಾರಂ ಮತ್ತು ಎಂಎಸ್‌ಜಿಪಿ ಘಟಕಗಳಿಗೆ ರವಾನಿಸಲಾಗುತ್ತಿತ್ತು.
ಅಲ್ಲಿನ ಸ್ಥಳೀಯರು ತಮ್ಮ ಆರೋಗ್ಯ ದೃಷ್ಟಿಯಿಂದ ಕಸ ಹಾಕಲು ಅನುಮತಿ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಮತ್ತು ಕೃಷ್ಣ ಭೈರೇಗೌಡ ಪ್ರತಿಭಟನಾಕಾರರನ್ನು ಭೇಟಿಯಾಗಿ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವುದಲ್ಲದೆ , ದಿನ ಕಳೆದಂತೆ ಕಸದ ಲಾರಿಗಳ ಸಂಖ್ಯೆ ಯನ್ನು ತಿಂಗಳಿಗೆ 20 ಲಾರಿಗಳನ್ನು ಕಡಿತಗೊಳಿಸ ಲಾಗುವುದು ಎಂದು ಭರವಸೆ ನೀಡಿದ್ದರು.ಹಸಿ ಮತ್ತು ಒಣ ತ್ಯಾಜ್ಯಗಳನ್ನು ಬೇರ್ಪಡಿಸಿದ ನಂತರವೇ ಕಸವನ್ನು ವಿಲೇವಾರಿ ಘಟಕಗಳಿಗೆ ಹಾಕಲಾಗುವುದು. ಸದ್ಯದಲ್ಲೇ 6 ಹೊಸ ವಿಲೇವಾರಿ ಘಟಕಗಳನ್ನು ಆರಂಭಿಸಿದ ನಂತರ ಹೆಚ್ಚಿನ ಕಸ ರವಾನಿಸುವುದಿಲ್ಲ ಎಂಬ ಭರವಸೆಯನ್ನು ನೀಡಲಾಗಿತ್ತು.ಆದರೆ ಸಚಿವರು ನೀಡಿದ ಭರವಸೆ, ಭರವಸೆಯಾಗಿಯೇ ಉಳಿದಿತ್ತು. ಟೆರ್ರಾಫಾರಂಗೆ ಬೇರ್ಪಡಿಸದ ಕಸ ಸಾಗಿಸಿದ ಹಿನ್ನೆಲೆಯಲ್ಲಿ ಅಲ್ಲಿನ ವಿಷಯುಕ್ತ ಲಿಚೆಟ್ ಭೂಮಿ ಸೇರಿ ಸುತ್ತಮುತ್ತಲ ಬೋರ್‌ವೆಲ್‌ಗಳಲ್ಲಿ ವಿಷಯುಕ್ತ ನೀರು ಬರುತ್ತಿದೆ.

ಸರ್ಕಾರದ ಈ ದಿವ್ಯ ನಿರ್ಲಕ್ಷ್ಯ ವನ್ನು ಖಂಡಿಸಿ ಟೆರ್ರಾಫಾರಂ ಮತ್ತು ಎಂಎಸ್‌ಜಿಪಿ ಘಟಕಗಳಿಗೆ ಸಂಪರ್ಕ ಕಲ್ಪಿಸುವ ದೊಡ್ಡ ಮಂಕನಾಳ ಸಮೀಪ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದು , ಕೊಟ್ಟ ಮಾತಿಗೆ ತಪ್ಪಿರುವ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವುದಲ್ಲದೆ, ಯಾವುದೇ ಕಾರಣಕ್ಕೂ ಕಸ ಹಾಕಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.ಹೊಸ ಘಟಕಗಳ ಆರಂಭ ಯಾವಾಗ?: ಮಂಡೂರು, ಟೆರ್ರಾ ಫಾರಂ ಕಸ ವಿಲೇವಾರಿ ಘಟಕಗಳಿಗೆ ನಿರೀಕ್ಷೆಗಿಂತ ಹೆಚ್ಚು ಕಸ ಹಾಕಲು ಅವಕಾಶ ನೀಡುವುದಿಲ್ಲ. 18 ತಿಂಗಳೊಳಗೆ 6 ಹೊಸ ವಿಲೇವಾರಿ ಘಟಕಗಳನ್ನು ಆರಂಭಿಸುವುದಾಗಿ ಸರ್ಕಾರ ನೀಡಿದ್ದ ಭರವಸೆ ಭರವಸೆಯಾಗಿಯೇ ಉಳಿದಿದೆ. ಕೆಸಿಡಿಸಿ, ಬಿಂಗೀಪುರ, ಲಕ್ಷ್ಮೀಪುರ, ದೊಡ್ಡ ಬಿದರಕಲ್ಲು , ಕನ್ನಹಳ್ಳಿ, ಸಮೀಪ ಕಸ ವಿಲೇವಾರಿ ಘಟಕಗಳ ಆರಂಭಕ್ಕೆ ಚಾಲನೆ ನೀಡಲಾಗಿತ್ತಾದರೂ ಅಲ್ಲಿನ ಕೆಲವು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಲ್ಲಿ ಸರ್ಕಾರ ವಿಫಲವಾದ್ದರಿಂದ 18 ತಿಂಗಳು ಕಳೆದರೂ ಘಟಕಗಳು ಕಾರ್ಯಾರಂಭ ಮಾಡದಿರುವುದೇ ಇಂದಿನ ಅನಾಹುತಗಳಿಗೆ ಕಾರಣವಾಗಿದೆ.

ಯಶಸ್ವಿಯಾಗುವರೇ ಜಾರ್ಜ್?:

ಬಿಬಿಎಂಪಿಯಲ್ಲಿ ಬಿಜೆಪಿ ಆಡಳಿತ ವಿದ್ದಾಗ ನಗರಕ್ಕೆ ಗಾರ್ಬೆಜ್ ಸಿಟಿ ಎಂಬ ಅಪಖ್ಯಾತಿ ಅಂಟಿಕೊಂಡಿತು ಎಂದು ಪ್ರಚಾರ ಮಾಡಿದ್ದ ಕಾಂಗ್ರೆಸ್ ಪಕ್ಷವೇ ಇಂದು ಅಧಿಕಾರ ನಡೆಸುತ್ತಿರು ವುದರಿಂದ ಶತಾಯ ಗತಾಯ ಮತ್ತೆ ಗಾರ್ಬೆಜ್ ಸಿಟಿ ಅಪಖ್ಯಾತಿ ಹೋಗಲಾಡಿಸುವ ಹೊಣೆ ಹೊರಬೇಕಿದೆ. ಆದರೆ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಬಿಜೆಪಿ ಆಡಳಿತದಲ್ಲಿ ಎದುರಾಗಿದ್ದ ಕಸದ ಸಮಸ್ಯೆಗಿಂತ ದುಪ್ಪಟ್ಟು ಸಮಸ್ಯೆ ಕಾಂಗ್ರೆಸ್ ಪಕ್ಷಕ್ಕೆ ಎದುರಾಗುವ ಸಾಧ್ಯತೆ ಇದೆ. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ಹೊಸ ಕಸ ವಿಲೇವಾರಿ ಘಟಕಗಳನ್ನು ಆರಂಭಿಸಲು ಮೀನಾಮೇಷ ಎಣಿಸುತ್ತಿರುವುದಕ್ಕೆ ಸರ್ಕಾರ ಭಾರೀ ಬೆಲೆ ತೆರಬೇಕಾದ ಪರಿಸ್ಥಿತಿ ಬಂದೊದಗಲಿದೆ. ಇಂತಹ ಸಂದರ್ಭದಲ್ಲೇ ಗೃಹ ಸಚಿವರಾಗಿದ್ದ ಕೆ.ಜೆ. ಜಾರ್ಜ್ ಅವರನ್ನು ಬೆಂಗಳೂರು ಅಭಿವೃದ್ಧಿ ಸಚಿವರನ್ನಾಗಿ ನೇಮಿಸಲಾಗಿದೆ. ನಗರವನ್ನು ಕಾಡುತ್ತಿರುವ ಕಸದ ಸಮಸ್ಯೆಗೆ ಜಾರ್ಜ್ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾದರೆ ಅವರು ಗೆದ್ದಂತೆ. ಇಲ್ಲವಾದರೆ ಪಕ್ಷದ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಅಸ್ತ್ರ: ಬೆಂಗಳೂರಿಗೆ ಕಾಡುತ್ತಿರುವ ಕಸದ ಸಮಸ್ಯೆಯನ್ನೇ ತಮ್ಮ ಅಸ್ತ್ರವನ್ನಾಗಿ ಮಾಡಿಕೊಂಡಿರುವ ಬಿಜೆಪಿಯವರು ಇದೇ ವಿಷಯವನ್ನು ಮುಂದಿಟ್ಟು ಕೊಂಡು ಕಾಂಗ್ರೆಸ್ ಪಕ್ಷದ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಲು ತೀರ್ಮಾನಿಸಿ ರುವುದರಿಂದ ಮುಂದಿನ ದಿನಗಳಲ್ಲಿ ಕಸದ ಕೆಸರೆರಚಾಟ ಹೆಚ್ಚಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

Write A Comment