ಕರ್ನಾಟಕ

ಮುಖ್ಯಮಂತ್ರಿ ಉದ್ಯೋಗ ಸೃಜನಾ ಯೋಜನೆಗೆ ಅಸ್ತು: ಜಯಚಂದ್ರ

Pinterest LinkedIn Tumblr

Jaya_____ಬೆಂಗಳೂರು, ಅ.7: ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿನ ಯುವಕ, ಯುವತಿಯರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ‘ಮುಖ್ಯಮಂತ್ರಿ ಉದ್ಯೋಗ ಸೃಜನಾ ಯೋಜನೆ’ಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಸುಮಾರು ಎರಡು ಸಾವಿರ ಯುವಕ, ಯುವತಿಯರಿಗೆ ಈ ಯೋಜನೆಯಿಂದ ಪ್ರಯೋಜನವಾಗಲಿದೆ ಎಂದರು.
ರಾಜ್ಯ ಸರಕಾರವು 10 ಲಕ್ಷ ರೂ.ವರೆಗೆ ಬಂಡ ವಾಳ ಹೂಡುವ ಯುವಕರಿಗೆ ಶೇ.25ರಷ್ಟು ಹಾಗೂ ಯುವತಿಯರಿಗೆ ಶೇ.35ರಷ್ಟು ಆರ್ಥಿಕ ಸಹಾಯವನ್ನು ಒದಗಿಸಲಿದೆ. ಖಾದಿ ಗ್ರಾಮೋದ್ಯೋಗ ಮಂಡಳಿಯ ಸಹಕಾರ ದೊಂದಿಗೆ ಈ ಯೋಜನೆಯನ್ನು ಅನುಷ್ಠಾನ ಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ 2015-16ನೆ ಸಾಲಿನಲ್ಲಿ 30 ಕೋಟಿ ರೂ.ಸಾಲ ಪಡೆಯಲು ಸರಕಾರದ ಖಾತರಿ ನೀಡಲು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಖಾಸಗಿ ಮತ್ತು ಸರಕಾರಿ ಸಹಭಾಗಿತ್ವದಲ್ಲಿ 100 ಮೆಟ್ರಿಕ್ ಟನ್ ಸಾಮರ್ಥ್ಯದ ಸ್ವಂತ ಗೋದಾಮುಗಳನ್ನು ನಿರ್ಮಿಸಿದರೆ ಪ್ರತೀ ಸಂಘಕ್ಕೆ 5 ಲಕ್ಷ ರೂ. ಸಹಾಯ ಧನ ಒದಗಿಸಲು ಸಚಿವ ಸಂಪುಟ ಸಂಪುಟ ಒಪ್ಪಿಗೆ ನೀಡಿದೆ ಎಂದು ಸಚಿವರು ಹೇಳಿದರು.
ಸರಕಾರದ ಸಚಿವಾಲಯದ ವಿವಿಧ ಇಲಾಖೆಗಳಲ್ಲಿ ಕಳೆದ ಮೇ 1 ರಿಂದ ಜು.31ರವರೆಗೆ 2,31,052 ಕಡತಗಳನ್ನು ಸ್ವೀಕರಿಸಲಾಗಿದ್ದು, 63 ಸಾವಿರ ಕಡತಗಳನ್ನು ವಿಲೇವಾರಿ ಮಾಡಲಾಗಿದೆ. ಶೇ.36.82ರಷ್ಟು ಪ್ರಗತಿ ಸಾಧಿಸಲಾಗಿದೆ. ಕಡತ ವಿಲೇವಾರಿ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವ ಜವಾಬ್ದಾರಿಯನ್ನು ಮುಖ್ಯಮಂತ್ರಿ ಸಚಿವರಿಗೆ ವಹಿಸಿದ್ದಾರೆ ಎಂದು ಜಯಚಂದ್ರ ತಿಳಿಸಿದರು.
ಕಡೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿ.ದೇವರಾಜಪ್ಪ 4 ಸಾವಿರ ರೂ.ಲಂಚ ಪಡೆಯುವಾಗ ಲೋಕಾಯುಕ್ತ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದರು. ನ್ಯಾಯಾಲಯದಲ್ಲಿ ಅವರಿಗೆ ಶಿಕ್ಷೆ ಪ್ರಕಟವಾದ ಹಿನ್ನೆಲೆಯಲ್ಲಿ ಸೇವೆಯಿಂದ ವಜಾಗೊಳಿಸಲು ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಅವರು ಹೇಳಿದರು.
ರಾಜ್ಯ ಹಣಕಾಸು ಸಂಸ್ಥೆಯ ಕಾರ್ಯಾಚರಣೆಗಾಗಿ ಖಾಸಗಿ ಪ್ಲೇಸ್‌ಮೆಂಟ್ ಬಾಂಡ್‌ಗಳಿಂದ, ಬ್ಯಾಂಕುಗಳಿಂದ ಮತ್ತು ಇತರೆ ಮೂಲಗಳಿಂದ 260 ಕೋಟಿ ರೂ.ಸರಕಾರದ ಖಾತರಿ ನೀಡಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಅರಣ್ಯ ರಕ್ಷಕ ಎಚ್.ಭವಾನಿ ಶಂಕರ ಪುತ್ರನ್ 100 ರೂ.ಲಂಚ ಪಡೆಯುವಾಗ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಉಪ ಲೋಕಾಯುಕ್ತರು ಶಿಫಾರಸು ಮಾಡಿದ್ದರು. ಆದರೆ, ಸಚಿವ ಸಂಪುಟ ಅವರನ್ನು ಕಡ್ಡಾಯ ನಿವೃತ್ತಿಗೊಳಿಸುವ ತೀರ್ಮಾನವನ್ನು ಕೈಗೊಂಡಿದೆ ಎಂದು ಜಯಚಂದ್ರ ಹೇಳಿದರು.
ಎಸೆಸೆಲ್ಸಿ ಉತ್ತೀರ್ಣರಾಗಿರುವ ‘ಡಿ’ ದರ್ಜೆ ನೌಕರರಿಗೆ ಜೇಷ್ಠತೆ ಆಧಾರದ ಮೇಲೆ ಭಡ್ತಿ ನೀಡುವ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಅವರು ತಿಳಿಸಿದರು.
ಭೂ ಸ್ವಾಧೀನ ಮಸೂದೆ-2013: ನಿಯಮಾವಳಿ ಪಾಸ್
ಬೆಂಗಳೂರು, ಅ.7: ಯುಪಿಎ ಸರಕಾರ ಜಾರಿಗೆ ತಂದಿದ್ದ ಭೂ ಸ್ವಾಧೀನ ಕಾಯ್ದೆ-2013ಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ರೂಪಿಸಿದ್ದ ನಿಯಮಾವಳಿಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಯುಪಿಎ ಸರಕಾರದ ಅವಧಿಯಲ್ಲಿ ಸರ್ವಾನುಮತದಿಂದ ಜಾರಿಗೆ ತಂದಿದ್ದ ಭೂ ಸ್ವಾಧೀನ ಮಸೂದೆಗೆ ಕೇಂದ್ರ ಸರಕಾರ ತಿದ್ದುಪಡಿ ತಂದು ಸುಗ್ರೀವಾಜ್ಞೆ ಮೂಲಕ ಅನುಷ್ಠಾನಗೊಳಿಸಲು ಯತ್ನಿಸಿತ್ತು.
ಆದರೆ, ದೇಶದೆಲ್ಲೆಡೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಸುಗ್ರೀವಾಜ್ಞೆಯನ್ನು ಹಿಂಪಡೆದಿದೆ ಎಂದು ಅವರು ಹೇಳಿದರು.
ರಾಜ್ಯ ಸರಕಾರವು 2013ರ ಕಾಯ್ದೆಗೆ ಸಂಬಂಧಿಸಿದಂತೆ ಈ ಹಿಂದೆಯೆ ನಿಯಮಾವಳಿಗಳನ್ನು ರೂಪಿಸಿತ್ತು. ಆದರೆ, ಸುಗ್ರೀವಾಜ್ಞೆಯ ಗೊಂದಲದಿಂದಾಗಿ ಅನುಮತಿ ನೀಡಿರಲಿಲ್ಲ. ಇದೀಗ, ಕೇಂದ್ರ ಸರಕಾರ ಸುಗ್ರೀವಾಜ್ಞೆ ವಾಪಸ್ ಪಡೆದಿರುವುದರಿಂದ, ನಮ್ಮ ಸರಕಾರ ರೂಪಿಸಿದ್ದ ನಿಯಮಾವಳಿಗೆ ಒಪ್ಪಿಗೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಈ ಭೂ ಸ್ವಾಧೀನ ಕಾಯ್ದೆಯಡಿ ಯೋಜನೆಗೆ ಅಗತ್ಯವಾದ ಭೂಮಿಯ ಪ್ರಮಾಣ ಬಿಟ್ಟುಕೊಡಲು ಶೇ.70ರಷ್ಟು ರೈತರ ಸಹಮತ ಅಗತ್ಯ. ಪರಿಹಾರವಾಗಿ ಮಾರ್ಗಸೂಚಿ ದರ ಅಥವಾ ಮಾರುಕಟ್ಟೆ ದರದ ಮೂರು ಪಟ್ಟು, ಸ್ವಾಧೀನಪಡಿಸಿಕೊಂಡು ಜಮೀನು ಐದು ವರ್ಷದೊಳಗೆ ಉದ್ದೇಶಿತ ಕಾರ್ಯಕ್ಕೆ ಉಪಯೋಗವಾಗದಿದ್ದರೆ ವಾಪಸ್ ಪಡೆದು ರೈತನಿಗೆ ನೀಡುವ ಅವಕಾಶವೂ ಕಾಯ್ದೆಯಲ್ಲಿ ಇದೆ ಎಂದು ಅವರು ಹೇಳಿದರು.
ಸ್ವಾಧೀನಕ್ಕೆ ಗುರುತಿಸಿದ ನಂತರ ಪ್ರಕ್ರಿಯೆ ನಡೆಸುವ ಎರಡು ವರ್ಷಗಳ ಕಾಲ ಪ್ರತಿ ಎಕರೆಗೆ 5 ಸಾವಿರ ರೂ. ಗೌರವಧನ ರೈತನಿಗೆ ಪಾವತಿಯಾಗಲಿದೆ. ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ವಿಧೇಯಕ ಮಂಡನೆಯಾಗಲಿದೆ ಎಂದು ಅವರು ತಿಳಿಸಿದರು.
ಕೋಲಾರಕ್ಕೆ ನೀರು: ಕೋರಮಂಗಲ ಸಮೀಪದ ಚಲ್ಲಘಟ್ಟ ಕಣಿವೆಯಿಂದ ಬೆಂಗಳೂರಿನಲ್ಲಿ ಸಂಸ್ಕರಿಸಿದ ನೀರನ್ನು ಕೋಲಾರ ಜಿಲ್ಲೆಯ ಕೆರೆಗಳಿಗೆ ಹರಿಸಲು ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದ್ದು, 1,280 ಕೋಟಿ ರೂ.ವೆಚ್ಚದ ಈ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.
‘ಗೋ ಸೇವಾ ಆಯೋಗ’ ರದ್ದು
ಬೆಂಗಳೂರು, ಅ.7: ಬಿಜೆಪಿ ಸರಕಾರದ ಅವಧಿಯಲ್ಲಿ ರಚಿಸಲಾಗಿದ್ದ ರಾಜ್ಯ ಗೋ ಸೇವಾ ಆಯೋಗವನ್ನು ವಿಸರ್ಜಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಪಶು ಸಂಗೋಪನಾ ಇಲಾಖೆಯಲ್ಲಿ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಅಸ್ತಿತ್ವದಲ್ಲಿರುವುದರಿಂದ ಗೋ ಸೇವಾ ಆಯೋಗವನ್ನು ವಿಸರ್ಜಿಸಿ, ಅದರ ಎಲ್ಲ ಅಧಿಕಾರಗಳನ್ನು ಮಂಡಳಿಯಲ್ಲಿ ವಿಲೀನಗೊಳಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ಗೋ ಸೇವಾ ಆಯೋಗ ರಚನೆಗೆ ಅಂದಿನ ಸರಕಾರದಲ್ಲಿದ್ದ ಹಲವು ಸಚಿವರು ವಿರೋಧ ವ್ಯಕ್ತಪಡಿಸಿದ್ದರು. ಆರ್ಥಿಕವಾಗಿಯೂ ಬೊಕ್ಕಸಕ್ಕೆ ಈ ಆಯೋಗ ಹೊರೆಯಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಗೋ ಸೇವಾ ಆಯೋಗಕ್ಕೆ ಯಾವುದೇ ರೀತಿಯ ಅಧಿಕಾರವನ್ನು ನೀಡಿರಲಿಲ್ಲ ಎಂದು ಅವರು ಹೇಳಿದರು.
ವಿಧಾನಮಂಡಲ ಅಧಿವೇಶನ
ಬೆಂಗಳೂರು, ಅ.7: ಲೋಕಾಯುಕ್ತ ಕಾಯ್ದೆಗೆ ಸಮಗ್ರ ತಿದ್ದುಪಡಿ, ಬರಗಾಲ ಸೇರಿದಂತೆ ಇನ್ನಿತರ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ವಿಧಾನಮಂಡಲದ ಅಧಿವೇಶನ ಕರೆಯಲು ಸರಕಾರ ಚಿಂತನೆ ನಡೆಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ಅಕ್ಟೋಬರ್ ಅಂತ್ಯ ಅಥವಾ ನವೆಂಬರ್ ಮೊದಲ ವಾರದಲ್ಲಿ 10 ದಿನಗಳ ಕಾಲ ಬೆಂಗಳೂರಿನಲ್ಲೇ ಚಳಿಗಾಲದ ಅಧಿವೇಶನ ಕರೆಯಲು ಆಸಕ್ತಿ ವಹಿಸಲಾಗಿದೆ. ಅಧಿವೇಶನದ ದಿನಾಂಕ ನಿಗದಿಗೊಳಿಸುವ ಅಧಿಕಾರವನ್ನು ಮುಖ್ಯಮಂತ್ರಿಯ ವಿವೇಚನೆಗೆ ಬಿಡಲಾಗಿದೆ ಎಂದು ಅವರು ಹೇಳಿದರು.

Write A Comment