ಬೆಂಗಳೂರು, ಅ.8:ಕಳೆದ ಎರಡು ದಿನಗಳಿಂದ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ನಟ ಡಾ.ಶಿವರಾಜ್‌ಕುಮಾರ್ ಚೇತರಿಸಿಕೊಂಡಿದ್ದು, ಇಂದು ಆಸ್ಪತ್ರೆಯಿಂದ ಮನೆಗೆ ತೆರಳಿದರು. ತಮ್ಮ ನೆಚ್ಚಿನ ನಟ ಆಸ್ಪತ್ರೆಯಿಂದ ಬರುತ್ತಾರೆ ಎಂಬ ಸುದ್ದಿ ತಿಳಿದ ಅಭಿಮಾನಿಗಳು ಬೆಳಗ್ಗೆಯಿಂದಲೇ ಮಲ್ಯ ಆಸ್ಪತ್ರೆಯ ಮುಂದೆ ಜಮಾಯಿಸಿದ್ದರು. ಶಿವರಾಜ್‌ಕುಮಾರ್ ಆಸ್ಪತ್ರೆಯಿಂದ ಹೊರಬರುತ್ತಿದ್ದಂತೆ ಅಭಿಮಾನಿಗಳು ಹೂವಿನ ಮಳೆಗರೆದು ಚಪ್ಪಾಳೆ, ಸಿಳ್ಳೆಯ ಮೂಲಕ ಹರ್ಷ ವ್ಯಕ್ತಪಡಿಸಿದರು.
ನಿಮ್ಮ ಪ್ರೀತಿ-ವಿಶ್ವಾಸ ಹೀಗೇ ಇರಲಿ, ನಿಮಗೆ ನಾನು ಚಿರಋಣಿಯಾಗಿದ್ದೇನೆ. ನಾನು ಆರೋಗ್ಯವಾಗಿದ್ದೇನೆ. ಯಾರೂ ಆತಂಕ ಪಡುವುದು ಬೇಡ ಎಂದು ಶಿವರಾಜ್ ಕುಮಾರ್ ಅಭಿಮಾನಿಗಳತ್ತ ಕೈಬೀಸಿ ಹೇಳಿದರು.
ಒಂದು ವಾರ ಮನೆಯಲ್ಲಿ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ. ನಂತರ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದೇನೆ. ಇತ್ತೀಚೆಗೆ ನಡೆದ ಮಗಳ ಮದುವೆ ಹಾಗೂ ಸಿನಿಮಾ ಒತ್ತಡದಿಂದ ಸ್ವಲ್ಪ ಬಳಲಿದ್ದೆ. ಹೆಚ್ಚಿನ ವ್ಯಾಯಾಮ ಮಾಡಿದ್ದರಿಂದ ಆರೋಗ್ಯದಲ್ಲಿ ವ್ಯತ್ಯಾಸವಾಗಿತ್ತು. ಈಗ ಫಿಟ್ ಅಂಡ್ ಫೈನ್ ಆಗಿದ್ದೇನೆ ಎಂದು ಹೇಳಿ ಕುಟುಂಬದವರೊಂದಿಗೆ ತಮ್ಮ ನಿವಾಸಕ್ಕೆ ತೆರಳಿದರು. ಶಿವಣ್ಣ ಮನೆಗೆ ಆಗಮಿಸುತ್ತಿದ್ದಂತೆ ಹಿರಿಯರು ಆರತಿ ಬೆಳಗಿ ದೃಷ್ಟಿ ತೆಗೆದು ಮನೆಯೊಳಗೆ ಬರಮಾಡಿಕೊಂಡರು.
