ಕರ್ನಾಟಕ

ಕೊಲೆ ಬೆದರಿಕೆ: ಶ್ರೀರಾಮ ಸೇನೆಯ ದಾವಣಗೆರೆ ಜಿಲ್ಲಾಧ್ಯಕ್ಷನ ಬಂಧನ; ಪಿಸ್ತೂಲ್, ಐದು ಬುಲೆಟ್‌ಗಳು ವಶ

Pinterest LinkedIn Tumblr

davanagere-02ದಾವಣಗೆರೆ, ಅ.1: ಕೇಬಲ್ ಆಪರೇಟರ್‌ಗೆ ಕೊಲೆ ಬೆದರಿಕೆ ಒಡ್ಡಿದ ಆರೋಪದ ಮೇರೆಗೆ ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಮಣಿಕಂಠ ಸಹಿತ ಇಬ್ಬರನ್ನು ಬೆಂಗಳೂರಿನಲ್ಲಿ ಬಂಧಿಸಿರುವ ಇಲ್ಲಿನ ಬಡಾವಣೆ ಠಾಣೆ ಪೊಲೀಸರು, ಒಂದು ಪಿಸ್ತೂಲ್, ಐದು ಬುಲೆಟ್‌ಗಳನ್ನು ವಶಪಡಿ ಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಂ.ಬಿ.ಬೋರಲಿಂಗಯ್ಯ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.

ಸೆ.18ರಂದು ಮಣಿಕಂಠ ಹಾಗೂ ಆತನ ಸ್ನೇಹಿತ ರಮೇಶ್ ಸೇರಿಕೊಂಡು ನಗರದ ಸಿದ್ದವೀರಪ್ಪ ಬಡಾವಣೆಯ ನಿವಾಸಿ ಕೇಬಲ್ ಆಪರೇಟರ್ ಕೆ.ಆನಂದ್ ಎಂಬವರ ಮನೆಗೆ ತೆರಳಿ, ನೀನು ಕೇಬಲ್ ವೃತ್ತಿಯನ್ನು ನಿಲ್ಲಿಸಬೇಕು. ಇನ್ನು ಮುಂದೆ ಆ ವೃತ್ತಿಯನ್ನು ನನಗೆ ಬಿಟ್ಟುಕೊಡಬೇಕು ಎಂದು ಬೆದರಿಸಿದ್ದರು. ಇದಕ್ಕೆ ಆನಂದ್ ಒಪ್ಪದಿದ್ದಾಗ, ನಾನು ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ. ಕೇಬಲ್ ವೃತ್ತಿ ಬಿಟ್ಟುಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಅಲ್ಲದೆ, ನಗರದ ಕೆಲವೆಡೆ ಕೇಬಲ್ ಸಂಪರ್ಕ ಕತ್ತರಿಸಿದ್ದರು ಎಂದು ಬೋರಲಿಂಗಯ್ಯ ತಿಳಿಸಿದರು.

ಕೊಲೆ ಬೆದರಿಕೆ ಒಡ್ಡಿದ ಬಗ್ಗೆ ಸೆ. 23ರಂದು ಆನಂದ್ ಬಡಾವಣೆ ಠಾಣೆಗೆ ಮಣಿಂಕಠ ಹಾಗೂ ರಮೇಶ್ ವಿರುದ್ಧ ದೂರು ನೀಡಿದ್ದರು.

ದೂರು ದಾಖಲಾದ ಬಗ್ಗೆ ಮಾಹಿತಿ ಅರಿತ ಇಬ್ಬರೂ ತಲೆ ಮರೆಸಿಕೊಂಡಿದ್ದರು. ಇಬ್ಬರ ಬಂಧನಕ್ಕೆ ಡಿವೈಎಸ್‌ಪಿ ಅಶೋಕ್ ಹಾಗೂ ಸಿಪಿಐ ಉಮೇಶ್ ನೇತೃತ್ವದಲ್ಲಿ ಪಿಎಸ್‌ಐ ಶಂಕರ್ ಮತ್ತು ಸಿಬ್ಬಂದಿಯ ತಂಡ ರಚಿಸಲಾಗಿತ್ತು. ಕಾರ್ಯಾಚರಣೆ ನಡೆಸಿದ ತಂಡ ಬೆಂಗಳೂರಿನಲ್ಲಿ ಬುಧವಾರ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಮಣಿಕಂಠನ ಬಳಿ ಇದ್ದ ಒಂದು ಪಿಸ್ತೂಲ್, ಐದು ಬುಲೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಮಣಿಕಂಠನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಅಲ್ಲದೆ ಗೂಂಡಾ ಪಟ್ಟಿಯಲ್ಲಿ ಆತನ ಹೆಸರಿದೆ ಎಂದು ಅವರು ಹೇಳಿದರು.

ಎಎಸ್‌ಪಿ ಗಿರಿರಾಜ್ ಬಾವಿಮನಿ, ಡಿವೈಎಸ್‌ಪಿ ಅಶೋಕ್, ಸಿಪಿಐ ಉಮೇಶ್, ಪಿಎಸ್‌ಐ ಶಂಕರ್ ಮತ್ತಿತರರು ಉಪಸ್ಥಿತರಿದ್ದರು.

Write A Comment