ಬೆಂಗಳೂರು, ಅ.11-ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ 1995ರಿಂದ ಇದುವರೆಗೂ ಯಾವ್ಯಾವ ಅವಧಿಯಲ್ಲಿ ಎಷ್ಟೆಷ್ಟು ಅನುದಾನ ನೀಡಲಾಗಿದೆ ಎಂಬುದರ ಪೂರ್ಣ ಮಾಹಿತಿಯನ್ನು ಜನತೆಗೆ ಒದಗಿಸಲು ಉನ್ನತ ಮಟ್ಟದ ನ್ಯಾಯಾಂಗ ಸಮಿತಿ ರಚಿಸಬೇಕೆಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ. ಈ ಸಂಬಂಧ ಮೂರು ಪುಟಗಳ ಪತ್ರವನ್ನು ಮುಖ್ಯಮಂತ್ರಿಗಳಿಗೆ ಬರೆದಿದ್ದು, ರಾಜ್ಯದ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸಲು, ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಧ್ಯಕ್ಷತೆಯಲ್ಲಿ ಮೂರು ಜನರ ಒಂದು ಆಯೋಗವನ್ನು ರಚಿಸುವಂತೆ ಕೋರಿದ್ದಾರೆ.
ಆಯೋಗಕ್ಕೆ ಪೂರ್ಣ ಪ್ರಮಾಣದ ಸಿಬ್ಬಂದಿ ಒದಗಿಸಿ ಸಮಗ್ರ ವರದಿ ಪಡೆದು ಸತ್ಯಾಂಶವನ್ನು ಜನರ ಮುಂದಿಡಬೇಕು.
ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಮುಂದಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ. ಸಮಿತಿ ಮೂಲಕ ಇಲ್ಲಿಯವರೆಗೆ ಅಸಮತೋಲನ ನಿವಾರಣೆಗಾಗಿ ಕೈಗೊಂಡಿರುವ ಕ್ರಮಗಳು, ನೀಡಿರುವ ಅನುದಾನಗಳು, ಯೋಜನೆಗಳ ಕುರಿತ ಸಮಗ್ರ ವರದಿ ಪಡೆಯಬೇಕು ಎಂದಿದ್ದಾರೆ. ಉತ್ತರ ಕರ್ನಾಟಕ ಭಾಗಕ್ಕೆ ಆಯಾಯ ಬಜೆಟ್‌ನಲ್ಲಿ ನೀಡಿರುವ ಶೇಕಡವಾರು ಅನುದಾನ, ಅಂಕಿಅಂಶ ಸಹಿತ ಮಾಹಿತಿಯನ್ನು ಮುಂದಿಡಲು ಸಮಿತಿ ರಚಿಸಬೇಕಿದೆ. ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಅವರು ರಾಜಕೀಯ ಅನುಕೂಲಕ್ಕಾಗಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ದೇವೇಗೌಡರು ಯಾವುದೇ ಕೊಡುಗೆ ನೀಡಿಲ್ಲ ಎಂದು ಪದೇ ಪದೇ ಟೀಕೆ ಮಾಡುತ್ತಾ ಜನರಲ್ಲಿ ಅನುಮಾನದ ಬೀಜ ಬಿತ್ತುವ ಪ್ರಯತ್ನ ಮಾಡುತ್ತಿದ್ದಾರೆ.ನಾವು ಮುಖ್ಯಮಂತ್ರಿಯಾಗಿದ್ದಾಗ, ತಾವು ಹಣಕಾಸು ಮಂತ್ರಿಯಾಗಿ ಕೆಲಸ ಮಾಡಿದ್ದೀರಿ. ಇದೇ ರೀತಿ ಜೆ.ಎಚ್.ಪಟೇಲ್ ಹಾಗೂ ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದ ಅವಧಿಯೂ ಸೇರಿದಂತೆ 7 ವರ್ಷಗಳ ಕಾಲ ನಮ್ಮ ಪಕ್ಷದ ವತಿಯಿಂದ ರಾಜ್ಯ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ್ದೀರಿ. ಹೀಗಾಗಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ನೀಡಿರುವ ಕೊಡುಗೆಗಳ ಸಮಗ್ರ ಮಾಹಿತಿಯನ್ನು ಜನರಿಗೆ ಒದಗಿಸಬೇಕಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀಡಿರುವ ಕೊಡುಗೆಗಳಿಗಿಂತ ಬೇರೆ ಬೇರೆ ಪಕ್ಷದವರು ಮುಖ್ಯಮಂತ್ರಿಯಾಗಿದ್ದಾಗ ಉತ್ತರ ಕರ್ನಾಟಕದ ಅಭಿವೃದ್ದಿಗೆ ನೀಡಿರುವ ಕೊಡುಗೆಗಳೇ ಹೆಚ್ಚು. ತಾವು ಉತ್ತರ ಕರ್ನಾಟಕದ ಕೃಷಿ ಅಭಿವೃದ್ಧಿಗೆ ನೀರಾವರಿ ಯೋಜನೆಗಳಿಗೆ, ಲೋಕೋಪಯೋಗಿ ಕಾಮಗಾರಿಗಳಿಗೆ, ಗ್ರಾಮೀಣ ಮತ್ತು ಸಮಾಜ ಕಲ್ಯಾಣದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿರುವುದಾಗಿ ತಿಳಿಸಿದ್ದಾರೆ. ಡಾ.ಡಿ.ಎಂ.ನಂಜುಂಡಪ್ಪ ವರದಿ ಅನುಷ್ಟಾನಕ್ಕೂ ಮುನ್ನವೇ ಸಾಕಷ್ಟು ಕೊಡುಗೆ ನೀಡಿರುವುದಾಗಿ ಹೇಳಿದ್ದಾರೆ. ವಾಸ್ತವಾಂಶಗಳನ್ನು ಜನರ ಮುಂದಿಡುವ ಮೂಲಕ ರಾಜಕೀಯ ಪ್ರಚೋದಿತ ಟೀಕೆಗಳಿಗೆ ಉತ್ತರ ನೀಡಲು ಸರ್ವೋಚ್ಚ ನ್ಯಾಯಾಲಯ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಮೂರು ಮಂದಿ ಸದಸ್ಯರನ್ನೊಳಗೊಂಡ ಉನ್ನತಮಟ್ಟದ ನ್ಯಾಯಾಂಗ ಸಮಿತಿ ರಚಿಸುವಂತೆ ಗೌಡರು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.