ಕರ್ನಾಟಕ

ಕಾಂಗ್ರೆಸ್‌, ಬಿಜೆಪಿ ಕಾರ್ಯಕರ್ತರ ಬಂಧನ– ಬಿಡುಗಡೆ: ನಿಷೇಧಾಜ್ಞೆ ನಡುವೆ ಕಾರ್ಯಕರ್ತರ ಪ್ರತಿಭಟನೆ

Pinterest LinkedIn Tumblr

palikeಬೆಂಗಳೂರು: ಬಿಬಿಎಂಪಿ ಪ್ರಧಾನ ಕಚೇರಿ ಸುತ್ತಮುತ್ತ ನಿಷೇಧಾಜ್ಞೆ ಇದ್ದರೂ ಪ್ರತಿಭಟನೆಗೆ ಮುಂದಾದ ನೂರಕ್ಕೂ ಹೆಚ್ಚು ಕಾಂಗ್ರೆಸ್‌– ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು, ಅವರನ್ನು ಬಿಎಂಟಿಸಿ ಬಸ್‌ಗಳಲ್ಲಿ ಆಡುಗೋಡಿಯ ಸಿಎಆರ್‌ ಮೈದಾನಕ್ಕೆ ಕರೆ
ದೊಯ್ದರು. ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮುಚ್ಚಳಿಕೆ ಬರೆಸಿ ಅವರನ್ನು ಬಿಟ್ಟು ಕಳುಹಿಸಿದರು.

‘ಜನಪ್ರತಿನಿಧಿಗಳ ಮತದಾನದ ಹಕ್ಕು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿರುವ ಬಿಜೆಪಿಯ ಶಾಸಕರು ಮತ್ತು ಸಂಸದರಿಗೆ ಮತದಾನ ಮಾಡಲು ನೈತಿಕ ಹಕ್ಕಿಲ್ಲ. ಹೀಗಾಗಿ ಅವರನ್ನು ಹೊರಗೆ ಕಳುಹಿಸಬೇಕು’ ಎಂದು ಕೆಪಿಸಿಸಿ ಕಾನೂನು ಘಟಕ ಅಧ್ಯಕ್ಷ ಸಿ.ಎಂ.ಧನಂಜಯ್ ಅವರ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಕಾರ್ಯಕರ್ತರು ಮುಖ್ಯ ಪ್ರವೇಶ ದ್ವಾರದ ಬಳಿ ಘೋಷಣೆ ಕೂಗಿದರು.

ಮತ್ತೊಂದೆಡೆ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಯನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪುರಭವನದ ಎದುರು ಪ್ರತಿಭಟನೆಗೆ ಮುಂದಾದರು. ಆದರೆ, ಪೊಲೀಸರು ಇದಕ್ಕೆ ಅವಕಾಶ ನೀಡಲಿಲ್ಲ. ಮೋರ್ಚಾದ ಅಧ್ಯಕ್ಷ  ಪಿ.ಮುನಿರಾಜು ಗೌಡ, ಬಿಜೆಪಿ ಕಾರ್ಯಕರ್ತರಾದ ಹಾಸ್ಯ ನಟ ಬುಲೆಟ್ ಪ್ರಕಾಶ್ ಸೇರಿದಂತೆ 80ಕ್ಕೂ ಹೆಚ್ಚು ಮಂದಿಯನ್ನು ಬಸ್‌ಗಳಲ್ಲಿ ತುಂಬಿಕೊಂಡು ಸಿಎಆರ್‌ ಮೈದಾನಕ್ಕೆ ಕರೆದೊಯ್ದರು.

ಕುತೂಹಲದ ಕೇಂದ್ರ: ಪಾಲಿಕೆ ಕೇಂದ್ರ ಕಚೇರಿ ಸುತ್ತ 500 ಮೀಟರ್ ನಿಷೇಧಾಜ್ಞೆ ವಿಧಿಸಿದ್ದ ಪೊಲೀಸರು, ಪಾಸ್ ಇದ್ದವರಿಗೆ ಮಾತ್ರ ಒಳ ಬಿಡುತ್ತಿದ್ದರು. ‘ಮೇಯರ್, ಉಪಮೇಯರ್ ಯಾರಾಗಬಹುದು? ಆಯ್ಕೆ ಪ್ರಕ್ರಿಯೆ ಯಾವಾಗ  ಮುಗಿಯುತ್ತದೆ?’ ಎಂಬ ಹತ್ತಾರು ಪ್ರಶ್ನೆಗಳೊಂದಿಗೆ ಸಾರ್ವಜನಿಕರು ಬೆಳಿಗ್ಗೆ 10 ಗಂಟೆಯಿಂದಲೇ ಪಾಲಿಕೆ ಆವರಣದ ಹೊರಭಾಗದಲ್ಲಿ ಕಾಯುತ್ತಿದ್ದರು.

ಈ ಎಲ್ಲ ಬೆಳವಣಿಗೆಗಳಿಂದ ಪಾಲಿಕೆ ಪ್ರಧಾನ ಕಚೇರಿಯು ದಿನವಿಡೀ ಕುತೂಹಲದ ಕೇಂದ್ರವಾಯಿತು.

ಬಿಗಿ ಬಂದೋಬಸ್ತ್‌: ಬಿಬಿಎಂಪಿ ಮೇಯರ್ ಮತ್ತು ಉಪಮೇಯರ್ ಆಯ್ಕೆ ಪ್ರಕ್ರಿಯೆಯನ್ನು ಶಾಂತಿಯುತ ವಾಗಿ ಪೂರ್ಣಗೊಳಿಸಲು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ, ಇಬ್ಬರು ಡಿಸಿಪಿ, 5 ಎಸಿಪಿ, 20 ಇನ್‌ಸ್ಪೆಕ್ಟರ್, 80 ಎಸ್‌ಐ/ ಎಎಸ್‌ಐ, 200 ಕಾನ್‌ಸ್ಟೆಬಲ್‌, ಆರು ಕೆಎಸ್‌ಆರ್‌ಪಿ ತುಕಡಿಗಳು ಭದ್ರತೆ ಒದಗಿಸಿದವು.

‘ಬಿಡಿ ಮೇಡಂ. ಮೇಯರ್‌ ಆಗ್ತೀನಿ’
ಮೇಯರ್‌ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಬೆಳಿಗ್ಗೆ ಪಾಲಿಕೆಯ ಕೇಂದ್ರ ಕಚೇರಿಗೆ ಬಂದ ಬಿ.ಎನ್‌.ಮಂಜುನಾಥ್ ರೆಡ್ಡಿ,  ಪ್ರವೇಶ ದ್ವಾರದಲ್ಲಿ ಪಾಸ್ ಕೇಳಿದ ಎಸಿಪಿ ಶೋಭಾರಾಣಿ ಅವರಿಗೆ ‘ಬಿಡಿ ಮೇಡಂ. ಮೇಯರ್‌ ಆಗ್ತೀನಿ’ ಎಂದಿದ್ದರು.

ಬೆಳಿಗ್ಗೆ 10 ಗಂಟೆ ಸುಮಾರಿಗೆ ಶೋಭಾರಾಣಿ ಅವರು ಪ್ರವೇಶ ದ್ವಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಂಜುನಾಥ್ ರೆಡ್ಡಿ ಅವರನ್ನು ತಡೆದು ಪಾಸ್ ಕೇಳಿದಾಗ ‘ಬಿಡಿ ಮೇಡಂ. ನಾನು ಮೇಯರ್‌ ಆಗ್ತೀನಿ’ ಎಂದು ನಗುಮೊಗದಿಂದಲೇ ಉತ್ತರ ಕೊಟ್ಟಿದ್ದ ಅವರು, ನಂತರ ಪಾಸ್ ತೋರಿಸಿ ಒಳ  ಹೋಗಿದ್ದರು. ಕೊನೆಗೆ ಹೇಳಿದಂತೆಯೇ ಮೇಯರ್ ಆದರು.

Write A Comment