ಕರ್ನಾಟಕ

‘ಡಿಜಿಟಲ್‌ ಇಂಡಿಯಾ’ ಕಲ್ಪನೆ: ನಿಲೇಕಣಿ

Pinterest LinkedIn Tumblr

nilakeniಬೆಂಗಳೂರು: ‘ಪ್ರತಿಯೊಬ್ಬರು ಸ್ಮಾರ್ಟ್‌ ಫೋನ್‌, ಆಧಾರ್‌ ಸಂಖ್ಯೆ ಮತ್ತು ಬ್ಯಾಂಕ್‌ ಖಾತೆ ಹೊಂದಿರುವ ವಾತಾವರಣವನ್ನು ಕಲ್ಪಿಸಿ. ಇದು ಹಲವಾರು ಆಧುನಿಕ ಉದ್ದಿಮೆಗಳನ್ನು ಮರುವಿನ್ಯಾಸಗೊಳಿಸುವ, ಮರುರೂಪಿಸುವ ಅವಕಾಶವನ್ನು ನಮಗೆ ಕಲ್ಪಿಸಲಿದೆ’ ಎಂದು ಇನ್ಫೊಸಿಸ್‌ ಸಹ ಸಂಸ್ಥಾಪಕ ಮತ್ತು  ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ ಮಾಜಿ ಅಧ್ಯಕ್ಷ ನಂದನ್‌ ನಿಲೇಕಣಿ ಹೇಳಿದರು.

ಬೆಂಗಳೂರಿನ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನಲ್ಲಿ (ಐಐಎಂಬಿ) ನಡೆಯುತ್ತಿರುವ  ಉಪನ್ಯಾಸ ಸರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭವಿಷ್ಯದಲ್ಲಿ ಸ್ಮಾರ್ಟ್‌ಫೋನ್‌ ತಂತ್ರಜ್ಞಾನದ ಸಾಧ್ಯ–ಸಾಧ್ಯತೆಗಳ ಬಗ್ಗೆ  ಬೆಳಕು ಚೆಲ್ಲಿದರು.

ತಮ್ಮ ಕನಸಿನ ಕೂಸು ಆಧಾರ್‌ ಯೋಜನೆಯ ಬಗ್ಗೆ, ಅದರ ಲಾಭಗಳ ಬಗ್ಗೆಯೂ ವಿವರಿಸಿದರು. ಪ್ರತಿಯೊಬ್ಬರೂ ಬ್ಯಾಂಕ್‌ ಖಾತೆ ಹೊಂದಿರಬೇಕು ಎಂಬ ಆಶಯದೊಂದಿಗೆ ಕೇಂದ್ರ ಸರ್ಕಾರ ಆರಂಭಿಸಿರುವ ಜನಧನ ಯೋಜನೆಯನ್ನೂ ಪ್ರಸ್ತಾಪಿಸಿದರು.

‘ದೇಶದಲ್ಲಿ ಸ್ಮಾರ್ಟ್‌ಫೋನ್‌ ಬಳಕೆ ಇನ್ನಷ್ಟು ವಿಸ್ತಾರವಾಗಲಿದೆ. 2017–18ರ ವೇಳೆಗೆ ಪ್ರತಿಯೊಬ್ಬರು ಮೊಬೈಲ್‌ ಹೊಂದಲಿದ್ದಾರೆ. ಅದರಲ್ಲಿ ಅರ್ಧಕ್ಕೂ ಹೆಚ್ಚು ಜನರು ಸ್ಮಾರ್ಟ್‌ಫೋನ್‌ ಬಳಕೆದಾರರಾಗಲಿದ್ದಾರೆ’ ಎಂದರು.

‘ಆಧಾರ್‌, ಜಗತ್ತಿನಲ್ಲೇ ಅತ್ಯಂತ ವಿಶಿಷ್ಟ ಯೋಜನೆ. ಡಿಜಿಟಲ್‌ ತಂತ್ರಜ್ಞಾನದಲ್ಲಿ ಗುರುತಿನ ಸಂಖ್ಯೆ ನೀಡುವ ಪರಿಕಲ್ಪನೆ ಬೇರೆ ಎಲ್ಲೂ ಇಲ್ಲ. ಮುಂದಿನ ವರ್ಷದ ವೇಳೆಗೆ (2016–17) 100 ಕೋಟಿ ಜನ ಆಧಾರ್‌ ಸಂಖ್ಯೆಯನ್ನು ಹೊಂದಲಿದ್ದಾರೆ’ ಎಂದು ವಿವರಿಸಿದರು.

‘ಮೂರು–ನಾಲ್ಕು ವರ್ಷಗಳಲ್ಲಿ ದೇಶದಲ್ಲಿ ಬ್ಯಾಂಕ್‌ ಖಾತೆಗಳು ಸಾರ್ವತ್ರೀಕರಣಗೊಳ್ಳಲಿದೆ. ಕೇಂದ್ರ ಸರ್ಕಾರ ಆರಂಭಿಸಿರುವ ಜನಧನ ಯೋಜನೆ ಇದಕ್ಕೆ ಪೂರಕವಾದದ್ದು. ಒಂದು ತಿಂಗಳ ಅವಧಿಯಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌, 21 ಬ್ಯಾಂಕ್‌ಗಳಿಗೆ ಪರವಾನಗಿ ನೀಡಿರುವುದು ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ’ ಎಂದು ಅಭಿಪ್ರಾಯಪಟ್ಟರು.
ಈ ಮೂರೂ ವಿಷಯಗಳನ್ನು ಸಮೀಕರಿಸಿದ ನಿಲೇಕಣಿ, ಭವಿಷ್ಯದ ಜಗತ್ತಿನಲ್ಲಿ ಮೊಬೈಲ್‌ಗಳನ್ನೇ  ಗುರುತಿನ ದೃಢೀಕರಣಕ್ಕೆ ಬಳಸಬಹುದು ಉದಾಹರಣೆಗಳ ಮೂಲಕ ಪ್ರತಿಪಾದಿಸಿದರು.

‘ಬಯೊಮೆಟ್ರಿಕ್‌ (ಕಣ್ಣು, ಬೆರಳಚ್ಚು) ವಿಧಾನದಿಂದ (ಪಿನ್‌ಗೆ ಬದಲಾಗಿ) ಮೊಬೈಲ್‌ಗಳನ್ನು ಚಾಲೂ ಮಾಡುವ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗುತ್ತಿದೆ. ಗ್ರಾಹಕರ ಮಾಹಿತಿಯನ್ನು ಎಲೆಕ್ಟ್ರಾನಿಕ್‌  (ಇ–ವೈಕೆಸಿ) ರೂಪದಲ್ಲಿ ದಾಖಲಿಸುವ ಅವಕಾಶವನ್ನು ಆಧುನಿಕ ತಂತ್ರಜ್ಞಾನ ಕಲ್ಪಿಸಿದೆ. ಆಧಾರ್‌ ಕಾರ್ಡ್‌ ಬಳಸಿಕೊಂಡು ದಾಖಲೆಗಳಿಗೆ ಡಿಜಿಟಲ್‌ ಸಹಿ ಮಾಡಬಹುದು. ದಾಖಲೆಗಳನ್ನು ಡಿಜಿಟಲ್‌ ರೂಪದಲ್ಲಿ ಸಂಗ್ರಹಿಸಿಡುವ ಡಿಜಿಟಲ್‌ ಲಾಕರ್‌ಗಳು ಬರಲಿವೆ’ ಎಂದು ವಿವರಿಸಿದರು.

‘ಯಾವುದೇ ಅಡಚಣೆ ಇಲ್ಲದೇ ಮೊಬೈಲ್‌ ಮೂಲಕ ಇನ್ನೊಬ್ಬರಿಗೆ ಸುಲಭವಾಗಿ ಹಣವನ್ನು ವರ್ಗಾವಣೆ ಮಾಡಬಹುದಾದ ತಂತ್ರಜ್ಞಾನವನ್ನು ನ್ಯಾಷನಲ್‌ ಪೇಮೆಂಟ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಅಭಿವೃದ್ಧಿ ಪಡಿಸುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.

‘ಸರ್ಕಾರ ಈಗಾಗಲೇ ಫಲಾನುಭವಿಗಳಿಗೆ ಕೆಲವು ಯೋಜನೆಗಳ ಅನುಕೂಲವನ್ನು ತಲುಪಿಸಲು ಆಧಾರ್‌ ಆಧಾರಿತ ವ್ಯವಸ್ಥೆ ಬಳಸುತ್ತಿದೆ. ಮುಂದಿನ ದಿನಗಳಲ್ಲಿ ಖಾಸಗಿಯವರು ಕೂಡ ಇವುಗಳನ್ನು ಬಳಸಿಕೊಂಡು ತಮ್ಮ ಉದ್ಯಮಕ್ಕೆ ಮರುಸ್ಪರ್ಶ ನೀಡಬಹುದು’ ಎಂದರು.
*
ದೇಶದಲ್ಲಿ 92 ಕೋಟಿ ಜನರು ಆಧಾರ್‌ ನೋಂದಣಿ ಮಾಡಿಸಿದ್ದಾರೆ. ವಾಟ್ಸ್‌ಆ್ಯಪ್‌ ಬಳಕೆದಾರರಿಗಿಂತಲೂ ಹೆಚ್ಚಿನ ವೇಗದಲ್ಲಿ ಆಧಾರ್‌ಗೆ ನೋಂದಾಯಿಸಿಕೊಳ್ಳುತ್ತಿದ್ದಾರೆ.
– ನಂದನ್‌ ನಿಲೇಕಣಿ,
ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ ಮಾಜಿ ಅಧ್ಯಕ್ಷ

Write A Comment