ಕರ್ನಾಟಕ

ಕಳಸಾ: ತಡೆಗೋಡೆ ಒಡೆಯುವ ಬೆದರಿಕೆ; ಪೊಲೀಸ್‌ ಭದ್ರತೆ, ನಿಷೇಧಾಜ್ಞೆ ಜಾರಿ

Pinterest LinkedIn Tumblr

malaಬೆಳಗಾವಿ:  ಕಳಸಾ– ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತಪರ ಸಂಘಟನೆಗಳ ಸದಸ್ಯರು ಗುದ್ದಲಿ ಚಳವಳಿ ನಡೆಸುವ ಮೂಲಕ ಇದೇ 26ರಂದು ತಡೆಗೋಡೆ ಒಡೆಯುವುದಾಗಿ ಬೆದರಿಕೆ ಒಡ್ಡಿರುವುದರಿಂದ ಅಲ್ಲಿ ಬಿಗಿ ಪೊಲೀಸ್‌ ಭದ್ರತೆ ಒದಗಿಸಲಾಗಿದೆ.

ಅಲ್ಲದೆ, ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿ ಗ್ರಾಮದ ಬಳಿ ಇರುವ ಕಳಸಾ ತಡೆಗೋಡೆ ಸುತ್ತಮುತ್ತಲಿನ ಎರಡು ಕಿ.ಮೀ ವ್ಯಾಪ್ತಿಯಲ್ಲಿ ಇದೇ 26ರ ಬೆಳಿಗ್ಗೆ 6ರಿಂದ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಐದಕ್ಕಿಂತ ಹೆಚ್ಚು ಜನರು ಗುಂಪುಗುಂಪಾಗಿ ಓಡಾಡುವುದನ್ನು, ಕೈಯಲ್ಲಿ ಯಾವುದೇ ರೀತಿಯ ಆಯುಧ, ಮಾರಕಾಸ್ತ್ರ ಕೊಂಡೊಯ್ಯದಂತೆ ಸೂಚಿಸಿ ಜಿಲ್ಲಾಧಿಕಾರಿ ಎನ್‌.ಜಯರಾಮ್‌ ಆದೇಶ  ಹೊರಡಿಸಿದ್ದಾರೆ.

‘ತಡೆಗೋಡೆಗೆ ಭದ್ರತೆ ಒದಗಿಸಿ’: ಸಿ. ಎಂ.ಗೆ ಪತ್ರ
‘ಮಹಾದಾಯಿ ಪ್ರಕರಣವು ನ್ಯಾಯಮಂಡಳಿಯಲ್ಲಿ ವಿಚಾರಣೆ ಹಂತದಲ್ಲಿರುವುದರಿಂದ ತಡೆಗೋಡೆಗೆ ಸೂಕ್ತ ಭದ್ರತೆ ಒದಗಿಸದಿದ್ದರೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದು ಅನಿವಾರ್ಯವಾಗಲಿದೆ’ ಎಂದು  ಗೋವಾ ಮುಖ್ಯಮಂತ್ರಿ ಲಕ್ಷ್ಮೀಕಾಂತ್‌ ಪರ್ಸೇಕರ್‌ ಹಾಗೂ ಜಲಸಂಪನ್ಮೂಲ ಸಚಿವ ದಯಾನಂದ ಮಾಂಡ್ರೇಕರ್‌ ಅವರು ಕರ್ನಾಟಕದ ಮುಖ್ಯಮಂತ್ರಿ ಹಾಗೂ ಬೆಳಗಾವಿ ಜಿಲ್ಲಾಡಳಿತಕ್ಕೆ  ಪತ್ರ ಬರೆದು ತಿಳಿಸಿದ್ದಾರೆ.

ಅಲ್ಲದೆ, ‘ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಆರಂಭ ಆಗಲಿರುವ ಸಂದರ್ಭದಲ್ಲಿ ಈ ರೀತಿ ಪ್ರತಿಭಟನೆ, ಚಳವಳಿ ನಡೆಸಲು, ತಡೆಗೋಡೆ ಒಡೆಯುವ ದುಸ್ಸಾಹಸಕ್ಕೆ ಕೈಹಾಕುವುದಕ್ಕೆ ಕರ್ನಾಟಕ ಸರ್ಕಾರ ಅವಕಾಶ ನೀಡಬಾರದು. ಹೀಗೆ ಮಾಡಿ ನ್ಯಾಯಮಂಡಳಿ ಮೇಲೆ ಒತ್ತಡ ಹೇರುವುದು ಸರಿಯಲ್ಲ’ ಎಂದು  ಗೋವಾ ಮುಖ್ಯಮಂತ್ರಿ ಪತ್ರದಲ್ಲಿ ಹೇಳಿದ್ದಾರೆ.

ಒಡೆಯುವುದು ಸುಲಭವಲ್ಲ: ಕಳಸಾ ನಾಲೆಯಿಂದ ಮಲಪ್ರಭಾ ನದಿಗೆ ನೀರನ್ನು ತಿರುಗಿಸುವ ನಿಟ್ಟಿನಲ್ಲಿ ಬೃಹದಾಕಾರದ ಸುರಂಗ ಕಾಲುವೆ ನಿರ್ಮಿಸಲಾಗಿದೆ. ಸುರಂಗಕ್ಕೆ ಕಟ್ಟಿರುವ ತಡೆಗೋಡೆಯನ್ನು ಒಡೆಯುವುದು ಸುಲಭ ಸಾಧ್ಯವಲ್ಲ. ಕಣಕುಂಬಿ
ಗ್ರಾಮದ ಎಡ ಭಾಗದಲ್ಲಿನ ಗುಡ್ಡದಿಂದ ಹರಿದು ಬರುವ ಅನೇಕ ಝರಿಗಳ ನೀರು ಈ ಕಾಲುವೆಗುಂಟವೇ ಕಳಸಾ ನಾಲೆ ಪ್ರವೇಶಿಸುತ್ತದೆ.
ಹಾಗೆ ಹರಿದು ಬಂದ ನೀರೆಲ್ಲ ಈಗ ತಡೆಗೋಡೆಯ ಬಳಿ ಸಂಗ್ರಹಗೊಂಡಿದೆ. ತಡೆಗೋಡೆ ಕಣ್ಣಿಗೇ ಕಾಣುವುದಿಲ್ಲ.

‘ಮಲಪ್ರಭಾ ನದಿಗೆ ಕಳಸಾ ನಾಲಾ ಜೋಡಿಸುವ ಯೋಜನೆಗೆ ಅನುಮತಿ ದೊರೆತ ನಂತರ ಈ ತಡೆಗೋಡೆಯನ್ನು ಬೃಹತ್‌ ಪ್ರಮಾಣದ ಯಂತ್ರ ಹಾಗೂ ಡೈನಮೇಟ್‌ ಬಳಸಿ ಒಡೆಯಬೇಕಾಗುತ್ತದೆ. ಸುಲಭವಾಗಿ ಇದನ್ನು ಒಡೆಯಲಾಗದು ಎಂದು ನೀರಾವರಿ ನಿಗಮದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

Write A Comment