ಕುಂದಾಪುರ: ಮಟಮಟ ಮಧ್ಯಾಹ್ನವೇ ಅರ್ಧ ಶಟರ್ ಮುಚ್ಚಿದ್ದ ಮೊಬೈಲ್ ಅಂಗಡಿಯೊಳಕ್ಕೆ ನುಸುಳಿ ಒಳಗಿದ್ದ ನಗದನ್ನು ಕದ್ದಿದ್ದ ಆರೋಪಿಯೋರ್ವ ಕೆಲವು ತಿಂಗಳ ಬಳಿಕ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಕುಂದಾಪುರದ ಹೊಸಂಗಡಿ ಮೂಲದವನಾದ ಉದಯ ನಾಯ್ಕ್ (22) ಬಂಧಿತ ಆರೋಪಿ.
ಫೆ.27 ರಂದು ಸಿದ್ದಾಪುರದ ಶ್ರೀ ಬ್ರಾಹ್ಮೀ ಮೊಬೈಲ್ ಶಾಪ್ ಮಾಲೀಕರು ಮಧ್ಯಾಹ್ನದ ಸುಮಾರಿಗೆ ಊಟಕ್ಕೆಂದು ಶಟರ್ ಮುಚ್ಚಿ ತೆರಳಿದ್ದು ಇದೇ ಸಂದರ್ಭಕ್ಕಾಗಿ ಹೊಂಚು ಹಾಕುತ್ತಿದ್ದ ಉದಯ ಒಳಕ್ಕೆ ಹೊಕ್ಕು ಕ್ಯಾಶಿನಲ್ಲಿದ್ದ 64,700 ರೂ ನಗದನ್ನು ಕದ್ದು ಪರಾರಿಯಾಗುತ್ತಾನೆ. ಈ ಬಗ್ಗೆ ಅಂಗಡಿ ಮಾಲೀಕ ಸಂತೋಷ್ ಕೋಟ್ಯಾನ್ ಎನ್ನುವವರು ಪೊಲೀಸರಿಗೆ ದೂರು ನೀಡಿದ್ದು ತನಿಖೆ ಆರಂಭಿಸಿದ ಪೊಲಿಸರು ಹಲವು ಮಾಹಿತಿ ಕಲೆಹಾಕುತ್ತಾರೆ. ಮೊಬೈಲ್ ಅಂಗಡಿ ಸಮೀಪದ ಚಿನ್ನದಂಗಡಿಯೊಂದರ ಸಿ.ಸಿ. ಕ್ಯಾಮೆರಾದಲ್ಲಿ ಆರೋಪಿ ಚನವಲನದ ಬಗ್ಗೆ ಕೆಲವು ಮಾಹಿತಿಗಳು ಸಿಕ್ಕಿತ್ತು. ಇದನ್ನಾಧರಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು ಆರೋಪಿ ಉದಯ ಎಂಬುದನ್ನೇ ಖಚಿತಪಡಿಸಿಕೊಂಡು ಆತನನ್ನು ಬಂದಿಸಲಾಗಿದೆ.
ಉಡುಪಿ ಎಸ್ಪಿ ಅಣ್ಣಾಮಲೈ, ಹೆಚ್ಚುವರಿ ಎಸ್ಪಿ ಸಂತೋಷ್ ಕುಮಾರ್, ಕುಂದಾಪುರ ಡಿವೈಎಸ್ಪಿ ಮಂಜುನಾಥ್ ಶೆಟ್ಟಿ ಮಾರ್ಗದರ್ಶನದಲ್ಲಿ ಕುಂದಾಪುರ ಸರ್ಕಲ್ ಇನ್ಸ್‌ಪೆಕ್ಟರ್ ದಿವಾಕರ್ ಪಿ.ಎಂ ಹಾಗೂ ಶಂಕರನಾರಾಯಣ ಠಾಣೆ ಎಸ್ಸೈ ದೇಜಪ್ಪ ಮತ್ತು ಸಿಬ್ಬಂಧಿಗಳು ಈ ಕಾರ್ಯಾಚರಣೆಯಲ್ಲಿದ್ದರು.




