ಕರ್ನಾಟಕ

ಮಹಾದಾಯಿ ನದಿ ನೀರು ವಿವಾದ; ಪ್ರಧಾನಿ ಬಳಿಗೆ ಮತ್ತೆ ನಿಯೋಗ; ಸಿದ್ದರಾಮಯ್ಯ

Pinterest LinkedIn Tumblr

sidduಬೆಂಗಳೂರು: ಮಹಾದಾಯಿ ವಿವಾದವನ್ನು ಬಗೆಹರಿಸುವ ಸಲುವಾಗಿ ಶೀಘ್ರದಲ್ಲೇ ರಾಜ್ಯದ ಸಂಸದರ ಸಭೆ ಕರೆದು ಚರ್ಚಿಸುತ್ತೇನೆ. ಪ್ರಧಾನಿ ಬಳಿಗೆ ಇನ್ನೊಮ್ಮೆ ನಿಯೋಗ ಕೊಂಡೊಯ್ಯುವುದಕ್ಕೂ ಸರ್ಕಾರ ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಶನಿವಾರ ತಮ್ಮನ್ನು ಭೇಟಿ ಮಾಡಿದ ಕನ್ನಡಪರ ಸಂಘಟನೆಗಳ ಒಕ್ಕೂಟದ ಮುಖಂಡರಿಗೆ ಅವರು ಈ ಕುರಿತು ಭರವಸೆ ನೀಡಿದರು. ‘ಕುಡಿಯುವ ನೀರಿನ ಯೋಜನೆಗೆ ಸರ್ಕಾರ ಆದ್ಯತೆ ನೀಡುತ್ತದೆ. ನೆಲ, ಜಲ ಭಾಷೆ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ಕಾವೇರಿ, ಕೃಷ್ಣಾ, ಮಹಾದಾಯಿ ನದಿ, ಗಡಿ ಸಮಸ್ಯೆ  ವಿಚಾರಗಳಲ್ಲಿ ಎಲ್ಲ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ  ನಿರ್ಧಾರ ಕೈಗೊಳ್ಳಲಾಗುವುದು.  ಮಹಾದಾಯಿ ಯೋಜನೆಯನ್ನು ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ’ ಎಂದರು.

‘ಮಹಾದಾಯಿ ವಿಚಾರದಲ್ಲಿ ರೈತರು ಪಕ್ಷಾತೀತವಾಗಿ ಹೋರಾಟ ಮುಂದುವರಿಸಿದ್ದಾರೆ. ಇದು ರಾಜ್ಯದ ಸಮಸ್ಯೆ. ಇಲ್ಲಿ ಉತ್ತರ, ಕರಾವಳಿ ಹಾಗೂ ಮಧ್ಯ ಕರ್ನಾಟಕ ಎಂಬ ಭೇದ ಇಲ್ಲ. ಈ ಹೋರಾಟಕ್ಕೆ ಎಲ್ಲರ ಬೆಂಬಲವೂ ಇದೆ. ರೈತರು, ಕನ್ನಡಿಗರೆಲ್ಲ ಒಂದೇ. ಈ ವಿವಾದ ಬಗೆಹರಿಸಲು ಯತ್ನಿಸುತ್ತೇನೆ. ಈ ಬಗ್ಗೆ  ಹೋರಾಟಗಾರರ ಸಲಹೆಗಳನ್ನ ಮುಕ್ತವಾಗಿ ಸ್ವೀಕರಿಸುತ್ತೇನೆ’ ಎಂದು ಭರವಸೆ ನೀಡಿದರು.

ಪರಿಸರಕ್ಕೆ ಧಕ್ಕೆ ಇಲ್ಲ: ‘ಮಹಾದಾಯಿಯ ಮೂಲಕ 200 ಟಿಎಂಸಿ ಅಡಿ ನೀರು ವ್ಯರ್ಥವಾಗಿ ಅರಬ್ಬಿ ಸಮುದ್ರ ಸೇರುತ್ತಿದೆ. ಈ ಪೈಕಿ 40 ಟಿಎಂಸಿ ಅಡಿ ನೀರು ಕರ್ನಾಟಕದಲ್ಲಿ ಬೀಳುವ ಮಳೆಯಿಂದಲೇ ಲಭ್ಯ  ಆಗುತ್ತಿದೆ.  ಗೋವಾದವರು ಈ ನೀರನ್ನು ಬಳಸುತ್ತಿಲ್ಲ.

ಕುಡಿಯುವ ನೀರಿಗಾಗಿ ಅಥವಾ ನೀರಾವರಿಯ ಉದ್ದೇಶಕ್ಕಾಗಿ ಗೋವಾ ತಗಾದೆ ತೆಗೆದಿದ್ದಲ್ಲ. ಪರಿಸರಕ್ಕೆ ಧಕ್ಕೆ ಆಗುತ್ತದೆ ಎಂಬ ಆತಂಕ ಅವರದು. ಪರಿಸರಕ್ಕೆ ಹಾನಿ ಆಗುವುದಿಲ್ಲ ಎಂದು ತಜ್ಞರು ವರದಿ ಕೊಟ್ಟಿದ್ದಾರೆ. ಆದರೂ ಗೋವಾ ಸರ್ಕಾರ ಸುಮ್ಮನೆ ಖ್ಯಾತೆ ತೆಗೆದಿದೆ’ ಎಂದರು.

‘ಮೇಕೆದಾಟು ಅಣೆಕಟ್ಟೆಗೆ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ.  ಈ ವಿಚಾರದಲ್ಲಿ  ತಮಿಳುನಾಡು ಸುಮ್ಮನೆ ತಗಾದೆ ತೆಗೆದಿದೆ. ಈ ಯೋಜನೆ ಜಾರಿಗೆಗೆ   ಕಾನೂನಿನ ತೊಡಕಾಗಲೀ, ತಾಂತ್ರಿಕ  ತೊಂದರೆಯಾಗಲೀ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಪ್ರಧಾನಿಯ ಪ್ರಯತ್ನವೇ ಇಲ್ಲ: ‘ಪ್ರಧಾನಿ ಮೋದಿ ಅವರು ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ವಿವಾದವನ್ನು ಬಗೆಹರಿಸುವ ಪ್ರಯತ್ನವನ್ನೇ ಮಾಡಿಲ್ಲ’ ಎಂದು ಆರೋಪಿಸಿದರು. ಶನಿವಾರ ಬೆಳಿಗ್ಗೆ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಪ್ರಧಾನಿ ಅವರೇ ತೀರ್ಮಾನ ಮಾಡಬೇಕಾದ ವಿಚಾರ ಇದು. ಹಾಗೆ ಮಾಡದೆ, ವಿರೋಧ ಪಕ್ಷಗಳ ಜತೆ ಮಾತನಾಡಿ ಎಂದು ಹೇಳಿದರೆ ಹೇಗೆ? ಸಭೆ ಕರೆಯುವುದಕ್ಕೆ ಗೋವಾ ಹಾಗೂ ಮಹಾರಾಷ್ಟ್ರದ  ಕಾಂಗ್ರೆಸ್‌ನ ನಾಯಕರು ವಿರೋಧ ಮಾಡಿಲ್ಲ’ ಎಂದರು.

‘ಅಷ್ಟಕ್ಕೂ, ಪ್ರಧಾನಿ ಬಳಿಗೆ ತೆರಳಿದ ಸರ್ವಪಕ್ಷ ನಿಯೋಗದಲ್ಲಿ ಬಿಜೆಪಿ ಮುಖಂಡರು, ರೈತರು, ಸ್ವಾಮೀಜಿಗಳೂ  ಒಟ್ಟಿಗಿದ್ದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಅವರು ಈ ವಿಚಾರದಲ್ಲಿ ಪ್ರಧಾನಿ ಅವರ ಮನವೊಲಿಸಲಿಲ್ಲ ಏಕೆ?’  ಎಂದರು. ‘ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ವಿವಾದ ಬಗೆಹರಿಸುವಂತೆ ಈಗಲೂ ಅವರಿಗೆ ಮನವಿ ಮಾಡುತ್ತೇನೆ.   ಈಗಾಗಲೇ ಸಲ್ಲಿಸಿದ ಮನವಿಗೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದರು.

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಏಕೆ ಆರೋಪ ಮಾಡುತ್ತಿದ್ದಾರೋ ತಿಳಿಯದು. ಈಗ ಅವರ ಮೇಲೆಯೇ ಆರೋಪ ಬಂದಿದೆಯಲ್ಲ. ಹಾಗಾಗಿ ಈ ರೀತಿ ವರ್ತಿಸುತ್ತಿದ್ದಾರೆ. ಇಷ್ಟಕ್ಕೂ ವಿವಾದ ಬಗೆಹರಿಸಬೇಕಾದ ಪ್ರಧಾನಿ ಯಾವ ಪಕ್ಷಕ್ಕೆ ಸೇರಿದವರೆಂಬುದು ಎಲ್ಲರಿಗೂ ಗೊತ್ತಿದೆ’ ಎಂದರು.

*
ಕಡತ ವಿಲೇವಾರಿ ನಡೆಸಿದ ಸಿ.ಎಂ.
ಬಂದ್ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಇಡೀ ದಿನ ಕಡತಗಳ ವಿಲೇವಾರಿಯಲ್ಲಿ ತೊಡಗಿಸಿಕೊಂಡರು. ಬಿಬಿಎಂಪಿ ಚುನಾವಣೆ, ದೆಹಲಿ ಪ್ರವಾಸ.. ಹೀಗೆ ಹಲವು ಕಾರಣಗಳಿಂದ ವಿಲೇವಾರಿಗೆ ಬಾಕಿ ಇದ್ದ  ಕಡತಗಳಿಗೆ ಮುಕ್ತಿ ಸಿಕ್ಕಿತು ಎನ್ನಲಾಗಿದೆ.

*
ಮಹಾದಾಯಿ ವಿವಾದ ಸಂಬಂಧ ನ್ಯಾಯಮಂಡಳಿಯಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಲು ಸರ್ಕಾರ ಸಿದ್ಧತೆ ನಡೆಸಿದೆ. ವಿವಾದ ಬಗೆಹರಿಸುವ ವಿಶ್ವಾಸ ಇದೆ. ಹೋರಾಟ ಕೈಬಿಡುವಂತೆ ರೈತರಲ್ಲಿ  ಮನವಿ ಮಾಡುತ್ತೇನೆ.
-ಸಿದ್ದರಾಮಯ್ಯ

Write A Comment