ಬೆಂಗಳೂರು, ಅ.3-ಸ್ನೇಹಿತೆ ಮನೆಯಲ್ಲಿ ಸಹಚರ ರೊಂದಿಗೆ ಸೇರಿಕೊಂಡು ಹಣ, ಆಭರಣ ದೋಚಿದ್ದ ಐದು ಮಂದಿಯನ್ನು ಕೆಂಗೇರಿ ಪೊಲೀಸರು ಬಂಧಿಸಿ 5ಲಕ್ಷ ಮೌಲ್ಯದ ಚಿನ್ನಾಭರಣ, 2ಕೆಜಿ ಬೆಳ್ಳಿ ವಸ್ತುಗಳು ಹಾಗೂ 40 ಸಾವಿರ ಹಣ ವಶಪಡಿಸಿಕೊಂಡಿದ್ದಾರೆ. ಶಿಲ್ಪಾ, ಗೀತಾ, ಜಗದೀಶ್, ಚೇತನ್ ಮತ್ತು ಆನಂದ ಬಂಧಿತ ಆರೋಪಿಗಳು. ಜ್ಞಾನಭಾರತಿ ಲೇಔಟ್ನ 6ನೇ ಮುಖ್ಯರಸ್ತೆ ನಿವಾಸಿ ವಿನುತಾ ಎಂಬುವವರಿಗೆ ಗೀತಾ ಮತ್ತು ಶಿಲ್ಪ ಸ್ನೇಹಿತರಾಗಿದ್ದರು.
ವಿನುತಾ ಅವರ ಮನೆಯಲ್ಲಿ ಚಿನ್ನಾಭರಣಗಳನ್ನು ಇಟ್ಟಿರುವ ವಿಷಯ ತಿಳಿದು ಕಳ್ಳತನ ಮಾಡಲು ಸಂಚು ರೂಪಿಸಿದ್ದಾರೆ. ಅದರಂತೆ ಅ.1ರಂದು ರಾತ್ರಿ 8.30ರಲ್ಲಿ ಸಹಚರರೊಂದಿಗೆ ಸೇರಿಕೊಂಡ ಈ ಇಬ್ಬರು ಚಾಲಾಕಿ ಸ್ನೇಹಿತೆಯರು ವಿನುತಾ ಅವರ ಮನೆಗೆ ಹೋಗಿ ಮನೆಯ ಸನ್ನಿವೇಶವನ್ನು ತಿಳಿದುಕೊಂಡು ನಂತರ ಹೊರಗೆ ಬಂದು ಸಹಚರರಾದ ಜಗದೀಶ್, ಚೇತನ್ ಮತ್ತು ಆನಂದ ಅವರನ್ನು ಮಾಧ್ಯಮದವರೆಂದು ಪರಿಚಯಿಸಿ ಮನೆಯೊಳಗೆ ಕರೆತಂದು ಚಾಕು ತೋರಿಸಿ ಬೆದರಿಸಿ ಚಿನ್ನಾಭರಣ, ಬೆಳ್ಳಿ ವಸ್ತುಗಳು ಮತ್ತು ಹಣ ದರೋಡೆ ಮಾಡಿ ಪರಾರಿಯಾಗಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಕೆಂಗೇರಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಹಣ, ಆಭರಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಕೆಂಗೇರಿ ಠಾಣೆ ಇನ್ಸ್ಪೆಕ್ಟರ್ ಯಲಗಯ್ಯ, ಪಿಎಸ್ಐಗಳಾದ ಮಲ್ಲಿಕಾರ್ಜುನ್, ವೆಂಕಟೇಶ್, ಕೃಷ್ಣ ಮತ್ತು ಸಿಬ್ಬಂದಿ ವರ್ಗ ಈ ಕಾರ್ಯಾಚರಣೆ ನಡೆಸಿತ್ತು.