ಕಾಸರಗೋಡು, ಸೆ.27: ಪ್ರಮುಖ ವಿದ್ವಾಂಸ, ಹಲವು ಮೊಹಲ್ಲಾಗಳ ಖಾಝಿ, ಕೇರಳ ರಾಜ್ಯ ಎಸ್‌ವೈಎಸ್ ಕೋಶಾಧಿಕಾರಿ, ಮಂಜೇಶ್ವರ ಮಳ್‌ಹರ್ ವಿದ್ಯಾಸಂಸ್ಥೆಯ ಸ್ಥಾಪಕ ಸೈಯದ್ ಮುಹಮ್ಮದ್ ಉಮರುಲ್ ಫಾರೂಕ್ ಅಲ್ ಬುಖಾರಿ (ಪೊಸೋಟ್ ತಂಙಳ್) ಶನಿವಾರ ಮುಂಜಾವ 2 ಗಂಟೆ ಸುಮಾರಿಗೆ ಕಲ್ಲಿಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ 53 ವರ್ಷ ವಯಸ್ಸಾಗಿತ್ತು. ತಂಙಳ್‌ರ ತವರೂರು ಕಡಲುಂಡಿಯಲ್ಲಿ ಬೆಳಗ್ಗೆ 10 ಗಂಟೆಗೆ ಮಯ್ಯಿತ್ ನಮಾಝ್ ನಿರ್ವಹಿಸಿದ ಬಳಿಕ ಮೃತದೇಹವನ್ನು ಕಾಸರಗೋಡಿಗೆ ತರಲಾಯಿತು. ಮಳ್‌ಹರ್ ಸಂಸ್ಥೆಯ ವಠಾರದಲ್ಲಿ ದಫನಗೈಯಲಾಯಿತು. ಪೊಸೋಟ್ ತಂಙಳ್ ಪ್ರವಾದಿ ವಂಶದ ಬುಖಾರಿ ಕುಟುಂಬದ ಸೈಯದ್ ಅಹ್ಮದ್ ಬುಖಾರಿಯವರ ಹಿರಿಯ ಪುತ್ರರಾಗಿ ಕಲ್ಲಿಕೋಟೆಯ ಕಡಲುಂಡಿ ಎಂಬಲ್ಲಿ 1961ರಲ್ಲಿ ಜನಿಸಿದ್ದರು.
ತಂದೆಯ ಬಳಿಯಲ್ಲೇ ಪ್ರಮುಖ ಧಾರ್ಮಿಕ ಗ್ರಂಥಗಳನ್ನು ಎಳೆಯ ಪ್ರಾಯದಲ್ಲೇ ಅಧ್ಯಯನ ಮಾಡಿದ್ದ ಅವರು, ಬಳಿಕ ಪ್ರಸಿದ್ಧ ಸೂಫಿವರ್ಯ ಪೆರುಮುಖಂ ಬೀರಾನ್ ಕೋಯ ಮುಸ್ಲಿಯಾರ್‌ರ ಬಳಿ ಹೆಚ್ಚಿನ ಅಧ್ಯಯನ ಮಾಡಿದ್ದರು. ಬಾಖಿಯಾತುಸ್ವಾಲಿಹಾತ್‌ನಿಂದ ಬಾಖವಿ ಪದವಿ ಗಳಿಸಿ ತನ್ನ ತವರೂರಿನ ಸಮೀಪ ಆಕ್ಕೋಡ್ ಎಂಬಲ್ಲಿನ ದರ್ಸ್ ನಲ್ಲಿ ಮುದರ್ರಿಸರಾಗಿ ಶೈಕ್ಷಣಿಕ ಸೇವೆ ಆರಂಭಿಸಿದ್ದರು.
ಉಳ್ಳಾಲ ತಂಙಳ್ ಸೈಯದ್ ಅಬ್ದುರ್ರಹ್ಮಾನ್ ಅಲ್ ಬುಖಾರಿಯವರ ಸಲಹೆಯಂತೆ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಪೊಸೋಟ್ ಎಂಬಲ್ಲಿಗೆ ಮುದರ್ರಿಸರಾಗಿ ನೇಮಕಗೊಂಡಿದ್ದರು. ಬಳಿಕ 1997ರಲ್ಲಿ ಹೊಸಂಗಡಿ ಬುಖಾರಿ ಕಾಂಪೌಂಡ್ ಕೇಂದ್ರೀಕರಿಸಿ ಮಳ್‌ಹರ್ ಸಂಸ್ಥೆಯನ್ನು ಸ್ಥಾಪಿಸಿ ಮರಣದ ತನಕ ಶೈಕ್ಷಣಿಕ ಸೇವೆಯಲ್ಲಿ ತೊಡಗಿದ್ದರು.
ಪೊಸೋಟ್ ತಂಙಳ್ ಕಾಸರಗೋಡು ಮತ್ತು ಕರ್ನಾಟಕದ ದ.ಕ. ಜಿಲ್ಲೆಯ ಕೆಲವು ಮೊಹಲ್ಲಾಗಳಲ್ಲಿ ಖಾಝಿ ಸ್ಥಾನವನ್ನು ಅಲಂಕರಿಸಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಮೂವರು ಪುತ್ರಿಯರ ಸಹಿತ ಅಪಾರ ಶಿಷ್ಯವರ್ಗ, ಬಂಧುಮಿತ್ರರನ್ನು ಅಗಲಿದ್ದಾರೆ.
ಅಂತಿಮ ದರ್ಶನ:
ಕರ್ನಾಟಕ ಆರೋಗ್ಯ ಸಚಿವ ಯು.ಟಿ.ಖಾದರ್, ಶಾಸಕರಾದ ಎನ್.ಎ.ನೆಲ್ಲಿಕುನ್ನು, ಪಿ.ಬಿ.ಅಬ್ದುರ್ರಝಾಕ್, ಮಾಜಿ ಸಚಿವ ಸಿ.ಟಿ.ಅಹ್ಮದಲಿ, ಕರ್ನಾಟಕ ಸುನ್ನಿ ಉಲಮಾ ಒಕ್ಕೂಟದ ರಾಜ್ಯಾಧ್ಯಕ್ಷ ಪಿ.ಎಂ.ಇಬ್ರಾಹೀಂ ಮುಸ್ಲಿಯಾರ್ ಬೇಕಲ್, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಜಿ ಎಸ್.ಎಂ.ರಶೀದ್, ಅಲ್ ಮದೀನಾ ಸಂಸ್ಥೆಯ ಅಧ್ಯಕ್ಷ ಅಬ್ಬಾಸ್ ಮುಸ್ಲಿಯಾರ್, ದಾರುಲ್ ಇರ್ಶಾದ್ ಅಧ್ಯಕ್ಷ ಮಾಣಿ ಅಬ್ದುಲ್ ಹಮೀದ್ ಮುಸ್ಲಿಯಾರ್, ಮಸ್ಜಿದು ತಕ್ವಾದ ಕಾರ್ಯದರ್ಶಿ ಬಿ.ಎಂ.ಮುಮ್ತಾಝ್ ಅಲಿ, ಸೈಯದ್ ಅಲಿ ಬಾಫಕಿ ತಂಙಳ್, ಅಲಿಕುಂಞಿ ಮುಸ್ಲಿಯಾರ್ ಶಿರಿಯಾ, ಎಸ್‌ವೈಎಸ್ ರಾಜ್ಯಾಧ್ಯಕ್ಷ ಕೆ.ಪಿ.ಹುಸೈನ್ ಸಅದಿ, ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಎಂ.ಬಿ.ಎಂ.ಸಾದಿಕ್, ಮಂಗಳೂರು ಝೀನತ್ ಬಕ್ಷ್ ಯತೀಂ ಖಾನದ ಅಧ್ಯಕ್ಷ ಇಬ್ರಾಹೀಂ ಬಾವ ಹಾಜಿ, ಜಮೀಯತುಲ್ ಉಲಮಾದ ರಾಜ್ಯ ಕಾರ್ಯದರ್ಶಿ ಯು.ಕೆ.ಮುಹಮ್ಮದ್ ಸಅದಿ ಸಹಿತ ಸಾವಿರಾರು ಮಂದಿ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು, ಮೃತದೇಹದ ಅಂತಿಮದರ್ಶನ ಪಡೆದರು.
ಗಣ್ಯರಿಂದ ಸಂತಾಪ ಸೂಚನೆ:
ಪೊಸೋಟ್ ತಂಙಳ್‌ರ ನಿಧನಕ್ಕೆ ಸುನ್ನೀ ಜಂಇಯ್ಯತುಲ್ ಉಲಮಾ ಪ್ರ.ಕಾರ್ಯದರ್ಶಿ ಕಾಂತಪುರಂಎ.ಪಿ.ಅಬೂಬಕರ್ ಮುಸ್ಲಿಯಾರ್, ಉಳ್ಳಾಲ ಖಾಝಿ ಸೈಯದ್ ಫಝಲ್ ಕೋಯಮ್ಮ ಅಲ್-ಬುಖಾರಿ ತಂಙಳ್, ಸಅದಿಯಾ ಅಧ್ಯಕ್ಷ ಸೈಯದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್, ಎಸ್‌ಜೆಎಂರಾಜ್ಯಾಧ್ಯಕ್ಷ ಆತೂರು ಸಅದ್ ಮುಸ್ಲಿಯಾರ್, ಕೆಸಿಎಫ್ ಅಂತಾರಾಷ್ಟ್ರೀಯ ಅಧ್ಯಕ್ಷ ಎಸ್.ಪಿ.ಹಂಝ ಸಖಾಫಿ ಬಂಟ್ವಾಳ, ಪ್ರ.ಕಾರ್ಯದರ್ಶಿ ಹಾಜಿ ಶೈಖ್ ಬಾವ ಮಂಗಳೂರು, ರಾಜ್ಯ ಪ್ರ.ಕಾರ್ಯದರ್ಶಿ ಜಿ.ಎಂ.ಕಾಮಿಲ್ ಸಖಾಫಿ, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಎನ್.ಕೆ.ಮುಹಮ್ಮದ್ ಶಾಫಿ ಸಅದಿ, ಉಳ್ಳಾಲ ಜುಮಾ ಮಸೀದಿ ಮತ್ತು ಸೈಯದ್ ಮದನಿ ದರ್ಗಾ ಅಧ್ಯಕ್ಷ ಹಾಜಿ ಯು.ಎಸ್.ಹಂಝ, ಮೂಳೂರು ಅಲ್-ಇಹ್ಸಾನ್‌ನ ಮ್ಯಾನೇಜರ್ ಮುಸ್ತಫಾ ಸಅದಿ, ಮುಹಿಮ್ಮಾತ್ ಕಾರ್ಯದರ್ಶಿ ಬಿ.ಎಸ್.ಅಬ್ದುಲ್ಲ ಕುಂಞಿ ಫೈಝಿ, ಎಸ್‌ವೈಎಸ್ ಕೇರಳ ರಾಜ್ಯಾಧ್ಯಕ್ಷ ಪೊನ್ಮಳ ಅಬ್ದುಲ್ ಖಾದರ್ ಮುಸ್ಲಿಯಾರ್, ಎಸ್ಸೆಸ್ಸೆಫ್ ರಾಷ್ಟ್ರೀಯ ನಾಯಕ ಎಮ್ಮೆಸ್ಸೆಂ ಅಬ್ದರ್ರಶೀದ್ ಝೈನಿ ಅಲ್ ಕಾಮಿಲ್, ಎಸ್‌ವೈಎಸ್ ಕಾಸರಗೋಡು ಜಿಲ್ಲಾ ಸಮಿತಿ, ಕಾಸರಗೋಡು ಜಿಲ್ಲಾ ಸಂಯುಕ್ತ ಜಮಾಅತ್ ಸಮಿತಿ, ಮಂಜೇಶ್ವ-ಕುಂಬಳೆ ಸಂಯಕ್ತ ಜಮಾಅತ್ ಸಮಿತಿ, ಕೆಎಂಜೆಸಿ ದ.ಕ. ಅಧ್ಯಕ್ಷ ಹೈದರ್ ಪರ್ತಿಪ್ಪಾಡಿ, ರಾಜ್ಯ ವಕ್ಫ್ ಬೋರ್ಡ್ ಉಲಮಾ ಕೌನ್ಸಿಲ್ ಸದಸ್ಯ ಕೆ.ಎಚ್.ಇಸ್ಮಾಯೀಲ್ ಸಅದಿ ಕಿನ್ಯಾ ಸಂತಾಪ ಸೂಚಿಸಿದ್ದಾರೆ.
