ಚೆನ್ನೈ, ಅ.13: ಕಾಡುಗಳ್ಳ ವೀರಪ್ಪನ್ ಮೃತಪಟ್ಟ 11ನೆಯ ವರ್ಷದ ತಿಥಿಯ ವೇಳೆ ಬಡಜನರಿಗೆ ಅನ್ನ ಸಂತರ್ಪಣೆ ನಡೆಸುವ ಅನ್ನದಾನಂ ಕಾರ್ಯಕ್ರಮಕ್ಕೆ ಮದ್ರಾಸ್ ಹೈಕೋರ್ಟ್ ವೀರಪ್ಪನ್ ಪತ್ನಿಗೆ ಅನುಮತಿ ನೀಡಿದೆ.
ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿ, ನನ್ನ ಪತಿ 2004ರ ಅ.18 ರಂದು ಸಾವನ್ನಪ್ಪಿದ್ದು, ಅವನ ಹೆಸರಿನಲ್ಲಿ ಪ್ರತಿವರ್ಷ ಅನ್ನದಾನ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದೇನೆ. ಆದರೆ ಈ ವರ್ಷ ಪೊಲೀಸರು ಅದಕ್ಕೆ ಅನುಮತಿ ನೀಡುತ್ತಿಲ್ಲ. ಮೆಟ್ಟೂರಿನಲ್ಲಿ ಅನ್ನದಾನಂ ಕಾರ್ಯಕ್ರಮ ನಡೆಸಲು ನನಗೆ ಅನುಮತಿ ನೀಡುವಂತೆ ಪೊಲೀಸರಿಗೆ ನಿರ್ದೇಶನ ಮಾಡಬೇಕೆಂದು ಮುತ್ತುಲಕ್ಷ್ಮಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಳು. ಅರ್ಜಿ ಪರಿಶೀಲಿಸಿದ ನ್ಯಾಯ ಮೂರ್ತಿ ಎಂ.ಎಂ.ಸುಂದರೇಶ್ ಅವರು ಇಂದು ತೀರ್ಪು ನೀಡಿ ಮುತ್ತುಲಕ್ಷ್ಮಿಗೆ ಅನುಮತಿ ನೀಡುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ.
