ಕರ್ನಾಟಕ

ಕಳಸಾ-ಬಂಡೂರಿಗೆ ಆಗ್ರಹಿಸಿ ಕರ್ನಾಟಕ ಬಂದ್: ಶಾಲಾ ಕಾಲೇಜುಗಳಿಗೆ ರಜೆ

Pinterest LinkedIn Tumblr

bundhe-newಬೆಂಗಳೂರು: ಕಳಸಾ-ಬಂಡೂರಿ, ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಸೆ. 26ರಂದು ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಜನಜೀವನ ಅಸ್ತವ್ಯಸ್ತಗೊಳ್ಳಲಿದೆ. ಬಂದ್‌ಗೆ ವಿವಿಧ ಕಾರ್ಮಿಕ  ಸಂಘಟನೆಗಳು, ಲಾರೀ ಮಾಲೀಕರು, ಟೂರಿಸ್ಟ್‌ ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್‌ ಸಂಘಟನೆಗಳು, ಸಾರಿಗೆ ನಿಗಮದ ಕಾರ್ಮಿಕ ಸಂಘಟನೆಗಳು, ಹೋಟೆಲ್‌ ಮಾಲೀಕರ ಸಂಘಟನೆ, ಕನ್ನಡ ಸಾಹಿತ್ಯ ಪರಿಷತ್‌, ಚಲನಚಿತ್ರ ಕ್ಷೇತ್ರ ಸೇರಿದಂತೆ ನೂರಾರು ಸಂಘಟನೆಗಳು, ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ.

ಶಾಲಾ-ಕಾಲೇಜುಗಳು ರಜೆ

ಬಂದ್ ಹಿನ್ನೆಲೆಯಲ್ಲಿ  ಬೆಂಗಳೂರು ನಗರ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.  ಉಳಿದ ಜಿಲ್ಲೆಗಳಲ್ಲಿ ಸ್ಥಳೀಯ ಪರಿಸ್ಥಿತಿಯನ್ನಾಧರಿಸಿ ರಜೆ ನೀಡುವ ಜವಾಬ್ದಾರಿಯನ್ನು ಆಯಾ ಜಿಲ್ಲೆಗಳ ಉಪನಿರ್ದೇಶಕರಿಗೆ ನೀಡಲಾಗಿದೆ. ಬಂದ್ ಹಿನ್ನೆಲೆಯಲ್ಲಿ ಯಾವುದೇ ತೊಂದರೆಗಳಾಗಬಾರದೆಂಬ ಕಾರಣಕ್ಕೆ ಇಲಾಖೆ ರಜೆ ಘೋಷಿಸಿದೆ.

ಬಸ್ ಸಂಚಾರದಲ್ಲಿ ವ್ಯತ್ಯಯ:

ನಾಳೆ ನಡೆಯಲಿರುವ ಕರ್ನಾಟಕ ಬಂದ್‌ಗೆ ರಾಜ್ಯಾದ್ಯಂತ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿರುವ ಜತೆಗೆ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ನೌಕರರು ಬೆಂಬಲಿಸಿರುವ ಹಿನ್ನೆಲೆಯಲ್ಲಿ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್ ಸಂಚಾರದ ಮಾರ್ಗಗಳಲ್ಲಿ ದೈನಂದಿನ ಬಸ್ ಸಂಚಾರಕ್ಕೆ ಯಾವುದೇ ಕಡಿತ ಮಾಡಿಲ್ಲವಾದರೂ ಬಸ್ ಸಂಚಾರದ ಮೇಲೆ ಆಯಾ ಭಾಗ ಪ್ರಸ್ತುತ ಪರಿಸ್ಥಿತಿ ಅವಲಂಬಿತವಾಗಲಿದೆ. ಬಸ್ ಸಂಚಾರಕ್ಕೆ ತೊಂದರೆ ಎದುರಾಗುವುದು, ಬಸ್‌ಗೆ ಕಲ್ಲು ತೂರಾಟ ಸೇರಿದಂತೆ ಇನ್ನಿತರ ಹಾನಿ ಉಂಟಾಗುವ ಸಂಭವ ಸೃಷ್ಠಿಯಾದರೆ ಸುರಕ್ಷತ ದೃಷ್ಠಿಯಿಂದ ಆ ಮಾರ್ಗದ ಸಂಚಾರ ಕಡಿತಗೊಳ್ಳಲಿದೆ.

ಬಂದ್‌ಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕಮಿಟಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್, ಬಿಎಂಟಿಸಿ ಉತ್ತರ ಕಮಿಟಿ ನೌಕರರ ಕ್ಷೇಮಾಭಿವೃದ್ಧಿ ಸಂಘ, ಕೆಎಸ್‌ಆರ್‌ಟಿಸಿ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಸೇರಿದಂತೆ ಸಾರಿಗೆ ಸಂಸ್ಥೆಯ ವಿವಿಧ ಸಂಘಟನೆಗಳು ಬಂದ್ ಬೆಂಬಲಿಸಿವೆ. ಹಾಗಾಗಿ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯವಾಗುರುವ ಸಾಧ್ಯತೆ ಇದೆ. ಬಸ್ ಸಂಚಾರ ವ್ಯತ್ಯಯದ ಬಗ್ಗೆ ಅಧಿಕೃತವಾಗಿ ಪ್ರಕಟಿಸದಿದ್ದರೂ ಹೆಚ್ಚಿನ ಮಟ್ಟದಲ್ಲಿ ಬಸ್ ಸಂಚಾರ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ರಾಜ್ಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್

ನಾಳಿನ ಬಂದ್ ವೇಳೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ.  ಎಲ್ಲಾ ಎಸ್‌ಪಿ ಮತ್ತು ವಲಯ ಐಜಿಪಿ ಹಾಗೂ ನಗರದ ಎಲ್ಲಾ ಆಯುಕ್ತರಿಗೆ ಮತ್ತು ಜಿಲ್ಲಾ ಎಸ್‌ಪಿಗಳಿಗೆ ಬಂದ್ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಸೂಕ್ತ ಬಂದೋಬಸ್ತ್ ಕೈಗೊಳ್ಳಲು ಈಗಾಗಲೇ ಆದೇಶ ಹೊರಡಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಬಂದೋಬಸ್ತ್‌ನಲ್ಲಿ ಡಿಎಆರ್ ಪ್ಲಟೂನ್ ಜೊತೆ ಕೆಎಸ್‌ಆರ್‌ಪಿ ಪ್ಲಟೂನ್‌ಗಳನ್ನು ಸಹ ನೀಡಲಾಗಿದೆ. ಗಡಿ ಭಾಗಗಳಲ್ಲಿನ ಚೆಕ್‌ಪೋಸ್ಟ್‌ಗಳಲ್ಲೂ ಸಹ ಬಂದೋಬಸ್ತ್‌ಗಾಗಿ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬಂದ್ ಏಕೆ..?

ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಗದಗ, ಹುಬ್ಬಳ್ಳಿ ಸೇರಿದಂತೆ ಮತ್ತಿತರ ನಗರಗಳಿಗೆ ಮಹದಾಯಿ ನದಿಯಿಂದ ಕಳಸಾ-ಬಂಡೂರಿ ನಾಲಾ ಮೂಲಕ ಕುಡಿಯುವ ನೀರು ಯೋಜನೆಯನ್ನು ಅನುಷ್ಠಾನಗೊಳಿಸಬೇಕೆಂಬುದು ಕನ್ನಡಪರ ಸಂಘಟನೆಗಳ ಆಗ್ರಹವಾಗಿದೆ. ಇದಕ್ಕಾಗಿ ಕಳೆದ ಎರಡು ತಿಂಗಳಿನಿಂದ ಉತ್ತರ ಕರ್ನಾಟಕದ ಹುಬ್ಬಳ್ಳಿ, ಧಾರವಾಡ ಮತ್ತಿತರ ಕಡೆ ಹೋರಾಟ ತೀವ್ರಗೊಂಡಿದೆ. ಅದರಲ್ಲೂ ನರಗುಂದದಲ್ಲಿ ರೈತ ಸಂಘಟನೆಗಳು ನಿರಂತರ ಪ್ರತಿಭಟನೆ ನಡೆಸುತ್ತಿವೆ. ಇದರ ಜತೆಗೆ ಸಾಲಭಾದೆ ತಾಳಲಾರದೆ ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರಿಗೆ ವಿಶೇಷ ಪ್ಯಾಕೇಜ್ ನೀಡುವುದು, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬಂದ್‌ಗೆ ಕರೆ ನೀಡಲಾಗಿದೆ.  ಈ ಮಧ್ಯೆ ಕರ್ನಾಟಕ ಬಂದ್‌ ವೇಳೆ ಶನಿವಾರ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಗೋವಾ ರಾಜ್ಯಕ್ಕೆ ರಫ್ತಾಗುವ ತರಕಾರಿ, ಹಾಲು ಸೇರಿದಂತೆ ಎಲ್ಲಾ ಸರಕು ಸಾಗಣೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿರುವುದರಿಂದ ಗೋವಾ ರಾಜ್ಯಕ್ಕೂ ಕೊಂಚಮಟ್ಟಿಗೆ ಬಂದ್‌ ಬಿಸಿ ಮುಟ್ಟಲಿದೆ.

Write A Comment