ಕರ್ನಾಟಕ

15 ದಿನದಲ್ಲಿ ಗುಂಡಿ ಮುಕ್ತವಾಗಲಿವೆ ಬೆಂಗಳೂರಿನ ರಸ್ತೆಗಳು

Pinterest LinkedIn Tumblr

bbmpಬೆಂಗಳೂರು, ಸೆ.23-ನಗರದ ಪ್ರಮುಖ ರಸ್ತೆಗಳನ್ನು ಹದಿನೈದು ದಿನಗಳೊಳಗೆ ಗುಂಡಿ ಮುಕ್ತ ಮಾಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಕುಮಾರ ಜಿ. ನಾಯಕ್ ಇಂದಿಲ್ಲಿ ತಿಳಿಸಿದರು. ಪಾಲಿಕೆಗೆ ತೆರಿಗೆ ಪಾವತಿಸುತ್ತಿರುವ ಸಾರ್ವಜನಿಕ ರಿಗೆ  ಗುಂಡಿ ಮುಕ್ತ ರಸ್ತೆ ನಿರ್ಮಿಸಬೇಕು ಎಂದು ಬೆಂಗಳೂರು ಸಿಟಿಜನ್ ಫೋರಂ ಸದಸ್ಯರು ಸಲ್ಲಿಸಿದ ಮನವಿಯನ್ನು ಸ್ವೀಕರಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯ ಉಸ್ತುವಾರಿ ಯನ್ನು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಮತ್ತು ಮೇಯರ್ ಮಂಜುನಾಥರೆಡ್ಡಿ ಅವರೇ ವಹಿಸಿ ಕೊಂಡಿದ್ದಾರೆ. ಎಲ್ಲಾ ಎಂಟು ವಲಯಗಳಲ್ಲಿ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯನ್ನು ಶೀಘ್ರದಲ್ಲಿ ಕೈಗೆತ್ತಿ ಕೊಳ್ಳಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.

ಇದಕ್ಕಾಗಿ ಪ್ರತ್ಯೇಕ ಅಧಿಕಾರಿಗಳ ತಂಡ ರಚಿಸಿದ್ದೇವೆ. ಈಗಾಗಲೇ ಅಧಿಕಾರಿಗಳು ಯಾವ, ಯಾವ ರಸ್ತೆಗಳು ಗುಂಡಿ ಬಿದ್ದಿವೆ ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ. ಅತ್ಯಾಧುನಿಕ ಪೈತಾನ್ ಯಂತ್ರಗಳನ್ನು ಬಳಸಿ ಗುಂಡಿ ಮುಚ್ಚುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಹೇಳಿದರು.

ಕೆಲವು ರಸ್ತೆಗಳನ್ನು 2-3 ವರ್ಷ ಗುತ್ತಿಗೆದಾರರೇ ನಿರ್ವಹಿಸಬೇಕು. ಅಂತಹ ರಸ್ತೆಗಳಲ್ಲಿ ಬಿದ್ದ ಗುಂಡಿಗಳನ್ನು ಅವರೇ ಮುಚ್ಚಬೇಕೆಂದು ಗುತ್ತಿಗೆ ದಾರರ ಸಭೆ ಕರೆದು ಸೂಚಿಸಲಾಗಿದೆ. ಯಾವ ರಸ್ತೆಗಳು ಗುತ್ತಿಗೆದಾರರ ವ್ಯಾಪ್ತಿಗೆ ಬರುವುದಿಲ್ಲವೋ ಅವುಗಳಲ್ಲಿ ಪಾಲಿಕೆ ಸಿಬ್ಬಂದಿ ಗುಂಡಿ ಮುಚ್ಚುತ್ತಾರೆ ಎಂದು ತಿಳಿಸಿದರು. ನಗರದ ಪ್ರಮುಖ ರಸ್ತೆಗಳಲ್ಲಿನ ಗುಂಡಿಗಳನ್ನು ಇನ್ನು 15 ದಿನದಲ್ಲಿ ಮುಚ್ಚುತ್ತೇವೆ. ಉಳಿದ ರಸ್ತೆಗಳನ್ನು ಕಾಲಮಿತಿಯೊಳಗೆ ಗುಂಡಿ ಮುಕ್ತ ಮಾಡುತ್ತೇವೆ ಎಂದು ಕುಮಾರ್ ಜಿ. ನಾಯಕ್ ತಿಳಿಸಿದರು. ಮನವಿ: ರಸ್ತೆಗುಂಡಿಗಳಿಂದಾಗಿ ಬಹಳಷ್ಟು ಅಪಘಾತಗಳು ನಡೆಯುತ್ತಿದೆ. ಗುಂಡಿ ಮುಚ್ಚುವ ಕಾರ್ಯ ಶೀಘ್ರ ಪ್ರಾರಂಭಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಇದೇ ವೇಳೆ ಬೆಂಗಳೂರು ಸಿಟಿಜನ್ ಫೋರಂ ಮುಖ್ಯಸ್ಥ  ಕುಮಾರ್ ಜಾಗೀರ್‌ದಾರ್ ತಿಳಿಸಿದರು.

Write A Comment