ಕರ್ನಾಟಕ

150 ಆ್ಯಂಬುಲೆನ್ಸ್‌ಗಳಿಗೆ ಹಸಿರು ನಿಶಾನೆ; ಆ್ಯಂಬುಲೆನ್ಸನ್ನು ಓವರ್‌ಟೇಕ್ ಮಾಡಿದಲ್ಲಿ ಲೈಸೆನ್ಸ್ ರದ್ದು: ಸಿಎಂ ಎಚ್ಚರಿಕೆ

Pinterest LinkedIn Tumblr

Sidduuಬೆಂಗಳೂರು, ಅ.7: ಆ್ಯಂಬುಲೆನ್ಸ್ ವಾಹನಗಳನ್ನು ಹಿಂದಿಕ್ಕಿ ಸಾಗುವ ವಾಹನ ಚಾಲಕರ ಪರವಾನಿಗೆ ರದ್ದುಪಡಿಸಲು ಸಂಚಾರ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಎಚ್ಚರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಆ್ಯಂಬುಲೆನ್ಸ್ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಬುಧವಾರ ವಿಧಾನಸೌಧದ ಮುಂಭಾಗದಲ್ಲಿ ಆರೋಗ್ಯ ಇಲಾಖೆ ಏರ್ಪಡಿಸಿದ್ದ ನೂತನ ಆ್ಯಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು, ಆ್ಯಂಬುಲೆನ್ಸ್ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುವ ಬದಲಿಗೆ ಅವುಗಳನ್ನು ಹಿಂದಿಕ್ಕುವ ಹವ್ಯಾಸ ಬೆಳೆಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಆದುದರಿಂದ ಆ್ಯಂಬುಲೆನ್ಸ್ ವಾಹನಗಳನ್ನು ಹಿಂದಿಕ್ಕುವ ದ್ವಿಚಕ್ರ ವಾಹನ ಸವಾರರು ಹಾಗೂ ವಾಹನ ಚಾಲಕರ ಪರವಾನಿಗೆ ರದ್ದುಪಡಿಸಲು ಸಂಚಾರ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದ ಸಿದ್ದರಾಮಯ್ಯ, ಎಲ್ಲರಿಗೂ ಆರೋಗ್ಯ ಸೌಲಭ್ಯ ಕಲ್ಪಿಸಲು ರಾಜ್ಯ ಸರಕಾರ ಬದ್ಧ ಎಂದು ಘೋಷಿಸಿದರು.
ಆರೋಗ್ಯ ಕವಚ ಯೋಜನೆಯಡಿ 517 ಆ್ಯಂಬುಲೆನ್ಸ್ ವಾಹನಗಳಿದ್ದವು. ನಮ್ಮ ಸರಕಾರ ಆಡಳಿತಕ್ಕೆ ಬಂದ ಬಳಿಕ ಅವುಗಳ ಸಂಖ್ಯೆ 711ಕ್ಕೆ ಹೆಚ್ಚಿಸಲಾಗಿದೆ ಎಂದ ಸಿದ್ದರಾಮಯ್ಯ, ಪ್ರಸೂತಿ, ರಸ್ತೆ ಅಪಘಾತ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಜನ ಸಾಮಾನ್ಯರಿಗೆ ತುರ್ತು ಚಿಕಿತ್ಸೆ ಕಲ್ಪಿಸಲು ಆ್ಯಂಬುಲೆನ್ಸ್ ಸೇವೆ ಸಹಕಾರಿ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಆರೋಗ್ಯ ಸಚಿವ ಯು.ಟಿ.ಖಾದರ್, ಮೂರೂವರೆ ಲಕ್ಷಕ್ಕೂ ಅಧಿಕ ಕಿ.ಮೀ. ಕ್ರಮಿಸಿರುವ ಆ್ಯಂಬುಲೆನ್ಸ್‌ಗಳು ಪದೇ-ಪದೇ ದುರಸ್ತಿಗೆ ಒಳಗಾಗುತ್ತಿರುವುದರಿಂದ ಅಂತಹ ವಾಹನಗಳನ್ನು ಸ್ಥಗಿತಗೊಳಿಸಲಾಗಿದೆ. ಹಳೆಯ ವಾಹನಗಳ ಬದಲಿಗೆ 150 ಹೊಸ ಆ್ಯಂಬುಲೆನ್ಸ್‌ಗಳನ್ನು ಒದಗಿಸಲಾಗಿದೆ ಎಂದರು.
ಸಮಾರಂಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಬೈರತಿ ಬಸವರಾಜು, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅತುಲ್ ಕುಮಾರ್ ತಿವಾಸಿ, ಆಯುಕ್ತ ಪಿ.ಎಸ್. ವಸ್ತ್ರದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Write A Comment