ಕರ್ನಾಟಕ

ರಾಜ್ಯದಲ್ಲಿ ಶೇ.31 ಅನಕ್ಷರಸ್ಥರು; 1,000 ಪುರುಷರಿಗೆ 956 ಮಹಿಳೆಯರು; ಸಾಮಾಜಿಕ, ಆರ್ಥಿಕ, ಜಾತಿ ಗಣತಿ ವರದಿ ಬಿಡುಗಡೆ

Pinterest LinkedIn Tumblr

LOGOಬೆಂಗಳೂರು, ಸೆ.28: ರಾಜ್ಯದಲ್ಲಿ ಒಟ್ಟು 5,99,80,609 ಜನಸಂಖ್ಯೆಯಿದ್ದು, 1.31ಕೋಟಿಗೂ ಹೆಚ್ಚು ಕುಟುಂಬಗಳಿವೆ. ಆ ಪೈಕಿ 3.81 ಕೋಟಿ ಮಂದಿ (ಶೇ.63.66) ಗ್ರಾಮೀಣ ಹಾಗೂ 2.17 ಕೋಟಿ ಮಂದಿ (ಶೇ.38.75) ನಗರ ಪ್ರದೇಶಗಳಲ್ಲಿ ವಾಸವಾಗಿದ್ದಾರೆಂಬ ಅಂಶ ಗ್ರಾಮೀಣಾಭಿವೃದ್ಧಿ ಇಲಾಖೆ ನಡೆಸಿದ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿಯಿಂದ ಬೆಳಕಿಗೆ ಬಂದಿದೆ. ಇದೇ ಸಂದರ್ಭದಲ್ಲಿ ಶೇ. 31.54ರಷ್ಟು ಅನಕ್ಷರಸ್ಥರು ರಾಜ್ಯದಲ್ಲಿ ಇರುವುದು ಗಣತಿಯಿಂದ ಬಹಿರಂಗವಾಗಿದೆ. ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ-2011ರ ದತ್ತಾಂಶ ಮತ್ತು ವರದಿಯನ್ನು ಲೋಕಾರ್ಪಣೆ ಮಾಡಿದರು. ರಾಜ್ಯದಲ್ಲಿ ಪರಿಶಿಷ್ಟ ಜಾತಿ (ಎಸ್ಸಿ) -96,35,175 ಮಂದಿ (ಶೇ.16.06), ಪರಿಶಿಷ್ಟ ಪಂಗಡ (ಎಸ್ಟಿ) -38,70,821 ಮಂದಿ (ಶೇ.6.45) ಎಂಬ ಅಂಶ ಬಯಲಾಗಿದೆ.
ರಾಜ್ಯದಲ್ಲಿ 8,04,212 ಮಂದಿ (ಶೇ.1.34) ಅಂಗವಿಕ ಲರಿದ್ದು, 53.84 ಲಕ್ಷಕ್ಕೂ ಅಧಿಕ ಮಂದಿ (ಶೇ.8.98) ಹಿರಿಯ ನಾಗರಿಕರಿದ್ದಾರೆ. ರಾಜ್ಯದಲ್ಲಿ ಒಟ್ಟು ಪುರುಷರು-3,07,45,608 ಮಂದಿ ಇದ್ದು, ಮಹಿಳೆಯರು- 2,92,29,547 ಮಂದಿ ಇದ್ದಾರೆಂದು ತಿಳಿಸಲಾಗಿದೆ.
ಲಿಂಗಾನುಪಾತದಲ್ಲಿ ಕೊರತೆ: ರಾಜ್ಯದಲ್ಲಿ 1 ಸಾವಿರ ಮಂದಿ ಪುರು ಷರಿಗೆ 956 ಮಂದಿ ಮಹಿಳೆಯ ರಿದ್ದು, ಲಿಂಗಾನುಪಾತದಲ್ಲಿ ಭಾರೀ ಕೊರತೆ ಇರುವುದು ಗೊತ್ತಾಗಿದೆ.
ಉಡುಪಿ ಜಿಲ್ಲೆಯಲ್ಲಿ 1 ಸಾವಿರ ಮಂದಿ ಪುರುಷರಿಗೆ 1036 ಮಂದಿ ಮಹಿಳೆಯರಿದ್ದು, ಬೆಂಗಳೂರು ನಗರ ಜಿಲ್ಲೆಯಲ್ಲಿ ಸಾವಿರ ಮಂದಿ ಪುರುಷರಿಗೆ ಕೇವಲ 857ಮಂದಿ ಮಹಿಳೆಯರಿದ್ದಾರೆಂಬ ಆಘಾತಕಾರಿ ಅಂಶ ಬಯಲಾಗಿದೆ.
ರಾಜ್ಯದ ಗ್ರಾಮೀಣ ಭಾಗದ ಅಕ್ಷರಸ್ಥರ ಸಂಖ್ಯೆ ಶೇ.68.46ರಷ್ಟಿದ್ದರೆ, ಅನಕ್ಷರಸ್ಥರ ಸಂಖ್ಯೆ ಶೇ.31.54ರಷ್ಟಿದೆ. ಅತಿಹೆಚ್ಚು ಅಕ್ಷರಸ್ಥರು (ಶೇ.83.55)ದಕ್ಷಿಣ ಕನ್ನಡದಲ್ಲಿದ್ದ್ದು, ಯಾದಗಿರಿ ಅತಿ ಕಡಿಮೆ(ಶೇ.43.68) ಅಕ್ಷರಸ್ಥರಿದ್ದಾರೆ. ಗ್ರಾಮೀಣ ಭಾಗದ ಶೇ.26.46ರಷ್ಟು ಕುಟುಂಬಗಳು ನೀರಾವರಿ ಭೂಮಿ ಹೊಂದಿದ್ದರೆ, ಶೇ.47.04ರಷ್ಟು ಕುಟುಂಬಗಳು ಒಣಭೂಮಿಯನ್ನು ಅವಲಂಬಿಸಿವೆ ಎಂಬುದು ಗೊತ್ತಾಗಿದೆ.
ರಾಜ್ಯದ ಗ್ರಾಮೀಣ ಪ್ರದೇಶದಲ್ಲಿನ ಶೇ.18.57ರಷ್ಟು ಕುಟುಂಬಗಳು ಮಹಿಳಾ ಮುಖ್ಯಸ್ಥರನ್ನು ಹೊಂದಿದ್ದರೆ, ಶೇ.5.95ರಷ್ಟು ಕುಟುಂಬಗಳು ರೆಫ್ರಿಜರೇಟರ್ ಹೊಂದಿವೆ. ಶೇ.23.75ರಷ್ಟು ಕುಟುಂಬಗಳಿಗೆ ಮೋಟಾರು ವಾಹನದ ಸೌಲಭ್ಯವಿದ್ದು, ಶೇ.91.63ರಷ್ಟು ಕುಟುಂಬಗಳು ಸ್ವಂತ ಮನೆ ಹೊಂದಿದ್ದರೆ, ಶೇ.6.91ಕುಟುಂಬಗಳು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿವೆ ಎಂದು ಉಲ್ಲೇಖಿಸಲಾಗಿದೆ.
ಮೊಬೈಲ್: ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ 62.27 ಲಕ್ಷಕ್ಕೂ ಅಧಿಕ (ಶೇ.77.37) ಜನರು ಮೊಬೈಲ್ ಹಾಗೂ ದೂರವಾಣಿ ಸಂಪರ್ಕ ಹೊಂದಿದ್ದಾರೆ. ಒಟ್ಟಾರೆ ಶೇ.45ರಷ್ಟು ಕುಟುಂಬಗಳು ವ್ಯವಸಾಯ ಅವಲಂಬಿಸಿವೆ. ಶೇ.32ರಷ್ಟು ಮಂದಿ ದಿನಗೂಲಿಯನ್ನುವಲಂಬಿಸಿ ಜೀವನ ನಡೆಸುತ್ತಿದ್ದಾರೆಂದು ತಿಳಿಸಲಾಗಿದೆ.
ರಾಜ್ಯದಲ್ಲಿ 7,23,425 (ಶೇ.14.21) ಕುಟುಂಬಗಳು ಕೊಳಚೆ ಪ್ರದೇಶಗಳಲ್ಲಿ (ಸ್ಲಂ) ವಾಸಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದ ರಸ್ತೆ ಬದಿಗಳಲ್ಲಿ ವ್ಯಾಪಾರಿಗಳ ಸಂಖ್ಯೆ 1,03.763 ಮಂದಿ (ಶೇ.0.48). ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಶೇ.5ರಷ್ಟು ಮಂದಿ ಆದಾಯ ತೆರಿಗೆ ಪಾವತಿಸುತ್ತಿದ್ದು, ಶೇ.75ರಷ್ಟು ಕುಟುಂಬದ ವ್ಯಕ್ತಿ 5 ಸಾವಿರ ರೂ. ತಲಾ ಆದಾಯ ಹೊಂದಿದ್ದು, ಶೇ.8ರಷ್ಟು 10 ಸಾವಿರ ರೂ.ಆದಾಯ ಹೊಂದಿದ್ದಾರೆ ಎಂದು ತಿಳಿಸಲಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಪದವಿ ಮತ್ತು ಹೆಚ್ಚಿನ ಶಿಕ್ಷಣ ಹೊಂದಿದವರು ಶೇ.13.67ರಷ್ಟಿದ್ದರೆ, ಬೆಂಗಳೂರು ನಗರ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಶೇ.18.32 ಹಾಗೂ ಅತ್ಯಂತ ಕಡಿಮೆ ಶೇ.5.94 ರಾಯಚೂರಿನಲ್ಲಿದೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್, ಪೌರಾಡಳಿತ ಸಚಿವ ಡಾ. ಖಮರುಲ್ ಇಸ್ಲಾಮ್, ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ, ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳಾದ ಎನ್.ನಾಗಾಂಬಿಕಾ ದೇವಿ, ಸಂಜೀವ್ ಕುಮಾರ್ ಸೇರಿ ಇನ್ನಿತರರು ಹಾಜರಿದ್ದರು.
***
ವೆಬ್‌ಸೈಟ್‌ನಲ್ಲಿ ಪ್ರಕಟ
ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿ ಕಾರ್ಯದ ಸಂಪೂರ್ಣ ವಿವರಗಳನ್ನು ವೆಬ್‌ಸೈಟ್ ಮೂಲಕ ಎಲ್ಲ ಜಿಲ್ಲೆಯ ತಾಲೂಕು ಹಾಗೂ ಗ್ರಾಮ, ನಗರ, ಪಟ್ಟಣವಾರು ಮಾಹಿತಿಯನ್ನು ಪ್ರಕಟಿಸಲಾಗುವುದು. ಗಣತಿ ಕಾರ್ಯಕ್ಕಾಗಿ ಶ್ರಮಿಸಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಪ್ರಯತ್ನ ಶ್ಲಾಘನೀಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
***
ಪುರುಷ-ಮಹಿಳೆಯರ ಲಿಂಗಾನುಪಾತ ಸಾವಿರ ಪುರುಷರಿಗೆ ಕೇವಲ 956 ಮಹಿಳೆಯರಿದ್ದು, ಹೆಣ್ಣು ಭ್ರೂಣ ಹತ್ಯೆಯಿಂದ ಲಿಂಗಾನುಪಾತದಲ್ಲಿ ಕೊರತೆ ಸೃಷ್ಟಿಯಾಗಿದ್ದು, ಇದನ್ನು ಸರಿಪಡಿಸಬೇಕಾಗಿದೆ. ಸಾಕ್ಷರತೆ ಪ್ರಮಾಣವೂ ಗಣನೀಯವಾಗಿ ಹೆಚ್ಚಳವಾದರೆ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ.

– ಸಿದ್ದರಾಮಯ್ಯ, ಸಿಎಂ
***
‘ಜಾತಿ ಸಮೀಕ್ಷೆ’ ಮಾಹಿತಿ ಬಿಡುಗಡೆಗೆ ಕೇಂದ್ರಕ್ಕೆ ಮುಖ್ಯಮಂತ್ರಿ ಒತ್ತಾಯ
ಬೆಂಗಳೂರು: ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಸೂಚನೆ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿ- 2011ರ ವರದಿ ಬಿಡುಗಡೆಗೊಳಿಸಿದ್ದು, ಜಾತಿ ಗಣತಿ ವಿವರಗಳನ್ನು ಕೇಂದ್ರ ಬಿಡುಗಡೆ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಗಣತಿ ದತ್ತಾಂಶ ಮತ್ತು ವರದಿಗಳನ್ನು ಹಾಗೂ ದತ್ತಾಂಶದ ಸಿಡಿಯನ್ನು ಲೋಕಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ಗಣತಿ ಕಾರ್ಯದ ಅಂತಿಮ ವರದಿಯನ್ನು ಬಿಡುಗಡೆಗೊಳಿಸಿದ ರಾಜ್ಯಗಳಲ್ಲಿ ಕರ್ನಾಟಕ ಎರಡನೆ ಸ್ಥಾನದಲ್ಲಿದ್ದು, ದಕ್ಷಿಣ ರಾಜ್ಯಗಳ ಪೈಕಿ ಪ್ರಥಮ ಸ್ಥಾನದಲ್ಲಿದೆ ಎಂದರು.
1931ರಿಂದ ದೇಶದಲ್ಲಿ ಜಾತಿವಾರು ಸಮೀಕ್ಷೆ ನಡೆದಿಲ್ಲ. ಹೀಗಾಗಿ ರಾಜ್ಯ ಹಾಗೂ ಕೇಂದ್ರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸೂಕ್ತ ರೀತಿಯಲ್ಲಿ ತಲುಪುತ್ತಿಲ್ಲ. ಆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಜಾತಿ ಸಮೀಕ್ಷೆ ಕೈಗೊಂಡಿರುವ ಮಾಹಿತಿಯನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ಬೇರೆ-ಬೇರೆ ಕಾರಣಗಳಿಂದ ಜಾತಿ ಸಮೀಕ್ಷೆ ಮಾಹಿತಿ ಬಿಡುಗಡೆಯನ್ನು ಕೇಂದ್ರ ತಡೆ ಹಿಡಿದಿದ್ದು, ಎಲ್ಲ ಜಾತಿ, ಸಮುದಾಯಗಳ ಮಾಹಿತಿ ಬಹಿರಂಗಪಡಿಸುವುದು ಸೂಕ್ತ ಎಂದ ಅವರು, ಇದರಿಂದ ದುರ್ಬಲ ವರ್ಗದವರಿಗೆ ಸರಕಾರದ ಯೋಜನೆಗಳ ಲಾಭ ದೊರೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಹಿಂದುಳಿದ ವರ್ಗಗಳ ಆಯೋಗದಿಂದ ಕೈಗೊಂಡಿದ್ದ ಜಾತಿ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದ್ದು ದತ್ತಾಂಶ ದಾಖಲಾತಿಯೂ ಪೂರ್ಣವಾಗಿದೆ. ಈ ಬಗ್ಗೆ ಆಯೋಗ ಪರಿಶೀಲನೆ ಕಾರ್ಯ ಕೈಗೊಂಡಿದ್ದು, ಶೀಘ್ರದಲ್ಲೇ ಆ ವರದಿಯನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದೆಂದು ಸಿದ್ದರಾಮಯ್ಯ ತಿಳಿಸಿದರು.
ಜಾತಿ ಗಣತಿಯಿಂದ ಆಯಾ ಸಮುದಾಯಗಳ ಜನಸಂಖ್ಯೆಯ ಖಚಿತ ಮಾಹಿತಿ ದೊರೆಯಲಿದ್ದು, ಅದರಿಂದ ಸರಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಸಹಕಾರಿ ಎಂದ ಅವರು, ಕನ್ನಡಿಗರಿಗೆ ಆದ್ಯತೆ ನೀಡಬೇಕೆಂಬುದು ನಮ್ಮ ಉದ್ದೇಶ. ಆದರೆ, ವಲಸೆಯನ್ನು ತಡೆಗಟ್ಟಲು ಸಾಧ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Write A Comment