ಕರ್ನಾಟಕ

ಕಲಬುರ್ಗಿ ಬಳಿ ಹಳಿ ತಪ್ಪಿದ ರೈಲು; ತುರಂತೊ ದುರಂತ: ಇಬ್ಬರ ಸಾವು

Pinterest LinkedIn Tumblr

trainಕಲಬುರ್ಗಿ: ಸಿಕಂದರಾಬಾದ್‌–ಮುಂಬೈ ತುರಂತೊ ಎಕ್ಸ್‌ಪ್ರೆಸ್‌ ರೈಲು ಹಳಿ ತಪ್ಪಿ ಇಬ್ಬರು ಮೃತಪಟ್ಟು, ಎಂಟು ಮಂದಿ ಗಾಯಗೊಂಡಿರುವ ಘಟನೆ ಇಲ್ಲಿಗೆ 15 ಕಿ.ಮೀ ದೂರದ ಮರತೂರು  ನಿಲ್ದಾಣದಲ್ಲಿ ಶನಿವಾರ ಸಂಭವಿಸಿದೆ.

ಶುಕ್ರವಾರ ರಾತ್ರಿ 11 ಗಂಟೆಗೆ ಸಿಕಂದರಾಬಾದ್‌ನಿಂದ ಹೊರಟ ರೈಲು  ಶನಿವಾರ ಬೆಳಗಿನ 2.30ರ ಸುಮಾರಿಗೆ ಮರತೂರು ನಿಲ್ದಾಣ ಪ್ರವೇಶಿಸುತ್ತಿದ್ದಂತೆ ಒಂಬತ್ತು ಬೋಗಿಗಳು ಹಳಿತಪ್ಪಿದವು. ಬಿ 8 ಬೋಗಿಯಲ್ಲಿದ್ದ ಹೈದರಾಬಾದ್ ಮೂಲದ ಪುಷ್ಪಲತಾ (28), ಜ್ಯೋತಿ (46) ಸ್ಥಳದಲ್ಲೇ ಮೃತಪಟ್ಟರು.

ಅಪಘಾತಕ್ಕೆ ಏನು ಕಾರಣ ಎಂಬುದು ತನಿಖೆಯ ಬಳಿಕ ಗೊತ್ತಾಗಲಿದೆ. ಅಲ್ಲಿಯವರೆಗೂ ಏನನ್ನೂ ಹೇಳಲಾಗದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದರು. ಆದರೆ, ‘ಹಳಿ ತುಂಡಾಗಿತ್ತು ಮತ್ತು ಈ ಭಾಗದಲ್ಲಿ ರೈಲು ಹಳಿಗಳ  ದುರಸ್ತಿ ನಡೆಯುತ್ತಿತ್ತು.  ಅದೇ ದುರಂತಕ್ಕೆ  ಕಾರಣ ಇರಬಹುದು’ ಎಂಬುದು ಸ್ಥಳೀಯರ ಅನುಮಾನ. ಬೋಗಿಗಳು ಉರುಳಿದ ರಭಸಕ್ಕೆ ಹಳಿಗಳು ಕಿತ್ತು ಹೋಗಿವೆ. ವಿದ್ಯುತ್ ಚಾಲಿತ ರೈಲುಗಳಿಗೆ ಸಂಪರ್ಕ ಕಲ್ಪಿಸುವ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.

ಗಾಯಾಳುಗಳ ಪೈಕಿ ಅಬ್ದುಲ್ ಅಶ್ರಫ್ ಅವರ ಬಲಗಾಲು ಪೂರ್ತಿ ತುಂಡಾಗಿದ್ದು,   ಸ್ಥಿತಿ ಗಂಭೀರವಾಗಿದೆ. ರಾಜೀವ್‌ ರಂಜನ್ ರಾಯ್ ಎಂಬುವವರ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅಶ್ರಫ್ ಅವರು ಮುಂಬೈನ ನೌಕಾ ಪಡೆಯಲ್ಲಿ ಟ್ರೇನಿ ಅಧಿಕಾರಿಯಾಗಿ ತರಬೇತಿ ಪಡೆಯುತ್ತಿದ್ದರು.

‘ಹೈದರಾಬಾದ್‌ನಿಂದ ಮುಂಬೈಗೆ ತೆರಳುತ್ತಿದ್ದೆ. ನಿದ್ರೆಯಲ್ಲಿದ್ದ ನನಗೆ ಏಕಾಏಕಿ ಜೋರಾಗಿ ಶಬ್ದ ಕೇಳಿಸಿತು. ಕೆಳಗಿನ ಸೀಟ್‌ನಲ್ಲಿ ಮಲಗಿದ್ದ ನಾನು ಗಾಬರಿಗೊಂಡೆ. ಆ ಬಳಿಕ ಏನಾಯಿತೋ ಗೊತ್ತಾಗಲಿಲ್ಲ’ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಶ್ರಫ್‌ ‘ಪ್ರಜಾವಾಣಿ’ಗೆ  ಪ್ರತಿಕ್ರಿಯಿಸಿದರು.

ಸಂಚಾರ ನಿರಾಳ: ರೈಲು ಹಳಿ ತಪ್ಪಿದರೂ ಬೇರೆ ರೈಲುಗಳ ಸಂಚಾರಕ್ಕೆ ಯಾವುದೇ ರೀತಿಯ ತೊಂದರೆ ಆಗಲಿಲ್ಲ. ನಿಲ್ದಾಣದಲ್ಲೇ ಈ ಘಟನೆ ಸಂಭವಿಸಿದ್ದರಿಂದ ಮತ್ತೊಂದು ಹಳಿಯಲ್ಲಿ ರೈಲುಗಳು ಸಂಚರಿಸಿದವು. ಪ್ರಯಾಣಿಕರನ್ನು ಮರತೂರಿನಿಂದ ಕಲಬುರ್ಗಿಗೆ ಕರೆತರಲು ಜಿಲ್ಲಾಡಳಿತ ಈಶಾನ್ಯ ಸಾರಿಗೆ ಸಂಸ್ಥೆಯ 40 ಬಸ್‌ಗಳನ್ನು ಒದಗಿಸಿತು.

ಪ್ರವಾಸ ತಂದ ಕುತ್ತು!
ಮೃತ ಪುಷ್ಪಲತಾ ಅವರ ಮದುವೆ ಈಚೆಗಷ್ಟೇ ಆಗಿದ್ದು, ಅವರು ಹೈದರಾಬಾದ್‌ನ ಖಾಸಗಿ ಕಂಪೆನಿಯೊಂದರಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿ ಕೆಲಸ ಮಾಡುತ್ತಿದ್ದರು. ಕಂಪೆನಿಯು ಉಚಿತ ಪ್ರವಾಸ ಆಯೋಜಿಸಿದ್ದರಿಂದ ಅವರು ನಾಲ್ಕು ದಿನ ಪುಣೆಗೆ ತೆರಳುತ್ತಿದ್ದರು.

Write A Comment