ಕನ್ನಡ ವಾರ್ತೆಗಳು

ಬಡ ಕುಟುಂಬದ ಕ್ಯಾನ್ಸರ್ ಪೀಡಿತ ಮಹಿಳೆಯ ನೆರವಿಗೆ ಕೋರಿಕೆ : ದಾನಿಗಳಿಂದ ಆರ್ಥಿಕ ಸಹಾಯಕ್ಕಾಗಿ ಮನವಿ

Pinterest LinkedIn Tumblr

cancer_help_line

ಮಂಗಳೂರು, ಸೆ.27: ಕಾಸರಗೋಡು ಆಝಾದ್ ನಗರದ ನಿವಾಸಿ ದಿ.ಅಬ್ದುಲ್ ಗಫೂರ್ ಎಂಬವರ ಪತ್ನಿ ಮುಮ್ತಾಝ್ ಗಫೂರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ತೀರಾ ಬಡ ಕುಟುಂಬಸ್ಥರಾದ ಅವರು ವೈದ್ಯಕೀಯ ವೆಚ್ಚಕ್ಕಾಗಿ ದಾನಿಗಳಿಂದ ಆರ್ಥಿಕ ಸಹಾಯವನ್ನು ಕೋರಿದ್ದಾರೆ.

ಮುಮ್ತಾಝ್ ರಿಗೆ ಮೂರು ತಿಂಗಳ ಹಿಂದೆ ಜ್ವರ ಕಾಣಿಸಿಕೊಂಡಿದ್ದು, ಸ್ಥಳೀಯ ವೈದ್ಯರಲ್ಲಿ ತೋರಿಸಿ ಚಿಕಿತ್ಸೆ ಪಡೆದುಕೊಂಡಿದ್ದರು. ಔಷಧಿ ಮುಂದುವರಿಸಿದ್ದರೂ ಜ್ವರವು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಅವರನ್ನು ಕಾಸರಗೋಡಿನಿಂದ ಮಂಗಳೂರಿಗೆ ಕರೆತಂದು ನಗರದ ಕೊಲೊಸೋ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.

ಸುಮಾರು 15 ದಿನಗಳ ಕಾಲ ಚಿಕಿತ್ಸೆ ಪಡೆದ ಅವರನ್ನು ಅನಂತರ ನಗರದ ಯುನಿಟಿ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಅಲ್ಲಿ ವೈದ್ಯರು ಪರೀಕ್ಷೆಗೊಳಪಡಿಸಿದಾಗ ಕ್ಯಾನ್ಸರ್ ಎಂದು ಖಚಿತ ಪಡಿಸಿದ್ದರು. ಇಲ್ಲಿಯೂ ಸುಮಾರು 15 ದಿನಗಳ ಚಿಕಿತ್ಸೆ ಪಡೆಯುತ್ತಿದ್ದ ನಡುವೆಯೇ ಮುಮ್ತಾಝ್ ತಮ್ಮ ಪತಿ ಗಫೂರ್‌ರನ್ನು ಕಳೆದುಕೊಂಡಿದ್ದರು. ಇದು ಕುಟುಂಬವನ್ನು ಮತ್ತಷ್ಟು ಆಘಾತಕ್ಕೀಡು ಮಾಡಿತು.

ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆಗಾಗಿ ಈಗಾಗಲೇ ಸುಮಾರು 1.5 ಲಕ್ಷ ರೂ. ವೆಚ್ಚ ಮಾಡಿರುವ ಮುಮ್ತಾಝ್, ಇದೀಗ ಕಂಕನಾಡಿಯಲ್ಲಿರುವ ಯೆನೆಪೊಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಚಿಕಿತ್ಸೆಗೆ ಸುಮಾರು ಐದು ಲಕ್ಷ ರೂ. ಅಗತ್ಯವಿದೆ ಎಂದು ವೈದ್ಯರು ತಿಳಿಸಿರುವುದಾಗಿ ಅವರ ಕುಟುಂಬಸ್ಥರು ತಿಳಿಸಿದ್ದಾರೆ.

ತೀರಾ ಬಡವರಾಗಿರುವ ಮುಮ್ತಾಝ್‌ರಿಗೆ ಇಷ್ಟೊಂದು ದೊಡ್ಡ ಮೊತ್ತವನ್ನು ಹೊಂದಿಸಿಕೊಳ್ಳುವುದು ಅಸಾಧ್ಯವಾಗಿದ್ದು, ಅವರು ದಾನಿಗಳ ಸಹಾಯವನ್ನು ಕೋರಿದ್ದಾರೆ. ಮುಮ್ತಾಝ್‌ರ ಚಿಕಿತ್ಸೆಗೆ ಆರ್ಥಿಕ ಸಹಾಯ ಮಾಡಲಿಚ್ಛಿಸುವವರು ಈ ಕೆಳಗಿನ ಅವರ ಬ್ಯಾಂಕ್‌ನ ಖಾತೆಗೆ ಹಣವನ್ನು ಜಮಾಯಿಸುವಂತೆ ಕೋರಲಾಗಿದೆ.

ಮುಮ್ತಾಝ್ ಗಫೂರ್, ಅಕೌಂಟ್ ನಂಬರ್ 0726101003201, ಕೆನರಾ ಬ್ಯಾಂಕ್, ಮಿಸಿರಿಯಾ ಕಾಂಪೆಕ್ಸ್, ಎಂ.ಜಿ. ರೋಡ್, ಕಾಸರಗೋಡು (ಐಎಫ್‌ಎಸ್‌ಸಿ ಕೋಡ್ ಸಿಎನ್‌ಆರ್‌ಬಿ 0000726) ಖಾತೆಗೆ ಜಮಾ ಮಾಡಬಹುದು ಎಂದು ಪ್ರಕಟನೆಯಲ್ಲಿ ಮನವಿ ಮಾಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 08714916697ಯನ್ನು ಸಂಪರ್ಕಿಸಬಹುದು.

Write A Comment