ಕರಾವಳಿ

ನಾಳೆ ಮೆಡಿಕಲ್ ಬಂದ್ : ಔಷಧಿಗಳನ್ನು ಇಂದೇ ಖರೀದಿಸಿ

Pinterest LinkedIn Tumblr

medical

ಬೆಂಗಳೂರು, ಅ.13: ಔಷಧಗಳ ಆನ್‌ಲೈನ್ ಮಾರಾಟಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿರುವುದನ್ನು ವಿರೋಧಿಸಿ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ ನಾಳೆ ಮುಷ್ಕರಕ್ಕೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಔಷಧ ಮಾರಾಟದಲ್ಲಿ ಭಾರೀ ವ್ಯತ್ಯಯವಾಗಲಿದೆ.

ಅಗತ್ಯ ಔಷಧ ಬೇಕಾದವರು ಇಂದೇ ಕೊಂಡಿಟ್ಟುಕೊಳ್ಳುವುದು ಒಳ್ಳೆಯದು. ರಾಜ್ಯದಲ್ಲಿರುವ ಸುಮಾರು 26 ಸಾವಿರ ಔಷಧ ಮಳಿಗೆಗಳು ನಾಳೆ ಬಂದ್ ಆಗಲಿವೆ. ಬೆಂಗಳೂರು ನಗರ ಒಂದರಲ್ಲೇ ಸುಮಾರು 1000 ಔಷಧ ಮಳಿಗೆಗಳಿದ್ದು, ಯಾವುದೇ ಔಷಧ ವ್ಯಾಪಾರ ವಹಿವಾಟು ನಡೆಯುವುದಿಲ್ಲ. ರೋಗಿಗಳು- ಸಾರ್ವಜನಿಕರು ತಮಗೆ ಬೇಕಾದ ಔಷಧ, ಇಂಜೆಕ್ಷನ್‌ಗಳನ್ನು ಇಂದೇ ಕೊಳ್ಳುವುದು ಸೂಕ್ತ. ಸಾಮಾನ್ಯವಾಗಿ ಔಷಧ ವ್ಯಾಪಾರ ಮುಷ್ಕರ ನಡೆದಿರಲಿಲ್ಲ. ನಾಳೆ ಪ್ರಥಮ ಬಾರಿಗೆ ದೇಶಾದ್ಯಂತ ಔಷಧ ವ್ಯಾಪಾರ ಮುಷ್ಕರ ನಡೆಯುತ್ತಿರುವುದರಿಂದ ಭಾರೀ ಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಇಂದು ಮಧ್ಯರಾತ್ರಿಯಿಂದಲೇ ಎಲ್ಲಾ ಔಷಧ ಮಳಿಗೆಗಳು ಬಾಗಿಲು ಮುಚ್ಚಲಿವೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಇರುವ ಔಷಧಾಲಯಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತವೆ. ವೈದ್ಯರ ಸಲಹೆ ಇಲ್ಲದೆ ಔಷಧಗಳನ್ನು ಖರೀದಿಸುವಂತಿಲ್ಲ. ಆದರೆ ಆನ್‌ಲೈನ್ ಮಾರಾಟದಲ್ಲಿ ಎಗ್ಗಿಲ್ಲದೆ ಔಷಧಗಳನ್ನು ಖರೀದಿಸಬಹುದಾಗಿದೆ. ಇದು ಮಾರಕವಾಗುತ್ತದೆ ಎಂಬುದು ಔಷಧ ವ್ಯಾಪಾರಿಗಳ ಅಭಿಪ್ರಾಯವಾಗಿದೆ. ಅಲ್ಲದೆ ಆನ್‌ಲೈನ್ ಮಾರಾಟಗಾರರು ಸಾಕಷ್ಟು ರಿಯಾಯಿತಿ ಘೋಷಿಸಿ ಮನಸೋ ಇಚ್ಛೆ ಬಂದಂತೆ ಔಷಧ ಮಾರಾಟ ಮಾಡುವುದರಿಂದ ಔಷಧ ಮಳಿಗೆಗಳು ಬಾಗಿಲು ಹಾಕಬೇಕಾಗುತ್ತದೆ. ಈ ಕಾರಣದಿಂದ ಆನ್‌ಲೈನ್ ಔಷಧ ವ್ಯಾಪಾರವನ್ನು ಕೂಡಲೇ ನಿಲ್ಲಿಸಬೇಕು. ಇದಕ್ಕಾಗಿ ಒಂದು ದಿನ ಸಾಂಕೇತಿಕ ಮುಷ್ಕರ ನಡೆಸುತ್ತೇವೆ. ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದು ಅಖಿಲ ಭಾರತ ಔಷ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಎಚ್ಚರಿಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮ: ಕೇಂದ್ರ ಸರ್ಕಾರದ ನೀತಿ ಖಂಡಿಸಿ ಔಷಧಿ ವ್ಯಾಪಾರಿಗಳು ಪ್ರತಿಭಟನೆ ಕೈಗೊಂಡಿರುವುದರಿಂದ ಜನಜೀವನಕ್ಕೆ ತೊಂದರೆಯಾಗದಂತೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚುವರಿ ಔಷಧಿ ದಾಸ್ತಾನು ಇಡುವಂತೆ ಸೂಚನೆ ನೀಡಲಾಗಿದೆ. ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

Write A Comment