ಕರ್ನಾಟಕ

ಎಚ್‌ಎಸ್‌ಆರ್‌ ಬಡಾವಣೆ: 20ರಂದು ವಾಹನಮುಕ್ತ ದಿನ: ರಾಮಲಿಂಗಾ ರೆಡ್ಡಿ, ಸಾರಿಗೆ ಸಚಿವ

Pinterest LinkedIn Tumblr

ramalingaಬೆಂಗಳೂರು: ನಗರದಲ್ಲಿ ವಾಹನ ದಟ್ಟಣೆ ಹಾಗೂ ಮಾಲಿನ್ಯ ಪ್ರಮಾಣ ಕಡಿಮೆ ಮಾಡಲು ನಗರ ಭೂಸಾರಿಗೆ ನಿರ್ದೇಶನಾಲಯ, ಬಿಎಂಟಿಸಿ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಇದೇ 20ರಂದು ಬೆಳಿಗ್ಗೆ 6ರಿಂದ ರಾತ್ರಿ 9ರ ವರೆಗೆ ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ‘ವಾಹನ ಮುಕ್ತ ದಿನ (ಓಪನ್‌ ಸ್ಟ್ರೀಟ್ಸ್‌)’ ಆಯೋಜಿಸಲಾಗಿದೆ.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನಗರದಲ್ಲಿ ವಾಹನ ದಟ್ಟಣೆ ದಿನೇ ದಿನೇ ಹೆಚ್ಚುತ್ತಿದೆ. ನಗರದಲ್ಲಿ 54 ಲಕ್ಷ ವಾಹನಗಳು ಇವೆ ಎಂದು ಅಂದಾಜಿಸಲಾಗಿದೆ. ಮಾಲಿನ್ಯ ವಿಪರೀತವಾಗಿದೆ. ನಗರದಲ್ಲಿ ನಡಿಗೆ, ಸೈಕಲ್‌ ಬಳಕೆ ಹಾಗೂ ಸಾರ್ವಜನಿಕ ಸಾರಿಗೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಕಾರ್ಯಕ್ರಮ ಸಂಘಟಿಸಲಾಗಿದೆ’ ಎಂದರು.

ಲಂಡನ್, ಕೇಪ್‌ಟೌನ್‌, ಮುಂಬೈ, ಹೈದರಾಬಾದ್‌ ಸೇರಿದಂತೆ ವಿವಿಧ ಕಡೆಗಳಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಇದನ್ನು ಆಯೋಜಿಸಲಾಗುತ್ತಿದೆ ಎಂದರು.

ಎಚ್‌ಎಸ್ಆರ್‌ ಬಡಾವಣೆಯಲ್ಲಿ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಸೇರಿದಂತೆ ವಿವಿಧ ಸಂಘಟನೆಗಳು ಸಕ್ರಿಯವಾಗಿವೆ. ಹೀಗಾಗಿ ಬಡಾವಣೆಯನ್ನು ವಾಹನ ಮುಕ್ತ ದಿನಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.  ಮುಂದಿನ ದಿನಗಳಲ್ಲಿ ಉಳಿದ ಬಡಾವಣೆಗಳಲ್ಲೂ ಹಮ್ಮಿ ಕೊಳ್ಳಲಾಗುವುದು ಎಂದರು.

ಬೆಳಿಗ್ಗೆ 6ರಿಂದ ರಾತ್ರಿ 9ರ ವರೆಗೆ ಬಡಾವಣೆಯ ಎಲ್ಲ 7 ಸೆಕ್ಟರ್‌ಗಳಲ್ಲಿ ಸಾರ್ವಜನಿಕ ಸಾರಿಗೆಗಳನ್ನು ಹೊರತುಪಡಿಸಿ ಖಾಸಗಿ ವಾಹನಗಳ (ದ್ವಿಚಕ್ರವಾಹನ, ಆಟೊ, ಟ್ಯಾಕ್ಸಿ ಮತ್ತಿತರ ವಾಹನಗಳು) ಸಂಚಾರಕ್ಕೆ ನಿರ್ಬಂಧ ಇರಲಿದೆ. ತುರ್ತು ವಾಹನಗಳಾದ ಅಂಬುಲೆನ್ಸ್, ಅಗ್ನಿಶಾಮಕ ವಾಹನ, ನೀರಿನ ಟ್ಯಾಂಕರ್‌ಗಳು, ಕಸದ ವಾಹನಗಳು, ಪೊಲೀಸ್‌ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗುವುದು ಎಂದರು.

ಹಾಲು ಹಾಗೂ ದಿನಪತ್ರಿಕೆಗಳನ್ನು ಬೆಳಿಗ್ಗೆ 6 ಗಂಟೆಯೊಳಗೆ ಪೂರೈಕೆ ಮಾಡಲು ಸೂಚಿಸಲಾಗುವುದು. ಇಲ್ಲದಿದ್ದರೆ ಬಸ್‌ ಅಥವಾ ಸೈಕಲ್‌ ನೆರವಿನಿಂದ ಪೂರೈಕೆ ಮಾಡಬಹುದು ಎಂದರು.

ಬಡಾವಣೆಯಲ್ಲಿ ಹೆಚ್ಚುವರಿ ಬಸ್‌ಗಳ  ಸೇವೆ ಒದಗಿಸಲಾಗುವುದು. ಬಡಾವಣೆಯಲ್ಲಿ ಪ್ರತಿ 10 ನಿಮಿಷಕ್ಕೊಂದು ಬಸ್‌ ಇರಲಿದೆ. ಬಡಾವಣೆಯ ಯಾವುದೇ ಮೂಲೆಗೂ ಸಂಚರಿಸಿದರೆ ಪ್ರಯಾಣ ದರ ₹5 ಇರಲಿದೆ. ದೈನಂದಿನ ಬಸ್ ಪಾಸ್‌ ದರ (₹50) ಕಡಿಮೆ ಇರಲಿದೆ. ಬಡಾವಣೆಯಲ್ಲಿ ಬಸ್‌ ಪಾಸ್‌ ಪಡೆದು ನಗರದ ಯಾವುದೇ ಮೂಲೆಗೂ ಸಂಚರಿಸಬಹುದು ಎಂದು ಅವರು ತಿಳಿಸಿದರು.ಬಡಾವಣೆಯಿಂದ ಮೆಜೆಸ್ಟಿಕ್‌, ಶಿವಾಜಿನಗರ, ಕೆ.ಆರ್‌. ಮಾರುಕಟ್ಟೆಗೆ ಹೆಚ್ಚುವರಿ ಬಸ್‌ಗಳನ್ನು ಒದಗಿಸಲಾಗುವುದು.

ವಿಮಾನ ನಿಲ್ದಾಣಕ್ಕೂ ಸಂಚರಿಸಬಹುದು. ಈ ವೇಳೆ ಎಂದಿನಂತೆ ಸೈಕಲ್ ದಿನಾಚರಣೆ ಆಚರಿಸಲಾಗುವುದು ಎಂದರು. ಬಡಾವಣೆಯಲ್ಲಿ ಉದ್ಯಮ, ಹೋಟೆಲ್‌, ರೆಸ್ಟೋರೆಂಟ್‌ಗಳು, ಎಟಿಎಂಗಳು, ಮಾರುಕಟ್ಟೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಸಭೆ ಸಮಾರಂಭಗಳನ್ನೂ ನಡೆಸಬಹುದು ಎಂದು ಅವರು ತಿಳಿಸಿದರು.

ವಿವಿಧ ವಲಯಗಳಲ್ಲಿ ಸ್ಕೇಟಿಂಗ್‌, ಹುಲಾ– ಪುಫ್‌, ಕತೆ ಹೇಳುವುದು, ಮಣ್ಣಿನ ಚಿತ್ರಗಳು, ಮಡಕೆ ಮಾಡುವುದು, ಸಂಗೀತ, ಬೀದಿ ನಾಟಕ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ನಡೆಸಲಾಗುವುದು ಎಂದರು.ಭೂಸಾರಿಗೆ ನಿರ್ದೇಶನಾಲಯದ ನಿರ್ದೇಶಕಿ ಮಂಜುಳಾ ಮಾತನಾಡಿ, ಬಡಾವಣೆಯ ನಾಲ್ಕು ಸ್ಥಳಗಳಲ್ಲಿ ಉಚಿತವಾಗಿ 100 ಸೈಕಲ್‌ಗಳನ್ನು ನೀಡಲಾಗುವುದು. ಗುರುತಿನ ಚೀಟಿ, ಪಾಸ್‌ಪೋರ್ಟ್, ಆಧಾರ್‌ ಕಾರ್ಡ್, ವಾಹನ ಚಾಲನಾ ಪರವಾನಗಿ, ಪ್ಯಾನ್‌ ಕಾರ್ಡ್, ಮತದಾನದ ಗುರುತಿನ ಚೀಟಿ ನೀಡಿ ಸೈಕಲ್‌ ಪಡೆಯಬಹುದು ಎಂದರು.

ಹೆಚ್ಚಿನ ಮಾಹಿತಿಗೆ: www.openstreetsbengalure.wordpress.com

***
ದಿನಾಚರಣೆಯ ಮೂಲಕ ಮಾಲಿನ್ಯ ಪ್ರಮಾಣವನ್ನು ಶೇ 50ರಷ್ಟು ಕಡಿಮೆ ಮಾಡುವ ಗುರಿ ಇದೆ
-ರಾಮಲಿಂಗಾ ರೆಡ್ಡಿ,
ಸಾರಿಗೆ ಸಚಿವ

Write A Comment