ಕರ್ನಾಟಕ

ಫುಟ್‌ಪಾತ್ ಮೇಲೆ ಓಡಿದ ಶಾಲಾ ಬಸ್‌: ಪಾದಚಾರಿಗೆ ಡಿಕ್ಕಿ , ಚಿಕಿತ್ಸೆ ಫಲಿಸದೆ ಸಾವು, ವಿದ್ಯಾರ್ಥಿಗಳು ಸೇರಿ ಐವರಿಗೆ ಗಾಯ

Pinterest LinkedIn Tumblr

acci

ಬೆಂಗಳೂರು: ಹೆಣ್ಣೂರು ಮುಖ್ಯರಸ್ತೆಯ ಗೆದ್ದಲಹಳ್ಳಿಯಲ್ಲಿ ಮಂಗಳವಾರ ಬೆಳಿಗ್ಗೆ ಚಾಲಕನ ನಿಯಂತ್ರಣ ತಪ್ಪಿ ಪಾದಚಾರಿ ಮಾರ್ಗವನ್ನೇರಿದ ಶಾಲಾ ಬಸ್, ಭದ್ರತಾ ಸಿಬ್ಬಂದಿಯೊಬ್ಬರನ್ನು ಬಲಿ ಪಡೆಯಿತು.

ಪಶ್ಚಿಮ ಬಂಗಾಳ ಮೂಲದ ಶೌಕತ್ ಅಲಿ (40) ಮೃತಪಟ್ಟವರು. ಘಟನೆಯಲ್ಲಿ ಅವರ ಸ್ನೇಹಿತ ನಯಾಜ್‌ನ ಕಾಲು ಮುರಿದಿದ್ದು, ಬಸ್‌ನಲ್ಲಿದ್ದ ನಾಲ್ವರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಿವೆ. ಈ ವೇಳೆ 25 ವಿದ್ಯಾರ್ಥಿಗಳು ಬಸ್‌ನಲ್ಲಿದ್ದರು. ವರ್ಷದ ಹಿಂದೆ ನಗರಕ್ಕೆ ಬಂದಿದ್ದ ಶೌಕತ್, ಜಲಮಂಡಳಿ ಆವರಣದಲ್ಲಿರುವ ‘ಎಸ್‌ಎಂಸಿ’ ನೀರು ಶುದ್ಧೀಕರಣ ಘಟಕದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.

shoukath

ಅಪಘಾತಕ್ಕಿಡಾದ ಬಸ್‌ ರಾಮಮೂರ್ತಿನಗರದ ನಾರಾಯಣ ಇ ಟೆಕ್ನೊ ಶಾಲೆಗೆ ಸೇರಿದ್ದು. ಬೆಳಿಗ್ಗೆ 8 ಗಂಟೆ ಸುಮಾರಿಗೆ ಚಾಲಕ ರಫೈಲ್‌ (19) ಮಕ್ಕಳನ್ನು ಕರೆದುಕೊಂಡು ಹೆಣ್ಣೂರು ಮುಖ್ಯರಸ್ತೆಯ ಗೆದ್ದಲಹಳ್ಳಿ ಬಳಿ ಹೋಗುತ್ತಿದ್ದಾಗ, ಬಸ್‌ನ ನಿಯಂತ್ರಣ ಕಳೆದುಕೊಂಡಿದ್ದಾನೆ. ಈ ವೇಳೆ ಬಸ್‌ ಪಾದಚಾರಿ ಮಾರ್ಗದ ಮೇಲೆ ಅಡ್ಡಾದಿಡ್ಡಿ ಚಲಿಸಿದೆ.

ಇದೇ ವೇಳೆ ಟೀ ಕುಡಿಯಲು ಪಾದಚಾರಿ ಮಾರ್ಗದಲ್ಲಿ ನಡೆದುಹೋಗುತ್ತಿದ್ದ ಶೌಕತ್ ಹಾಗೂ ನಯಾಜ್‌ ಅವರಿಗೆ ಡಿಕ್ಕಿ ಹೊಡೆಯಿತು. ನಂತರವೂ ಚಾಲಕನ ನಿಯಂತ್ರಣಕ್ಕೆ ಸಿಗದ ಬಸ್, ಅಂಗಡಿಯೊಂದಕ್ಕೆ ಡಿಕ್ಕಿ ಹೊಡೆದು ನಿಂತಿತು. ಅದೃಷ್ಟವಶಾತ್ ಆ ಅಂಗಡಿ ಬಾಗಿಲು ಇನ್ನು ತೆರೆದಿರಲಿಲ್ಲ.

ಅಪಘಾತದಲ್ಲಿ ತೀವ್ರ ಗಾಯಗೊಂಡ ಶೌಕತ್ ಮತ್ತು ನಯಾಜ್‌ ಅವರನ್ನು ಸ್ಥಳೀಯರು ಕೂಡಲೇ ನಿಮ್ಹಾನ್ಸ್‌ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಶೌಕತ್‌ 10 ಗಂಟೆ ಸುಮಾರಿಗೆ ಕೊನೆಯುಸಿರಳೆದರು.

ಚಾಲಕ ರಫೈಲ್‌ನ ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದರು. ಬಾಣಸವಾಡಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಂಗೆಟ್ಟ ವಿದ್ಯಾರ್ಥಿಗಳು: ಬಸ್‌ ಅಡ್ಡಾದಿಡ್ಡಿ ಚಲಿಸಿದಾಗ, ವಿದ್ಯಾರ್ಥಿಗಳು ಚೀರಾಡತೊಡಗಿದರು. ಬಸ್ ನಿಂತ ತಕ್ಷಣ ನೆರವಿಗೆ ಬಂದ ಸ್ಥಳೀಯರು, ವಿದ್ಯಾರ್ಥಿಗಳನ್ನು ಕೆಳಕ್ಕೆ ಇಳಿಸಿದರು. ಘಟನೆಯಲ್ಲಿ ನಾಲ್ವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಎಲ್ಲರನ್ನೂ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಶಾಲೆ ವಿರುದ್ಧ ಕ್ರಮ
‘ಸಾರಿಗೆ ನಿಯಮದ ಪ್ರಕಾರ, ಲಘು ವಾಹನ ಚಾಲನೆಯಲ್ಲಿ ಕನಿಷ್ಠ 4 ವರ್ಷ ಅನುಭವ ಇರುವವನನ್ನು ಶಾಲಾ ವಾಹನದ ಚಾಲಕನನ್ನಾಗಿ ನೇಮಕ ಮಾಡಿಕೊಳ್ಳಬೇಕು. ಆದರೆ, ಈ ಪ್ರಕರಣದ ಆರೋಪಿ ಮೂರು ತಿಂಗಳ ಹಿಂದಷ್ಟೇ ಚಾಲನಾ ಪರವಾನಗಿ ಪಡೆದುಕೊಂಡಿದ್ದಾನೆ. ಹೀಗಾಗಿ ಶಾಲಾ ಆಡಳಿತ ಮಂಡಳಿ ನಿಯಮ ಉಲ್ಲಂಘಿಸಿರುವುದು ಸ್ಪಷ್ಟವಾಗಿದ್ದು, ಆಡಳಿತ ಮಂಡಳಿ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಆಕ್ಸಲೇಟರ್ ತುಳಿದೆ: ಚಾಲಕ ‘ಗೆದ್ದಲಹಳ್ಳಿ ಮುಖ್ಯರಸ್ತೆಯಲ್ಲಿ ಸಾಗುವಾಗ ತೂಕಡಿಕೆ ಬಂದಂತಾಯಿತು. ಆಗ ವಾಹನ ನಿಲ್ಲಿಸಲು ರಸ್ತೆಯ ಎಡಬದಿಗೆ ತೆಗೆದುಕೊಂಡೆ. ಆದರೆ, ಬ್ರೇಕ್ ತುಳಿಯುವ ಬದಲಾಗಿ, ಆಕ್ಸಲೇಟರ್ ಮೇಲೆ ಕಾಲಿಟ್ಟಿದ್ದರಿಂದ ಈ ಅನಾಹುತ ನಡೆಯಿತು’ ಎಂದು ರಫೈಲ್ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಮಾಹಿತಿ ನೀಡಿದರು.

Write A Comment