ಕರ್ನಾಟಕ

ಬೈಕ್‌ನಲ್ಲಿ ಬಂದು ಒಂಟಿ ಮಹಿಳೆಯರ ಸರ ಅಪಹರಿಸುತ್ತಿದ್ದ ಇರಾನಿ ಗುಂಪಿನ ಪ್ರಮುಖನೊಬ್ಬ ಸೇರಿ ಮೂವರ ಬಂಧನ

Pinterest LinkedIn Tumblr

chain-snatchers

ಬೆಂಗಳೂರು, ಅ.13: ನಗರದಲ್ಲಿ ಬೈಕ್‌ನಲ್ಲಿ ಬಂದು ಒಂಟಿ ಮಹಿಳೆಯರ ಸರ ಅಪಹರಿಸುತ್ತಿದ್ದ ಇರಾನಿ ಗುಂಪಿನ ಪ್ರಮುಖನೊಬ್ಬ ಸೇರಿ ಮೂವರನ್ನು ಪಶ್ಚಿಮ ವಿಭಾಗದ ಹಾಗೂ ಸಿಸಿಬಿ ಪೊಲೀಸರು ಬಂಧಿಸಿ 67 ಪ್ರಕರಣಗಳಿಗೆ ಸೇರಿದ 70 ಲಕ್ಷ ರೂ. ಮೌಲ್ಯದ 2.5 ಕೆಜಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಧಾರವಾಡ ಜನ್ನತ್‌ನಗರದ ಇರಾನಿ ಕಾಲೋನಿಯ ಅಬುಜರ್ ಆಲಿ ಅಲಿಯಾಸ್ ಅಬುಜರ್ (26), ಅಬುಲ್ ಹಸನ್ ಆಲಿಯಾಸ್ ಹಸನ್ (23) ಮತ್ತು ಗಿರೀಶ್ ರಾಜೇಗೌಡ ಅಲಿಯಾಸ್ ಬಾಂಬೆ ಗಿರೀಶ್ (38) ಬಂಧಿತ ಇರಾನಿ ತಂಡದ ಸರಗಳ್ಳರು. ಬಂಧಿತರಲ್ಲಿ ಅಬುಜರ್ ಆಲಿ ಗುಂಪಿನ ನಾಯಕನಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಮೂವರ ಬಂಧನದಿಂದ ನಗರದ ವಿವಿಧ ಠಾಣೆ ವ್ಯಾಪ್ತಿಗಳಲ್ಲಿ ನಡೆದಿರುವ 67 ಸರ ಅಪಹರಣ ಪ್ರಕರಣಗಳು ಪತ್ತೆಯಾಗಿವೆ.

ಬಂಧಿತರು ನೀಡಿದ ಮಾಹಿತಿ ಮೇರೆಗೆ 70 ಲಕ್ಷ ರೂ. ಬೆಲೆಯ 2.5 ಕೆಜಿ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಬಂಧಿತ ಮೂವರು 2013ರಿಂದ 2015ರ ಸಾಲಿನವರೆಗೆ 41 ಸರ ಅಪಹರಣ ಮಾಡಿದ್ದು, 60 ಲಕ್ಷ ರೂ. ಮೌಲ್ಯದ 2 ಕೆಜಿ ಚಿನ್ನಾಭರಣ, ಕೃತ್ಯಕ್ಕೆ ಬಳಸುತ್ತಿದ್ದ ಕಪ್ಪು ಪಲ್ಸರ್ ಬೈಕ್‌ನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಗುಂಪಿನ ನಾಯಕ ಅಬುಜಲ್ ಆಲಿಯಾನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಇನ್ನೂ 26 ಸರ ಅಪಹರಣ ಪ್ರಕರಣಗಳು ಬೆಳಕಿಗೆ ಬಂದಿವೆ. ಈತ ಜ್ಞಾನಭಾರತಿ-12, ವಿಜಯನಗರ-5, ಕಾಮಾಕ್ಷಿಪಾಳ್ಯ-4, ಸುಬ್ರಮಣ್ಯಪುರ-4, ಗಿರಿನಗರ-4, ಮೈಕೋಲೇಔಟ್-3, ಮಹದೇವಪುರ-3, ಸಿಕೆ ಅಚ್ಚುಕಟ್ಟು-3, ಕೆಂಗೇರಿ-3, ಕುಮಾರಸ್ವಾಮಿ ಲೇಔಟ್-2, ಚಂದ್ರಲೇಔಟ್-2, ಎಚ್‌ಎಎಲ್-2, ಕೊಡಿಗೇಹಳ್ಳಿ-2, ಯಲಹಂಕ-2, ಸಂಜಯನಗರ-2, ವೈಯಾಲಿಕಾವಲ್-2, ತಿಲಕ್‌ನಗರ-2, ವಿದ್ಯಾರಣ್ಯಪುರ-2, ಆರ್‌ಟಿ ನಗರ, ಬನಶಂಕರಿ, ಕೆ.ಜಿ.ನಗರ, ಯಲಹಂಕ ನ್ಯೂಟೌನ್, ಬಾಣಸವಾಡಿ-1, ಎಚ್‌ಎಸ್‌ಆರ್ ಲೇಔಟ್, ಬಸವೇಶ್ವರನಗರ, ತಲಘಟ್ಟಪುರ ಠಾಣೆ ವ್ಯಾಪ್ತಿಗಳಲ್ಲಿ ಸರಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಪಶ್ಚಿಮ ವಿಭಾಗದ ಹಾಗೂ ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಇರಾನಿ ಗುಂಪಿನ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Write A Comment