ಬೆಂಗಳೂರು,ನ.2- ಕಳಸಾ ಬಂಡೂರಿ ಮತ್ತು ಮಹದಾಯಿ ಯೋಜನೆ ಅನುಷ್ಠಾನ ಕುರಿತಂತೆ ರಾಜ್ಯದಲ್ಲಿ ರೈತರ ಹೋರಾಟ ತಾರಕಕ್ಕೇರುತ್ತಿರುವ ಹಿನ್ನೆಲೆಯಲ್ಲಿ ವಿಧಾನ ಮಂಡಳದ ಉಭಯ ಸದನಗಳ ಸಮಿತಿಯ ನಿಯೋಗವನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ಕರೆದೊಯ್ದಿದ್ದಾರೆ. ಮಹದಾಯಿ ನ್ಯಾಯಾಧೀಕರಣ ಮಧ್ಯಂತರ ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ವಕೀಲ ಪಾಲಿ ಎಸ್.ನಾರಿಮನ್ ಅವರನ್ನು ನಿಯೋಗವು ಇಂದು ಸಂಜೆ ಭೇಟಿ ಮಾಡಲಿದೆ. ನವದೆಹಲಿಯಲ್ಲಿ ಇಂದು ಸಂಜೆ 5ಗಂಟೆಗೆ ವಕೀಲರನ್ನು ಭೇಟಿ ಮಾಡುವ ನಿಯೋಗವು ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನಾತ್ಮಕ ಹೋರಾಟ ರೂಪಿಸುವ ಬಗ್ಗೆ ಚರ್ಚೆ ನಡೆಸಲಿದೆ.
ಮಹದಾಯಿ ನ್ಯಾಯಾಧೀಕರಣ ಮಧ್ಯಂತರ ಅರ್ಜಿ ಸಲ್ಲಿಸುವುದರ ಹಿನ್ನೆಲೆಯಲ್ಲಿ ಅದರಿಂದಾಗುವ ಸಾಧಕ-ಬಾಧಕಗಳ ಬಗ್ಗೆ ಮತ್ತು ರಾಜ್ಯಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಯಾವ ರೀತಿ ಕಾನೂನಾತ್ಮಕ ಹೋರಾಟದ ರೂಪುರೇಷೆ ಸಿದ್ಧಗೊಳಿಸಬೇಕು ಎನ್ನುವುದರ ಬಗ್ಗೆ ನಿಯೋಗ ಸುಪ್ರೀಂಕೋರ್ಟ್ ವಕೀಲ ನಾರಿಮನ್ ಅವರಿಂದ ಸಲಹೆ ಮತ್ತು ಸೂಚನೆ ಪಡೆಯಲಿದ್ದಾರೆ.
ಈ ಹಿಂದೆ ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಮೋದಿ ಸಮರ್ಪಕವಾಗಿ ಸ್ಪಂದಿಸದ ಕಾರಣ ಮತ್ತು ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳು ರಾಜ್ಯದ ಬೇಡಿಕೆಗಳಿಗೆ ಸ್ಪಂದಿಸದ ಕಾರಣ ಮಹದಾಯಿ ನ್ಯಾಯಾಧೀಕರಣ ಮಧ್ಯಂತರ ಅರ್ಜಿ ಸಲ್ಲಿಸಬೇಕಾದ ಪರಿಸ್ಥಿತಿ ಬಂದಿದ್ದು , ಈ ಹಿನ್ನೆಲೆಯಲ್ಲಿ ಮಧ್ಯಂತರ ಅರ್ಜಿ ಸಲ್ಲಿಸುವುದರಿಂದ ಆಗುವ ಸಾಧಕ-ಬಾಧಕಗಳ ಬಗ್ಗೆ ಇಂದು ಸಂಜೆ ವಕೀಲ ನಾರಿಮನ್ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಮಾಜಿ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ನವಲಗುಂದದ ಜೆಡಿಎಸ್ ಶಾಸಕ ಕೋನರೆಡ್ಡಿ ನಿಯೋಗದಲ್ಲಿದ್ದಾರೆ.
ಮಠಾಧೀಶರ ಸಭೆ ಸರ್ಕಾರಗಳಿಗೆ ನುಂಗಲಾರದ ತುತ್ತು:
ಕಳಸಾ ಬಂಡೂರಿ ಮತ್ತು ಮಹದಾಯಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದೆಹಲಿಗೆ ಸರ್ವಪಕ್ಷ ನಿಯೋಗ ಕೊಂಡೊಯ್ದಿರುವ ಬೆನ್ನಲ್ಲೇ ಗದಗ್ ಜಿಲ್ಲೆಯ ನರಗುಂದದಲ್ಲಿ ಇಂದು ವಿವಿಧ ಮಠಗಳ ಮಠಾಧೀಶರು ಸಭೆ ನಡೆಸಿದ್ದಾರೆ.
ಸರ್ವಪಕ್ಷ ನಿಯೋಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡುವ ಭರವಸೆ ಮತ್ತು ತೀರ್ಮಾನವನ್ನಾಧರಿಸಿ ಮುಂದಿನ ಹೋರಾಟ ರೂಪಿಸಲು ನರಗುಂದದಲ್ಲಿಂದು ಕರೆದಿರುವ ಸಭೆಯಲ್ಲಿ ಮಠಾಧೀಶರು ಚರ್ಚೆ ನಡೆಸಿದರು.
ಕಳಸಾ ಬಂಡೂರಿ ಮತ್ತು ಮಹದಾಯಿ ಯೋಜನೆ ಅನುಷ್ಠಾನವಾಗುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿರುವ ಮಠಾಧೀಶರು ಈ ಹಿಂದೆ ಹೇಳಿಕೆ ನೀಡಿದಂತೆ ರಾಜ್ಯದಲ್ಲಿರುವ ಕೇಂದ್ರ ಸರ್ಕಾರದ ಕಚೇರಿಗಳಿಗೆ ಬೀಜ ಜಡಿದು ಮತ್ತು ತೆರಿಗೆಯನ್ನು ಪಾವತಿಸದಿರುವುದು ಹಾಗೂ ಬಂದ್ ನಂತರ ಹೋರಾಟಗಳನ್ನು ತೀವ್ರಗೊಳಿಸಲು ಮಠಾಧೀಶರು ತೀರ್ಮಾನ ಕೈಗೊಂಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಗೆ ಕರೆದೊಯ್ದಿರುವ ಸರ್ವಪಕ್ಷ ನಿಯೋಗಕ್ಕೆ ಕಳಸಾ ಬಂಡೂರಿ ಅನುಷ್ಠಾನ ಕುರಿತು ಕೈಗೊಳ್ಳುವ ತೀರ್ಮಾನ ಮತ್ತು ನಿರ್ಣಯ ಸಂಜೆ ವೇಳೆಗೆ ಹೊರಬೀಳುವ ಸಾಧ್ಯತೆ ಇದೆ.
ಮಠಾಧೀಶರು ಕೈಗೊಂಡಿರುವ ಈ ತೀರ್ಮಾನ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ.