ಕರ್ನಾಟಕ

ಎಚ್‌ಡಿ ಕೋಟೆಯ ಪ್ರಗತಿಪರ ರೈತ ಪುಟ್ಟಣ್ಣರಿಂದ ಅ.14ರಂದು ದಸರಾ ಉದ್ಘಾಟನೆ

Pinterest LinkedIn Tumblr

mysore dasara

ಬೆಂಗಳೂರು, ಅ.2: ಐತಿಹಾಸಿಕ ದಸರಾ ಮಹೋತ್ಸವವನ್ನು ಅನ್ನದಾತ ರೈತನ ಮೂಲಕವೇ ಉದ್ಘಾಟಿಸಲು ಸರ್ಕಾರ ತೀರ್ಮಾನಿಸಿದ್ದು, ಎಚ್.ಡಿ.ಕೋಟೆ ತಾಲ್ಲೂಕಿನ ಪ್ರಗತಿಪರ ಕೃಷಿಕ ಪುಟ್ಟಣ್ಣ ಅವರು ಇದೇ 14ರಂದು ದಸರಾ ಉದ್ಘಾಟಿಸಲು ಒಲವು ತೋರಿದ್ದಾರೆ. ಅನ್ನದಾತ ರೈತರಿಗೆ ಮೊದಲ ಆದ್ಯತೆ ಎಂಬ ಸಂದೇಶವನ್ನು ರಾಜ್ಯಕ್ಕೆ ನೀಡಲು ನಿರ್ಧರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ದಸರಾ ಉನ್ನತ ಮಟ್ಟದ ಸಮಿತಿಯ ಪ್ರಮುಖರ ಜತೆ ಚರ್ಚಿಸಿ ಈ ನಿರ್ಧಾರಕ್ಕೆ ಬಂದಿದ್ದಾರೆ.

ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ 30 ಎಕರೆ ಭೂಮಿಯನ್ನು ಹೊಂದಿರುವ ಪುಟ್ಟಣ್ಣ ಅವರು 43 ಮಂದಿ ಕುಟುಂಬ ಸದಸ್ಯರೊಂದಿಗೆ ಕೃಷಿ ಚಟುವಟಿಕೆ ನಡೆಸುತ್ತಾ ಸ್ವಾವಲಂಬಿಯಾಗಿ ಬದುಕು ನಡೆಸುತ್ತಿದ್ದಾರೆ. ರೈತರ ಆತ್ಮಹತ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಇಂತಹ ಪ್ರಗತಿಪರ ರೈತರ ಮೂಲಕವೇ ದಸರಾ ಮಹೋತ್ಸವ ಉದ್ಘಾಟಿಸುವ ಮೂಲಕ ಅನ್ನದಾತನಲ್ಲಿ ಆತ್ಮವಿಶ್ವಾಸ ತುಂಬುವುದು ಸರ್ಕಾರದ ಆಶಯವಾಗಿದೆ.

ಈ ಮುಂಚೆ ಹಿರಿಯ ರೈತ ನಾಯಕ ಕಡಿದಾಳ್ ಶಾಮಣ್ಣ ಅವರಿಂದ ದಸರಾ ಉದ್ಘಾಟಿಸಲು ಸರ್ಕಾರ ಬಯಸಿತ್ತಾದರೂ ಕಡಿದಾಳ್ ಶಾಮಣ್ಣ ಒಪ್ಪಿಗೆ ನೀಡಿರಲಿಲ್ಲ. ರೈತರ ಆತ್ಮಹತ್ಯೆ ನಡೆದಿರುವ ಕಾಲದಲ್ಲಿ ಅರಸೊತ್ತಿಗೆ ಸಂಕೇತವಾದ ದಸರಾ ಮಹೋತ್ಸವ ಉದ್ಘಾಟಿಸಲು ತಾವು ತಯಾರಿಲ್ಲ. ಈ ಅರಸೊತ್ತಿಗೆ ಸಂಪ್ರದಾಯ ಮುಂದುವರೆಸುವುದು ಪ್ರಜಾಪ್ರಭುತ್ವ ವಿರೋಧಿ. ಇದಕ್ಕಾಗಿ ಈ ಹಿಂದೆ ದಸರಾ ಆಚರಣೆ ವಿರೋಧಿಸಿ ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ತಾವೆಲ್ಲರೂ ಬಂಧನಕ್ಕೆ ಒಳಗಾಗಿದ್ದೆವು. ಈಗಲೂ ದಸರಾ ಮುಂದುವರೆಯುತ್ತಿದೆ. ಇದನ್ನು ನಿಲ್ಲಿಸುವ ಇಚ್ಚಾಶಕ್ತಿ ಸರ್ಕಾರಕ್ಕಿಲ್ಲ ಎಂದು ದೂರಿದ್ದರು.

ಆದರೆ, ದಸರಾ ಉನ್ನತಮಟ್ಟದ ಸಮಿತಿ ಜತೆ ಚರ್ಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾವ್ಯಾರೂ ಅರಸೊತ್ತಿಗೆಯ ಪ್ರತಿನಿಧಿಗಳಲ್ಲ. ಪ್ರಜಾಪ್ರಭುತ್ವದ ಪ್ರತಿನಿಧಿಗಳು. ಇದೇ ಕಾರಣಕ್ಕಾಗಿ ಹಿಂದೆ ಮೈಸೂರು, ಬೆಂಗಳೂರು ಅರಮನೆಗಳನ್ನು ಸರ್ಕಾರದ ಸ್ವಾಧೀನಕ್ಕೆ ಪಡೆಯುವ ಕಾಯ್ದೆ ತರಲಾಗಿತ್ತು. ಅರಸೊತ್ತಿಗೆ ಪರವಾಗಿದ್ದರೆ. ಇದಕ್ಕೆ ಮುಂದಾಗುತ್ತಿರಲಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ರೈತರ ಆತ್ಮಹತ್ಯೆ ಕರ್ನಾಟಕದಲ್ಲಷ್ಟೇ ಅಲ್ಲ ಜಾಗತಿಕರಣದ ಹಿನ್ನೆಲೆಯಲ್ಲಿ ರೈತರು ಸಮಸ್ಯೆ ಎದುರಿಸುವಂತಾಗಿದೆ. ಹೀಗಾಗಿ ದೇಶದ ಹಲವು ಭಾಗಗಳಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಾಡ ಹಬ್ಬ ದಸರೆಯನ್ನು ಅನ್ನದಾತ ರೈತ ಉದ್ಘಾಟಿಸಿದರೆ ರೈತರಲ್ಲಿ ಆತ್ಮವಿಶ್ವಾಸ ಮೂಡುತ್ತದೆ ಎಂಬುದು ಸರ್ಕಾರದ ನಿಲುವಾಗಿದೆ.

Write A Comment