ಪುತ್ತೂರು, ಸೆ.27: ಬಜರಂಗದಳದ ಪುತ್ತೂರು ಪ್ರಖಂಡ ಸಂಚಾಲಕ, ರಿಕ್ಷಾ ಚಾಲಕ ರಾಜೇಶ್ ಪೆರಿಗೇರಿ ಎಂಬವರನ್ನು ಬಾಡಿಗೆ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ಮತ್ತು ಕೊಲೆಗೆ ಯತ್ನಿಸಿದ ಆರೋಪದಲ್ಲಿ ಇಬ್ಬರನ್ನು ಶನಿವಾರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪುತ್ತೂರು ತಾಲೂಕಿನ ನಿಡ್ಪಳ್ಳಿ ನಿವಾಸಿಗಳಾದ ಬಾಲಚಂದ್ರ ಮತ್ತು ರಾಧಾಕೃಷ್ಣ ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಅರಿಯಡ್ಕ ಗ್ರಾಮದ ಪೆರಿಗೇರಿ ನಿವಾಸಿ ರಾಜೇಶ್ ರಿಕ್ಷಾ ಚಾಲಕರಾಗಿದ್ದು, ಸೆ.1ರಂದು ಸಂಪ್ಯ ಠಾಣೆಗೆ ದೂರು ನೀಡಿ ಅವರಿಚಿತ ವ್ಯಕ್ತಿಗಳಿಬ್ಬರು ಮಂಜಲ್ಪಡ್ಪುವಿಗೆ ಹೋಗಲಿದೆ ಎಂದು ಹೇಳಿ ತನ್ನ ರಿಕ್ಷಾವನ್ನು ಬಾಡಿಗೆಗೆ ಗೊತ್ತುಪಡಿಸಿಕೊಂಡು ತೆರಳಿ, ಬಳಿಕ ಅಲ್ಲಿಂದ ಒಳಮೊಗ್ರು ಗ್ರಾಮದ ಕಾಪಿಕಾಡು ನೀರುಕುಕ್ಕು ಎಂಬಲ್ಲಿನ ಕಾಡಿನೊಳಗೆ ಕರೆಯೊಯ್ದು ಹಲ್ಲೆಗೈದು ಕೊಲೆಗೆ ಯತ್ನಿಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದರು.
ಸಂಪ್ಯ ಠಾಣೆಯ ಮುಂಭಾಗದಲ್ಲಿ ಜಮಾಯಿಸಿದ ಬಜರಂಗದಳದ ಕಾರ್ಯಕರ್ತರು ರಾಜೇಶ್ ಪೆರಿಗೇರಿ ಕೊಲೆಗೆ ಯತ್ನಿಸಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ದರು. ಸೆ.3ರಂದು ಪುತ್ತೂರು ಬಸ್ ನಿಲ್ದಾಣದ ಬಳಿ ಧರಣಿ ನಡೆಸಿದ ರಿಕ್ಷಾ ಚಾಲಕರ ಮಾಲಕರ ಸಂಘ ಹಾಗೂ ಇನ್ನಿತರ ಸಂಘಟನೆಗಳು ಕೊಲೆ ಯತ್ನ ನಡೆಸಿದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದರು.
ಸಂಪ್ಯ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಮಹಜರು ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.
