ಮೈಸೂರು, ಅ.11: ಜಾಹೀರಾತಿಗೆ ಮರುಳಾಗಿ ಸ್ತ್ರೀವಶೀಕರಣದ ಯಂತ್ರಗಳಿಗೆ ಮೊರೆಹೋಗಿ ಹಣಕ್ಕಾಗಿ ಚೀಟಿ ವ್ಯವಹಾರ ನಡೆಸಿ ನಷ್ಟ ಹೊಂದಿ ಪ್ರಾಣವನ್ನು ಬಿಟ್ಟ ಕಥೆ ವಾಚ್ಮನ್ ಸಾವಿನ ತನಿಖೆ ನಡೆಸಿದ ಪೊಲೀಸರನ್ನು ಬೆಸ್ತು ಬೀಳುವಂತೆ ಮಾಡಿದೆ.
ಲಷ್ಕರ್ ಠಾಣೆ ವ್ಯಾಪ್ತಿಯ ಹರ್ಷ ರಸ್ತೆಯಲ್ಲಿರುವ ವರ್ದಮಾನ್ ಜೈನ್ ಭವನ ವಾಚ್ಮನ್ ನಂದೀಶ್(32) ಕಳೆದ ಸೆ.25ರಂದು ಮದ್ಯದಲ್ಲಿ ವಿಷ ಬೆರೆಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಾಚ್ಮನ್ ಆತ್ಮಹತ್ಯೆಗೆ ಕಾರಣ ಏನೆಂಬುದು ಎಷ್ಟೇ ವಿಚಾರಣೆ ನಡೆಸಿದರೂ ಪೊಲೀಸರಿಗೆ ತಿಳಿದು ಬಂದಿರಲಿಲ್ಲ. ಹಲವು ದುಷ್ಟಿಕೋನಗಳಲ್ಲಿ ತನಿಖೆ ಕೈಗೊಂಡಾಗ ನಂದೀಶ್ ಆತ್ಮಹತ್ಯೆ ಮಾಡಿಕೊಂಡ ದಿನದಂದೇ ಆತನಿಗೆ ಉತ್ತರ ಪ್ರದೇಶದಿಂದ ಬಂದಿದ್ದ ಕೊರಿಯರ್ ಆತ್ಮಹತ್ಯೆಯ ಹಿಂದಿನ ಕಥೆ-ವ್ಯಥೆಯನ್ನು ತೆರೆದಿಟ್ಟಿದೆ.
ಈತ ಮಹಿಳೆಯೊಬ್ಬರನ್ನು ವಶೀಕರಣ ಮಾಡಿಕೊಳ್ಳಲು ಜಾಹೀರಾತಿಗೆ ಮರುಳಾಗಿ ವಶೀಕರಣ ಯಂತ್ರಗಳನ್ನು ತರಿಸಿಕೊಳ್ಳಲು ಆರಂಭಿಸಿದ್ದಾನೆ. ತರಿಸಿಕೊಂಡ ಯಂತ್ರದಿಂದ ಪ್ರಯೋಜನ ಕಾಣದಿದ್ದಾಗ ಮತ್ತೊಂದು ಯಂತ್ರ ತರಿಸಿಕೊಳ್ಳುವುದನ್ನು ರೂಢಿಸಿಕೊಂಡಿದ್ದಾನೆ. ಈ ವಶೀಕರಣ ಯಂತ್ರವೊಂದಕ್ಕೆ 3999ರೂ.ಬೆಲೆಯಾಗಿದ್ದು, ಇದಕ್ಕಾಗಿ ಹಣ ಹೊಂದಿಸಲು ಚೀಟಿ ವ್ಯವಹಾರ ನಡೆಸಲು ಆರಂಭಿಸಿದ್ದಾನೆ.
ಚೀಟಿ ಕಟ್ಟಿದವರಿಗೂ ಹಣ ಹಿಂದಿರುಗಿಸದೆ ಆ ಹಣವನ್ನು ಈ ಯಂತ್ರಗಳಿಗೆ ಬಳಸಿಕೊಂಡು ನಷ್ಟ ಹೊಂದಿದ್ದಾನೆ. ಎಷ್ಟೆ ಹಣ ಖರ್ಚು ಮಾಡಿದರೂ ವಶೀಕರಣ ತಂತ್ರ ಫಲಕೊಡದಿದ್ದರಿಂದ ಹಾಗೂ ಚೀಟಿ ವ್ಯವಹಾರದಲ್ಲಿ ನಷ್ಟ ಹಾಗೂ ಅತಿಯಾದ ಸಾಲದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
