ಬೆಂಗಳೂರು, ಅ.2: ದೇಶದಲ್ಲಿ ಅತೀ ಹಿಂದುಳಿದ ಸಮುದಾಯ ವಾಗಿ ಗುರುತಿಸಲ್ಪಟ್ಟಿರುವ ಮುಸ್ಲಿಮ್ ಸಮುದಾಯದ ಶೈಕ್ಷಣಿಕ ಪ್ರಗತಿಗಾಗಿ ಸರಕಾರವು ಅನೇಕ ವಿದ್ಯಾರ್ಥಿ ವೇತನಗಳನ್ನು ಮಂಜೂರು ಮಾಡುತ್ತಿದೆ. ಇತರ ಅಲ್ಪಸಂಖ್ಯಾತರಾದ ಕ್ರೈಸ್ತ, ಸಿಖ್, ಜೈನ, ಪಾರ್ಸಿ ಮತ್ತು ಬೌದ್ಧ ಸಮುದಾಯದವರಿಗೂ ಈ ಸವಲತ್ತುಗಳು ಸಿಗುತ್ತಿವೆ.
1 ರಿಂದ 10ನೆ ತರಗತಿಯ ವಿದ್ಯಾರ್ಥಿಗಳಿಗೆ ಪ್ರಿ ಮೆಟ್ರಿಕ್, ಪಿಯುಸಿ ಮೇಲ್ಪಟ್ಟು ಪೋಸ್ಟ್ ಮೆಟ್ರಿಕ್ ಮತ್ತು ವೃತ್ತಿಪರ ಕೋರ್ಸುಗಳನ್ನು ಕಲಿಯುವ ವಿದ್ಯಾರ್ಥಿಗಳಿಗೆ ‘ಮೆರಿಟ್ ಕಂ ಮೀನ್ಸ್’ ಎಂಬ ವಿದ್ಯಾರ್ಥಿವೇತನಗಳನ್ನು ಮಂಜೂರು ಮಾಡುತ್ತಿದೆ.
ಕೇಂದ್ರ ಸರಕಾರವು ಡಿಜಿಟಲ್ ಇಂಡಿಯಾ ಎಂಬ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಿ ಎಲ್ಲ್ಲ ವಿದ್ಯಾರ್ಥಿವೇತನಗಳನ್ನು ಒಂದೇ ವೆಬ್‌ಸೈಟ್‌ನಡಿ (National Scholarship Portal:www. scholarships.gov.in)ಯಲ್ಲಿ ತಂದಿದ್ದು, ಅದಕ್ಕೆ ಸಮರ್ಪಕ ಸರ್ವರ್ ವ್ಯವಸ್ಥೆಯನ್ನು ಕಲ್ಪಿಸದೆ ಇರುವುದರಿಂದ ವಿದ್ಯಾರ್ಥಿಗಳು ಬಹಳಷ್ಟು ತೊಂದರೆಗೆ ಸಿಲುಕಿದ್ದಾರೆ. ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಕೇಂದ್ರ ಸರಕಾರವು 3,734 ಕೋಟಿ ರೂ. ಹಾಗೂ ರಾಜ್ಯ ಸರಕಾರ 1,000 ಕೋಟಿ ರೂ. ಅನುದಾನವನ್ನು ಕಳೆದ ಬಜೆಟ್‌ನಲ್ಲಿ ಮೀಸಲಿಟ್ಟಿವೆ. ಈ ಎಲ್ಲ ವಿದ್ಯಾರ್ಥಿವೇತನಗಳನ್ನು ಪಡೆಯಬೇಕಾದರೆ ಈ ಬಾರಿ ಅರ್ಜಿಗಳನ್ನು ಆನ್‌ಲೈನ್ ಮೂಲಕವೇ ಸಲ್ಲಿಸಬೇಕಾಗಿದೆ.
ಕಳೆದ ಸಾಲಿನಲ್ಲಿ ಕೇವಲ ಅಲ್ಪಸಂಖ್ಯಾತ ಸಮುದಾಯದವರಿಂದ ಸುಮಾರು 70 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿತ್ತು. ಈ ಬಾರಿ ‘ಡಿಜಿಟಲ್ ಇಂಡಿಯಾ’ ಯೋಜನೆಯಡಿಯಲ್ಲಿ ಏಳು ಇಲಾಖೆಗಳನ್ನು (ಅಲ್ಪಸಂಖ್ಯಾತರ ಕಲ್ಯಾಣ, ಉನ್ನತ ಶಿಕ್ಷಣ, ಶಾಲಾ ಶಿಕ್ಷಣ, ಅಂಗವಿಕಲರ ಸಬಲೀಕರಣ, ಬುಡಕಟ್ಟು ಕಲ್ಯಾಣ ಹಾಗೂ ಕಾರ್ಮಿಕ ಮತ್ತು ಉದ್ಯೋಗ) ಕೇಂದ್ರೀಕೃತಗೊಳಿಸಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ.
ಆದರೆ, ಅರ್ಜಿ ಸಲ್ಲಿಕೆಯಲ್ಲಾಗುತ್ತಿರುವ ಗೊಂದಲದಿಂದಾಗಿ ಈ ಬಾರಿ ಏಳು ಇಲಾಖೆಗಳನ್ನು ಸೇರಿಸಿ ನೋಂದಣಿಯಾದ ಅರ್ಜಿಗಳ ಸಂಖ್ಯೆ 42 ಲಕ್ಷದಷ್ಟು. ಆದರೆ, ಪೂರ್ತಿಯಾಗಿ ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆ ಕೇವಲ 27 ಲಕ್ಷ ಮಾತ್ರ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಹರಸಾಹಸ ಪಡುತ್ತಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ ವೆಬ್‌ಸೈಟ್ ತೆರೆಯದೆ ಇದ್ದು, ಆಗಾಗ ಸರ್ವರ್ ಕೈಕೊಡುತ್ತಿರುವುದು ಸಾಮಾನ್ಯವಾಗಿದೆ. ಇನ್ನು ವೆಬ್‌ಸೈಟ್ ತೆರೆದರೂ ಎಲ್ಲ ಹಂತಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಶಾಲಾ ಕಾಲೇಜುಗಳು, ಬ್ಯಾಂಕ್ ಶಾಖೆಗಳು, ತರಗತಿ ಮತ್ತು ಕೋರ್ಸುಗಳ ಬಗ್ಗೆ ವೆಬ್‌ಸೈಟ್‌ನಲ್ಲಿ ನೋಂದಣಿಯಾಗದಿರುವುದು ಸಮಸ್ಯೆಗೆ ಇನ್ನೊಂದು ಕಾರಣವಾಗಿದೆ. ಕೆಲವೊಂದು ಸಲ ಯೋಜನೆ ನಿಮಗೆ ಹೊಂದಾಣಿಕೆಯಾಗುತ್ತಿಲ್ಲ ಹಾಗೂ ನೀವು ನವೀಕರಣಕ್ಕೆ ಅರ್ಹರಲ್ಲ ಎಂಬ ಸಂದೇಶಗಳು ಬರುತ್ತಿರುವುದು ವಿದ್ಯಾರ್ಥಿಗಳಲ್ಲಿನ ಆತಂಕವನ್ನು ಹೆಚ್ಚಿಸಿದೆ.
ವಿದ್ಯಾರ್ಥಿಗಳು ಸೈಬರ್‌ನಿಂದ ಸೈಬರ್‌ಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯಾರ್ಥಿವೇತನಕ್ಕಾಗಿ ಉಚಿತ ಸೇವೆ ಸಲ್ಲಿಸುವ ಸಂಘಸಂಸ್ಥೆಗಳು ಅಸಹಾಯಕ ಸ್ಥಿತಿಯಲ್ಲಿವೆ. ವಿದ್ಯಾರ್ಥಿಗಳಿಂದ ಪಡೆದ ಅರ್ಜಿಗಳನ್ನು ಅಪ್‌ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವುದು ಅವರ ಅಳಲು.
ವೆಬ್‌ಸೈಟ್‌ನಲ್ಲಿರುವ ಸಹಾಯವಾಣಿಗೆ ಕರೆ ಮಾಡಿದರೆ ಯಾವುದೇ ಪ್ರತಿಕ್ರಿಯೆ ಇಲ್ಲ. ಗ್ರಾಮಾಂತರ ಭಾಗದ ಬಹುತೇಕ ಜನರಿಗೆ ಇಂಟರ್ನೆಟ್, ಸ್ಕಾನಿಂಗ್ ಬಗ್ಗೆ ಅರಿವೇ ಇಲ್ಲ. ಅಲ್ಲದೆ, 9ರಿಂದ 10ನೆ ತರಗತಿಯ ಮಕ್ಕಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾದುದು ಬಹಳಷ್ಟು ತಲೆನೋವಿನ ಸಂಗತಿಯಾಗಿದೆ. ಕಡ್ಡಾಯವಾಗಿ 9 ದಾಖಲೆಗಳನ್ನು ಸ್ಕಾನ್ ಮಾಡಿ 100 ಕೆಬಿಗೆ ಮೀರದಂತೆ ಅಪ್‌ಲೋಡ್ ಮಾಡಲು ಹೆಚ್ಚಿನ ಸಮಯವನ್ನು ವ್ಯಯಿಸಬೇಕಾಗಿದೆ. ಈ ಎಲ್ಲ ಕಾರಣಗಳಿಂದಾಗಿ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಬಹಳಷ್ಟು ನಿಧಾನಗತಿಯಲ್ಲಿ ಸಾಗುತ್ತಿದೆ. ಈ ಬಾರಿ ಕೇವಲ ಶೇ.10ರಷ್ಟು ಮಾತ್ರ ವಿದ್ಯಾರ್ಥಿವೇತನದ ಅರ್ಜಿಗಳು ಸಲ್ಲಿಕೆಯಾಗಿದೆ.
ಇದರಿಂದ ವಿದ್ಯಾರ್ಥಿಗಳು ತಮಗೆ ಸಿಗಬೇಕಾದ ಸವಲತ್ತುಗಳಿಂದ ವಂಚಿತರಾಗುತ್ತಿದ್ದಾರೆ. ವಿದ್ಯಾರ್ಥಿ ವೇತನವನ್ನೇ ನಂಬಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸುವ ಪ್ರಸಂಗ ಎದುರಾಗಲಿದೆ. ಈ ನಿಟ್ಟಿನಲ್ಲಿ ಸರಕಾರ ಕೂಡಲೇ ಎಚ್ಚೆತ್ತುಕೊಂಡು ಸೂಕ್ತ ಪರಿಹಾರ ಕ್ರಮವನ್ನು ತೆಗೆದುಕೊಳ್ಳದಿದ್ದರೆ ಫಲಾನುಭವಿಗಳು ಹೋರಾಟಕ್ಕೆ ಇಳಿಯಬೇಕಾದ ಅನಿವಾರ್ಯ ಎದುರಾಗಲಿದೆ.
ವ್ಯವಸ್ಥೆ ಸುಧಾರಣೆಗೆ ಕ್ರಮ
‘ಡಿಜಿಟಲ್ ಇಂಡಿಯಾ’ ಯೋಜನೆಯಡಿ ಎಲ್ಲ ವಿದ್ಯಾರ್ಥಿವೇತನಗಳನ್ನು ಒಂದೇ ವೆಬ್‌ಸೈಟ್‌ನಡಿ ತರಲಾಗಿದ್ದು, ಸಮರ್ಪಕವಾದ ಸರ್ವರ್ ವ್ಯವಸ್ಥೆಯಿಲ್ಲದೆ ವಿದ್ಯಾರ್ಥಿಗಳಿಗೆ ಅನನುಕೂಲವಾಗು ತ್ತಿರುವುದು ಕೇಂದ್ರ ಸರಕಾರದ ಗಮನಕ್ಕೆ ಬಂದಿದೆ. ಆದುದರಿಂದ, ಈ ಸಮಸ್ಯೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದ್ದು, ಆದಷ್ಟು ಶೀಘ್ರದಲ್ಲೇ ವ್ಯವಸ್ಥೆ ಸುಧಾರಿಸಲಿದೆ.
-ಕೇಂದ್ರ ಸರಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ರಾಜ್ಯ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರ ಕಚೇರಿ ‘ವಾರ್ತಾಭಾರತಿ’ಗೆ ನೀಡಿದ ಪ್ರತಿಕ್ರಿಯೆ
ವಿದ್ಯಾರ್ಥಿ ಸ್ನೇಹಿ ಕಾರ್ಯಕ್ರಮ
ಡಿಜಿಟಲ್ ಇಂಡಿಯಾ ಯೋಜನೆಯಡಿ ಈ ಕಾರ್ಯಕ್ರಮವನ್ನು ಜಾರಿಗೆ ತರುತ್ತಿರುವ ಮೊದಲ ವರ್ಷ ಇದಾಗಿರುವುದರಿಂದ ಸಹಜವಾಗಿಯೇ ಕೆಲವು ಗೊಂದಲಗಳು ಉಂಟಾಗುತ್ತಿರುತ್ತವೆ. ತಮಗೆ ಯಾವ ಕೋಟಾದಡಿಯಲ್ಲಿ ವಿದ್ಯಾರ್ಥಿ ವೇತನ ಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಆದುದರಿಂದ, ಈ ಕಾರ್ಯಕ್ರಮವು ವಿದ್ಯಾರ್ಥಿ ಸ್ನೇಹಿಯಾಗಿದೆ.
-ಅಕ್ರಮ್ ಪಾಷ, ನಿರ್ದೇಶಕ, ರಾಜ್ಯ ಅಲ್ಪಸಂಖ್ಯಾತರ ನಿರ್ದೇಶನಾಲಯ
ಗ್ರಾಮೀಣ ವಿದ್ಯಾರ್ಥಿಗಳ ಸ್ಥಿತಿ ಶೋಚನೀಯ
ನಗರ ಪ್ರದೇಶಗಳ ವಿದ್ಯಾರ್ಥಿಗಳಿಗೆ ಇಂಟರ್ನೆಟ್ ಸೌಲಭ್ಯ ಸುಲಭವಾಗಿ ಸಿಗುತ್ತದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿನ ವಿದ್ಯಾರ್ಥಿಗಳ ಸ್ಥಿತಿ ಮಾತ್ರ ಶೋಚನೀಯ. ನಮ್ಮ ಸಂಸ್ಥೆಯು 4,500ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದ್ದು, ಇನ್ನೂ ಎರಡು ಸಾವಿರ ಅರ್ಜಿಗಳ ಮಾಹಿತಿಗಳನ್ನು ಕಂಪ್ಯೂಟರ್‌ನಲ್ಲಿ ಅಪ್‌ಲೋಡ್ ಮಾಡಬೇಕಿದೆ. ಶಾಲಾ ಆಡಳಿತ ಮಂಡಳಿಗಳು ತಮಗೂ ಅದಕ್ಕೂ ಸಂಬಂಧವಿಲ್ಲವೇನೋ ಎಂಬ ರೀತಿಯಲ್ಲಿ ವರ್ತಿಸುತ್ತಿವೆ.
-ರಿಯಾಝ್, ಅಧ್ಯಕ್ಷರು, ಟ್ಯಾಲೆಂಟ್ ರಿಸರ್ಚ್ ಫೌಂಡೇಷನ್, ಮಂಗಳೂರು
‘ಸಂಘ ಸಂಸ್ಥೆಗಳ ಪಾತ್ರ ಮುಖ್ಯ’
ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸುವಾಗ ತಮ್ಮ ದಾಖಲೆಗಳನ್ನು ಸ್ಕಾನ್ ಮಾಡಿ ಕಂಪ್ಯೂಟರ್‌ಗೆ ಅಪ್‌ಲೋಡ್ ಮಾಡುವುದು ಮಕ್ಕಳ ಪಾಲಿಗೆ ಹೊಸ ವಿಧಾನ. ಇದರಿಂದಾಗಿ, ಸಹಜವಾಗಿಯೇ ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ಇದಕ್ಕೂ ಮುಂಚಿತವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ಅದರ ನಕಲು ಪ್ರತಿಯನ್ನು ಸಂಬಂಧಪಟ್ಟ ಶಾಲೆ, ಕಾಲೇಜುಗಳಿಗೆ ಸಲ್ಲಿಸಲಾಗುತ್ತಿತ್ತು. ಆದಾಯ, ಜಾತಿ, ವಿದ್ಯಾರ್ಥಿ ಘೋಷಣೆ ಹಾಗೂ ಶಾಲೆ ಅಥವಾ ಕಾಲೇಜಿನ ಪರಿಶೀಲನೆ ಸೇರಿದಂತೆ ನಾಲ್ಕು ಬಗೆಯ ಮಾದರಿ ಪ್ರಮಾಣಪತ್ರಗಳನ್ನು ವಿದ್ಯಾರ್ಥಿ ಸಲ್ಲಿಸಬೇಕು. ವಿದ್ಯಾರ್ಥಿಗಳಿಗೆ ಇವುಗಳ ಬಗ್ಗೆ ಮಾಹಿತಿ ಇರುವುದಿಲ್ಲ. ಇದರಿಂದಾಗಿ, ಅವರು ಸೂಕ್ತ ಮಾಹಿತಿ ನೀಡದೆ ತಮಗೆ ಬರಬೇಕಾದ ವಿದ್ಯಾರ್ಥಿ ವೇತನದಿಂದ ವಂಚಿತರಾಗುತ್ತಾರೆ.
ನಮ್ಮ ಸಂಸ್ಥೆಯ ವತಿಯಿಂದ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಅಲ್ಲದೆ, ನಾವು ಸಿದ್ಧವಾದ ಮಾದರಿಯನ್ನು ತಯಾರಿಸಿ ಅದನ್ನು ಯಾವ ರೀತಿ ತುಂಬಬೇಕು, ಯಾವ ಯಾವ ದಾಖಲೆಗಳನ್ನು ಕಂಪ್ಯೂಟರ್‌ನಲ್ಲಿ ಹೇಗೆ ಅಪ್‌ಲೋಡ್ ಮಾಡಬೇಕು ಎಂಬುದರ ಕುರಿತು ವಿವರಣೆ ನೀಡುತ್ತಿದ್ದೇವೆ.
ನಮ್ಮ ಮಾದರಿಯನ್ನು ರಾಜ್ಯ ಸರಕಾರವು ಒಪ್ಪಿದೆ. ಅಲ್ಲದೆ, ಎಲ್ಲ ಶಾಲಾ-ಕಾಲೇಜುಗಳಿಗೆ ಕಳುಹಿಸಿಕೊಟ್ಟಿದೆ. ಪ್ರಸಕ್ತ ಸಾಲಿನಲ್ಲಿ ನಾವು 4,500ಕ್ಕೂ ಹೆಚ್ಚು ವಿದ್ಯಾರ್ಥಿಗಳ ಅರ್ಜಿಗಳನ್ನು ಭರ್ತಿ ಮಾಡಿಸಿದ್ದು, ಇನ್ನು 1,500 ಬಾಕಿಯಿದೆ. ಇದೇ ರೀತಿ ಹಲವಾರು ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.
ಸಂಘ ಸಂಸ್ಥೆಗಳ ಸಂಪರ್ಕಕ್ಕೆ ಬರುವಂತಹ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಸಿಗುತ್ತಿದೆ. ಆದರೆ, ಬೇರೆ ವಿದ್ಯಾರ್ಥಿಗಳ ಪರಿಸ್ಥಿತಿ ಶೋಚನೀಯವಾಗಿದೆ. ಆದುದರಿಂದ, ಗ್ರಾಮೀಣ ಮಟ್ಟದಿಂದ ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಾಗಿದೆ.
ಅಮೀನ್ ಮುದಸ್ಸಿರ್, ಕರಿಯರ್ ಕೌನ್ಸಿಲರ್, ಸಿಗ್ಮಾ ಫೌಂಡೇಷನ್, ಬೆಂಗಳೂರು
‘ವಿದ್ಯಾರ್ಥಿ ಸ್ನೇಹಿ ಕಾರ್ಯಕ್ರಮ’
ವಿದ್ಯಾರ್ಥಿವೇತನ ನೀಡುವಂತಹ ಎಲ್ಲ ಇಲಾಖೆಗಳನ್ನು ಒಂದೇ ಸೂರಿನಡಿ ತಂದಿರುವುದು ಸ್ವಾಗತಾರ್ಹ. ನಮ್ಮ ರಾಜ್ಯದಲ್ಲಿ 9 ಹಾಗೂ 10ನೆ ತರಗತಿಯ ವಿದ್ಯಾರ್ಥಿವೇತನಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಕಳೆದ ವರ್ಷ 1.36 ಲಕ್ಷ ಅರ್ಜಿಗಳು ಸ್ವೀಕೃತವಾಗಿತ್ತು. ಈಗಾಗಲೇ ನಮಗೆ 1.26 ಲಕ್ಷ ಅರ್ಜಿಗಳು ಬಂದಿದ್ದು, ಅರ್ಜಿ ಸಲ್ಲಿಕೆಗೆ ಅವಧಿಯನ್ನು ವಿಸ್ತರಿಸಲಾಗಿದೆ.
‘ಪೋಸ್ಟ್ ಮೆಟ್ರಿಕ್, ‘ಮೆರಿಟ್ ಕಂ ಮಿನ್ಸ್’ಗೆ ಅರ್ಜಿ ಸಲ್ಲಿಸುವ ಹೊಸ ಅರ್ಜಿದಾರರಿಗೆ ಅ.15 ರವರೆಗೆ ಹಾಗೂ ಪುನರಾವರ್ತಿತ ಅರ್ಜಿ ಸಲ್ಲಿ ಸುವವರಿಗೆ ಅ.30ರವರೆಗೆ ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿವೇತನ ವಿತರಣೆಯಲ್ಲಿ ಕರ್ನಾಟಕವು ಪ್ರಥಮ ಸ್ಥಾನದಲ್ಲಿದೆ.
ಡಿಜಿಟಲ್ ಇಂಡಿಯಾ ಯೋಜನೆಯಡಿ ಈ ಕಾರ್ಯಕ್ರಮವನ್ನು ಜಾರಿಗೆ ತರುತ್ತಿರುವ ಮೊದಲ ವರ್ಷ ಇದಾಗಿರುವುದರಿಂದ ಸಹಜವಾಗಿಯೇ ಕೆಲವು ಗೊಂದಲಗಳು ಉಂಟಾಗುತ್ತಿರುತ್ತವೆ. ತಮಗೆ ಯಾವ ಕೋಟಾದಡಿಯಲ್ಲಿ ವಿದ್ಯಾರ್ಥಿ ವೇತನ ಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಆದುದರಿಂದ, ಈ ಕಾರ್ಯಕ್ರಮವು ವಿದ್ಯಾರ್ಥಿ ಸ್ನೇಹಿಯಾಗಿದೆ. ಅಕ್ರಮ್ ಪಾಷ, ನಿರ್ದೇಶಕ, ರಾಜ್ಯ ಅಲ್ಪಸಂಖ್ಯಾತರ ನಿರ್ದೇಶನಾಲಯ
‘ಗ್ರಾಮೀಣ ವಿದ್ಯಾರ್ಥಿಗಳ ಸ್ಥಿತಿ ಶೋಚನೀಯ’
ನಗರದ ಪ್ರದೇಶದ ವಿದ್ಯಾರ್ಥಿಗಳಿಗೆ ಇಂಟರ್ನೆಟ್ ಸೌಲಭ್ಯ ಸುಲಭವಾಗಿ ಸಿಗುತ್ತದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿನ ವಿದ್ಯಾರ್ಥಿಗಳ ಸ್ಥಿತಿ ಮಾತ್ರ ಶೋಚನೀಯ. ನಮ್ಮ ಸಂಸ್ಥೆಯು 4,500ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದ್ದು, ಇನ್ನೂ ಎರಡು ಸಾವಿರ ಅರ್ಜಿಗಳ ಮಾಹಿತಿಯನ್ನು ಕಂಪ್ಯೂಟರ್‌ನಲ್ಲಿ ಅಪ್‌ಲೋಡ್ ಮಾಡಬೇಕಿದೆ.
1-8 ತರಗತಿಯವರೆಗೆ ಆಫ್‌ಲೈನ್ ಹಾಗೂ 9 ಮತ್ತು 10ನೆ ತರಗತಿಯ ವಿದ್ಯಾರ್ಥಿ ವೇತನಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ. ಖಾಸಗಿ ಶಾಲೆಯ ಮಕ್ಕಳಿಗೆ ಹೋಲಿಸಿದರೆ ಸರಕಾರಿ ಶಾಲೆಯ ಮಕ್ಕಳಲ್ಲಿ ಇಂಟರ್ನೆಟ್ ಜ್ಞಾನ ತುಂಬಾ ಕಡಿಮೆ. ಆನ್‌ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಲು ಅವರಿಗೆ ಆಗುವುದಿಲ್ಲ.
ಶಾಲಾ ಆಡಳಿತ ಮಂಡಳಿಯು ತಮಗೂ ಅದಕ್ಕೂ ಸಂಬಂಧವಿಲ್ಲವೇನೊ ಎಂಬ ರೀತಿಯಲ್ಲಿ ವರ್ತಿಸುತ್ತಿವೆ. ವಿಧಿಯಿಲ್ಲದೆ ಮಕ್ಕಳು ತಮ್ಮ ಪೋಷಕರ ಮೇಲೆ ಒತ್ತಡ ಹೇರುವ ಪರಿಸ್ಥಿತಿ ನಿರ್ಮಾಣವಾಗಿದೆ. 9 ದಾಖಲೆಗಳನ್ನು ಸ್ಕಾನ್ ಮಾಡಬೇಕು. ಪ್ರತಿಯೊಂದು ದಾಖಲೆಯೂ 100 ಕೆಬಿ ಗಿಂತ ಹೆಚ್ಚು ಇರಬಾರದು ಎಂಬ ಶರತ್ತನ್ನು ವಿಧಿಸಲಾಗಿದೆ. ಸ್ಕಾನ್ ಮಾಡಿದ ದಾಖಲೆಗಳನ್ನು 100 ಕೆಬಿಗೆ ಇಳಿಸುವುದು ಸವಾಲಿನ ಕೆಲಸ. ಕಂಪ್ಯೂಟರ್ ಹಾಗೂ ಸ್ಕಾನರ್ ಬಗ್ಗೆ ಪರಿಪೂರ್ಣ ಜ್ಞಾನವುಳ್ಳವರು ಮಾತ್ರ ಅದನ್ನು ಮಾಡಲು ಸಾಧ್ಯ. ವಿದ್ಯಾರ್ಥಿಗಳು ಪುನರಾವರ್ತಿತ ಅರ್ಜಿಗಳನ್ನು ಸಲ್ಲಿಸುವಾಗ ನೀವು ವಿದ್ಯಾರ್ಥಿವೇತನ ಪಡೆಯಲು ಅರ್ಹರಲ್ಲ ಎಂಬ ಸಂದೇಶಗಳು ಬರುತ್ತಿರುವುದು ಕಂಡು ಬಂದಿದೆ. ಕಾಲ ಕಾಲಕ್ಕೆ ವಿದ್ಯಾರ್ಥಿಗಳ ಮಾಹಿತಿಯನ್ನು ಸರಕಾರದ ಮಟ್ಟದಲ್ಲಿ ಸಮರ್ಪಕವಾಗಿ ನಿರ್ವಹಣೆ ಮಾಡದೆ ಇರುವುದರಿಂದ ಈ ಗೊಂದಲ ಉಂಟಾಗುತ್ತಿದೆ.
ಕಳೆದ ವರ್ಷ ಅಲ್ಪಸಂಖ್ಯಾತ ಸಮುದಾಯದ 78 ಲಕ್ಷ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಬಾರಿ 7 ಇಲಾಖೆಗಳನ್ನು ಒಂದೇ ಸೂರಿನಡಿ ತರಲಾಗಿದೆ. ಈವರೆಗೆ ಸಲ್ಲಿಕೆಯಾಗಿರುವುದು ಕೇವಲ 27 ಲಕ್ಷ ಮಾತ್ರ. ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಪರದಾಡುತ್ತಿರುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕಾಗಿಲ್ಲ.
-ರಿಯಾಝ್, ಅಧ್ಯಕ್ಷರು, ಟ್ಯಾಲೆಂಟ್ ರಿಸರ್ಚ್ ಫೌಂಡೇಷನ್