ರಾಷ್ಟ್ರೀಯ

ಸ್ಮಾರ್ಟ್ ಸಿಟಿ ಯೋಜನೆಯಿಂದ ಊಟಕ್ಕೆ ಭಿಕ್ಷೆ ಬೇಡಬೇಕಾಗುತ್ತೆ : ಎಸ್ ಆರ್ ಪಾಟೀಲ್

Pinterest LinkedIn Tumblr

vijayaಬೆಂಗಳೂರು, ನ.5-  ಸ್ಮಾರ್ಟ್ ಸಿಟಿ ಯೋಜನೆಯಿಂದ ಗ್ರಾಮೀಣ ಭಾಗದ ಜನ ನಗರ ಪ್ರದೇಶಗಳಿಗೆ ಹೆಚ್ಚು ವಲಸೆ ಬಂದು ಹಳ್ಳಿಗಳಲ್ಲಿ ಕೃಷಿ ಮಾಡುವವರಿಲ್ಲದೆ ಮುಂದಿನ ದಿನಗಳಲ್ಲಿ ನಾವು ಭಿಕ್ಷೆ ಬೇಡಿ  ತಿನ್ನಬೇಕಾಗುತ್ತದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಎಸ್.ಆರ್. ಪಾಟೀಲ್ ಎಚ್ಚರಿಕೆ ನೀಡಿದರು. ನಗರದ ಕೆಂಪೇಗೌಡ ಆಸ್ಪತ್ರೆ ಆವರಣದಲ್ಲಿರುವ ಕುವೆಂಪು ಕಲಾಕ್ಷೇತ್ರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಮತ್ತು ಬೆಂಗಳೂರು ತಾಂತ್ರಿಕ ಮಹಾವಿದ್ಯಾ ಲಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಅಕಾಡೆಮಿಯ 8ನೆ ವಾರ್ಷಿಕೋತ್ಸವದಲ್ಲಿ ಹೊಸ ಪರಂಪರೆಯ ನಗರ ಪ್ರದೇಶಾಭಿವೃದ್ಧಿಗೆ ವಿಜ್ಞಾನ-ತಂತ್ರಜ್ಞಾನ ಎಂಬ ವಿಚಾರ ಸಂಕಿರಣದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಯೋಜನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಮಹಾತ್ಮ ಗಾಂಧೀಜಿಯವರು ಗ್ರಾಮಗಳು ಅಭಿವೃದ್ಧಿಯಾಗಬೇಕು ಎಂದು ಹೇಳಿದ್ದರು. ಎ.ಪಿ.ಜೆ.ಅಬ್ದುಲ್ ಕಲಾಂ ಅವರು ನಗರದ ಸೌಲಭ್ಯಗಳು ಹಳ್ಳಿಗಳಲ್ಲಿ ಸಿಗಬೇಕೆಂಬ ಪುರ ಯೋಜನೆ ಕಲ್ಪನೆ ನೀಡಿದರು. ಹೀಗಾಗಿ ಸ್ಮಾರ್ಟ್ ಸಿಟಿಗಳಿಗಿಂತಲೂ ಸ್ಮಾರ್ಟ್ ವಿಲೇಜ್‌ಗಳು ಹೆಚ್ಚು ಅಗತ್ಯವಿದೆ ಎಂದು ಹೇಳಿದರು. ಶೇ.61ರಷ್ಟು ಜನ ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ. ಅವರನ್ನು ಕಡೆಗಣಿಸುವುದು ಸರಿಯಲ್ಲ. ಸ್ಮಾರ್ಟ್ ಸಿಟಿ ಯೋಜನೆಯಿಂದ ಗ್ರಾಮೀಣ ಭಾಗದ ಜನ ನಾವೇಕೆ ಹಳ್ಳಿಯಂತಹ ಕೊಂಪೆಯಲ್ಲಿ ವಾಸಿಸಬೇಕು ಎಂಬ ಜಿಗುಪ್ಸೆಗೆ ಬಂದು ನಗರದತ್ತ ವಲಸೆ ಬಂದರೆ, ಕೃಷಿ ಮಾಡುವವರಿಲ್ಲದಂತಾಗುತ್ತಾರೆ. ಆ ನಂತರ ನಾವು ಊಟಕ್ಕಾಗಿ ಭಿಕ್ಷೆ ಬೇಡುವ ಪರಿಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದರು.

ಈ ಹಿನ್ನೆಲೆಯಲ್ಲಿ ನಾನು ನನ್ನ ಹುಟ್ಟೂರಾದ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬಾಡಿಗಂಡಿ ಗ್ರಾಮವನ್ನು ದತ್ತು ಪಡೆದು ನಗರದ ಸಂಪೂರ್ಣ ಸೌಲಭ್ಯಗಳನ್ನು ಒದಗಿಸುತ್ತಿದ್ದೇನೆ. ಇನ್ನೆರಡು ತಿಂಗಳಲ್ಲಿ ನನ್ನ ಊರು ಉಚಿತ ವೈ-ಫೈ ಸೌಲಭ್ಯ ಹೊಂದಲಿದೆ. ಇಂಟೆಲ್ ಸಂಸ್ಥೆ ಸಹಕಾರದಲ್ಲಿ ಗ್ರಾಮದ ಜನರಿಗೆ ಕಂಪ್ಯೂಟರ್ ತರಬೇತಿ ಕೊಡಿಸುತ್ತಿದ್ದೇನೆ. ಸರ್ಕಾರದ ನೆರವು ಪಡೆಯದೆ ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆ ಕೈಗೆತ್ತಿಕೊಂಡಿದ್ದು, ದೇಶದಲ್ಲೇ ಬಾಡಿಗುಂಡಿ ಮೊದಲ ಡಿಜಿಟಲ್ ವಿಲೇಜ್ ಆಗಲಿದೆ ಎಂದು ಹೇಳಿದರು. ಕರ್ನಾಟಕ ಐಟಿ ಕ್ಷೇತ್ರದಲ್ಲಿ ಜಗತ್ತಿನ ಎರಡನೆ ರಾಜ್ಯವಾಗಿದೆ. ಈಗ 40 ಲಕ್ಷ ಜನ ಕೆಲಸ ಮಾಡುತ್ತಿದ್ದಾರೆ. 2020ರ ವೇಳೆಗೆ ಇನ್ನೂ 40 ಲಕ್ಷ ಜನ ಉದ್ಯೋಗ ಪಡೆಯುವ ಸಾಧ್ಯತೆಯಿದೆ. ದೇಶದಲ್ಲಿರುವ 850 ಸಂಶೋಧನಾ ಸಂಸ್ಥೆಗಳ ಪೈಕಿ 400 ಸಂಸ್ಥೆಗಳು ಕರ್ನಾಟಕದಲ್ಲಿವೆ. ಇಡೀ ಜಗತ್ತು ನಮ್ಮ ರಾಜ್ಯದತ್ತ ನೋಡುತ್ತಿದೆ ಎಂದು ಹೇಳಿದರು.

ವಿಜ್ಞಾನಿ ಪ್ರೊ.ಯು.ಆರ್.ರಾವ್ ಮಾತನಾಡಿ, ವಿಜ್ಞಾನ-ತಂತ್ರಜ್ಞಾನಕ್ಕೆ ನಮ್ಮಲ್ಲಿ ಹೆಚ್ಚಿನ ಒತ್ತು ನೀಡಿಲ್ಲ. ಮಂಗಳಗ್ರಹಕ್ಕೆ ನಾವು ಕಾಲಿಟ್ಟಿದ್ದೇವೆ. ಆದರೆ, ರಕ್ಷಣಾ ಕ್ಷೇತ್ರಕ್ಕೆ ಅಗತ್ಯವಾದ ಸಣ್ಣ ಚೂರಿಯನ್ನೂ ಕೂಡ ಸ್ವಂತವಾಗಿ ತಯಾರಿಸಿಕೊಳ್ಳದೆ ಆಮದು ಮಾಡಿಕೊಳ್ಳುತ್ತಿದ್ದೇವೆ ಎಂದು ವಿಷಾದಿಸಿದರು. ಭಾರತ ಈವರೆಗೂ ಸ್ವಂತವಾಗಿ ಒಂದೇ ಒಂದು ನಾಗರಿಕ ವಿಮಾನವನ್ನೂ ತಯಾರಿಸಿಕೊಂಡಿಲ್ಲ. 400 ಕೋಟಿ ರೂ. ಖರ್ಚಿನಲ್ಲಿ ಮಂಗಳಯಾನ ಮಾಡಿದ್ದೇವೆ. ಆದರೆ, ಒಂದು ವಿಮಾನ ಆಮದು ಮಾಡಿಕೊಳ್ಳಲು 500 ಕೋಟಿ ರೂ. ಖರ್ಚು ಮಾಡುತ್ತಿದ್ದೇವೆ. ಮಂಗಳಗ್ರಹದಲ್ಲಿ ಫೋಟೋ ತೆಗೆಯಲು ಅತ್ಯಾಧುನಿಕ ಕ್ಯಾಮೆರಾ ತಯಾರು ಮಾಡಲಾಗಿದೆ. ಆದರೆ, ಜನಸಾಮಾನ್ಯರು ಬಳಸುವ ಕ್ಯಾಮೆರಾಗಳನ್ನು ತಯಾರಿಸಲಾಗದೆ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ರಕ್ಷಣಾ ಕ್ಷೇತ್ರದಲ್ಲಿ ಸಣ್ಣ ಚೂರಿಯಿಂದ ಹಿಡಿದು ಶೇ.40ರಷ್ಟು ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಇದಕ್ಕೆ ಕಾರಣ ವಿಜ್ಞಾನ-ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡದಿರುವುದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಕ್ಷಣಾ ಕ್ಷೇತ್ರದ ಸಾಮಗ್ರಿಗಳ ಉತ್ಪಾದನೆಗೆ ಸ್ವಾವಲಂಬನೆ ಸಾಧಿಸದೆ ಇದ್ದರೆ ಎಷ್ಟೇ ಜನ ಮುಖ್ಯಮಂತ್ರಿಗಳು, ಪ್ರಧಾನಮಂತ್ರಿಗಳು ಬಂದರೆ ಭದ್ರತೆ ವಿಷಯದಲ್ಲಿ ಯಶಸ್ವಿಯಾಗುವುದಿಲ್ಲ ಎಂದು ತಿಳಿಸಿದರು. ಇತ್ತೀಚೆಗೆ ಮೂಢನಂಬಿಕೆಗಳು ಹೆಚ್ಚುತ್ತಿರುವ ಬಗ್ಗೆಯೂ ಅವರು ಆಕ್ರೋಶ ವ್ಯಕ್ತಪಡಿಸಿದರು. ಗಣಪತಿ ಹಬ್ಬದ ನಂತರ ಬೆಂಗಳೂರಿನಲ್ಲಿ ಶೇ.10ರಷ್ಟು ತ್ಯಾಜ್ಯ ಹೆಚ್ಚಾಗಿದೆ. ಅದು ಸರಿಯಾಗಿ ನಿರ್ವಹಣೆಯಾಗದೆ ಡೆಂಘೀ ಜ್ವರ ವ್ಯಾಪಿಸಿದೆ. ಜ್ವರ ಬಂದಾಗ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಸಿಗಲಿಲ್ಲವೆಂದು ಗಲಾಟೆ ಮಾಡುವ ಜನ ಕಾಯಿಲೆ ಬರಲು ಕಾರಣವಾದ ಕಸ ವಿಲೇವಾರಿ ಮಾಡದ ಆಡಳಿತ ವ್ಯವಸ್ಥೆಯನ್ನು ಪ್ರಶ್ನಿಸುವುದಿಲ್ಲ. ಒಂದೆಡೆ ದೇವರಿಗೆ ಹಾರ ಹಾಕುತ್ತೇವೆ, ಅದೇ ರೀತಿ ಜನರಿಗೂ ಹಾರ ಹಾಕುತ್ತೇವೆ. ಈ ನಂಬಿಕೆ ಮತ್ತು ಮೂಢನಂಬಿಕೆಗಳ ನಡುವೆ ಸರಿಯಾದ ಜಾಗೃತಿ ಅಗತ್ಯ ಎಂದರು.

Write A Comment