ಕರ್ನಾಟಕ

ಬೆಳಗಾವಿಯಲ್ಲಿ ಗಣೇಶ ಮೂರ್ತಿಗಳ ಮೆರವಣಿಗೆ ವೇಳೆ ಕಲ್ಲು ತೂರಾಟ : ಪರಿಸ್ಥಿತಿ ಉದ್ವಿಗ್ನ

Pinterest LinkedIn Tumblr

ganeshಬೆಳಗಾವಿ, ಸೆ.28-ಸಾರ್ವಜನಿಕ ಗಣೇಶ ಮೂರ್ತಿಗಳ ಮೆರವಣಿಗೆ ಸಂದರ್ಭದಲ್ಲಿ  ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಪರಿಣಾಮ ಪೊಲೀಸ್ ಪೇದೆ ಸೇರಿದಂತೆ ಹಲವರು ಗಾಯಗೊಂಡಿರುವ ಘಟನೆ  ಖಡೇಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಗಣಪತಿ ಗಲ್ಲಿಯಲ್ಲಿ ನಡೆದಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ.. ನಿನ್ನೆ ರಾತ್ರಿಯಿಂದಲೇ ಗಣೇಶ ಮೂರ್ತಿಗಳ ಮೆರವಣಿಗೆ ಪ್ರಾರಂಭವಾಗಿದ್ದು, ಇದಕ್ಕಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಆದರೆ  ಖಡೇ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಸಮೀಪ ಬರುತ್ತಿದ್ದಂತೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.

ಇದರಿಂದ ಕೆರಳಿದ ಮೆರವಣಿಗೆಯಲ್ಲಿದ್ದ ಕೆಲ ಕಾರ್ಯಕರ್ತರು ಪ್ರತಿದಾಳಿಗೆ ಮುಂದಾದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಈ ವೇಳೆ ಪೊಲೀಸರು ಗುಂಪನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು. ಘಟನೆಯಲ್ಲಿ ಕಡೇ ಬಜಾರ್ ಪೊಲೀಸ್ ಠಾಣೆಯ ಪೇದೆ ಭೀಮಪ್ಪ ಉಜ್ಜನಕೊಪ್ಪ ಅವರ ತಲೆಗೆ ಭಾರೀ ಪೆಟ್ಟು ಬಿದ್ದಿದ್ದು, ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ.

ತಳ್ಳಾಟ-ನೂಕಾಟದಲ್ಲಿ ಕೆಲವರಿಗೆ ಗಾಯಗಳಾಗಿದ್ದು, ಪೊಲೀಸರೇ ಅವರನ್ನು ಸರ್ಕಾರಿ ಆಸ್ಪತ್ಸೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಘಟನೆಯಿಂದ ಆಕ್ರೋಶಗೊಂಡ ಮೆರವಣಿಗೆಕಾರರು ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು. ಇಲ್ಲವಾದರೆ ಮೆರವಣಿಗೆ ಮುಂದೆ ಸಾಗುವುದಿಲ್ಲ ಎಂದು ಪಟ್ಟು ಹಿಡಿದಾಗ ಮಧ್ಯ ಪ್ರವೇಶಿಸಿದ ಪೊಲೀಸ್ ಅಧಿಕಾರಿಗಳು ತಕ್ಷಣ ಕಿಡಿಗೇಡಿಗಳನ್ನು ಬಂಧಿಸುವ ಭರವಸೆ ನೀಡಿದ ನಂತರ ಮೆರವಣಿಗೆ ಮುಂದೆ ಸಾಗಿತು. ಯಾವುದೆ ಅಹಿತಕರ ಘಟನೆಗಳು ನಡೆಯದಂತೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಹಾಗೂ ಮೆರವಣಿಗೆಯ ವೀಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ. ಯಾವುದೇ ವದಂತಿಗಳಿಗೆ ಕಿವಿಗೊಡಬಾರದು, ಶಾಂತ ರೀತಿಯಿಂದ ವಿಸರ್ಜನೆ ಕಾರ್ಯಕ್ರಮ ನೆರವೇರಿಸಬೇಕೆಂದು ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Write A Comment