ಕರ್ನಾಟಕ

ನಾಲ್ಕು ಕೋಟಿ ರೂ.ಗೆ ದಸರಾ ಸೀಮಿತ: 8 ಉಪಸಮಿತಿ; ಇನ್ನೂ ತೀರ್ಮಾನವಾಗದ ಉದ್ಘಾಟಕರು

Pinterest LinkedIn Tumblr

mysore_______ಮೈಸೂರು, ಸೆ.12: ವಿಶ್ವವಿಖ್ಯಾತ ದಸರಾ ಉತ್ಸವವನ್ನು ಈ ಬಾರಿ ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಉಪ-ಸಮಿತಿಗಳನ್ನು ಎಂಟಕ್ಕೆ ಸೀಮಿತಗೊಳಿಸಿ, ದಸರಾ ವೆಚ್ಚವನ್ನು 4 ಕೋಟಿ ರೂ.ಗಳಿಗೆ ಸೀಮಿತಗೊಳಿಸಲಾಗಿದೆ.
ಈ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್, ದಸರಾ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ವಿವರಿಸಿದರು.
ಸರಳ ದಸರೆಯ ಹಿನ್ನೆಲೆಯಲ್ಲಿ ಉಪ ಸಮಿತಿಗಳನ್ನು ಎಂಟಕ್ಕೆ ಇಳಿಸಲಾಗಿದ್ದು, ಸ್ವಾಗತ ಮತ್ತು ಆಮಂತ್ರಣ, ಮೆರವಣಿಗೆ, ಕ್ರೀಡೆ, ರೈತ ದಸರಾ, ಸಾಂಸ್ಕೃತಿಕ ದಸರಾ, ಲಲಿತಕಲೆ ಮತ್ತು ಕರಕುಶಲ ದಸರಾ, ದೀಪಾಲಂಕಾರ ಮತ್ತು ಪ್ರಚಾರ ಉಪ ಸಮಿತಿಗಳನ್ನು ರಚಿಸಲು ನಿರ್ಧರಿಸಲಾಗಿದ್ದು, ಇದಕ್ಕೆ ಕಾರ್ಯಕಾರಿಣಿ ಸಮಿತಿಯ ಸದಸ್ಯರೇ ಅಧ್ಯಕ್ಷರಾಗಿರುತ್ತಾರೆ ಎಂದು ತಿಳಿಸಿದರು.

ಅ.14ರಂದು ಚಾಮುಂಡಿ ಬೆಟ್ಟದಲ್ಲಿ ನಾಡದೇವಿ ಶ್ರೀ ಚಾಮುಂಡೇಶ್ವರಿ ಅಮ್ಮನವರಿಗೆ ಪೂಜೆ ಸಲ್ಲಿಸುವ ಮೂಲಕ ದಸರೆಗೆ ಚಾಲನೆ ನೀಡಲಾಗುತ್ತಿದ್ದು, ಉದ್ಘಾಟಕರನ್ನು ಇನ್ನೆರಡು ಸಭೆಗಳ ಬಳಿಕ ಅಂತಿಮಗೊಳಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಅ.14ರಂದು ಸಂಜೆ ಅರಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ದೊರಕಲಿದ್ದು, ಎಂಟು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲಾಗುವುದು. ಜಿಲ್ಲಾ ಮಟ್ಟದಲ್ಲಿ ದಸರಾ ಕ್ರೀಡಾಕೂಟವನ್ನೂ ಎರಡು ದಿನಕ್ಕೆ ಸೀಮಿತಗೊಳಿಸಲಾಗಿದೆ. ಮ್ಯಾರಥಾನ್ ಓಟಕ್ಕೆ ಅವಕಾಶವಿದೆ. ಎಂಟು ದಿನಗಳ ಕಾಲ ನಾಡ ಕುಸ್ತಿ ಯನ್ನೂ ಏರ್ಪಡಿಸಲಾಗಿದೆ.
ಇದು ರೈತರ ದಸ್ಟರವಾದ್ದರಿಂದ ರೈತರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ವಸ್ತು ಪ್ರದರ್ಶನ ಏರ್ಪಡಿಸಲಾಗಿದ್ದು, ದಸರಾ ವಸ್ತು ಪ್ರದರ್ಶನದಲ್ಲಿ ನೀರು ಬಳಕೆ, ಕಡಿಮೆ ವೆಚ್ಚದಲ್ಲಿ ಕೃಷಿ ಚಟುವಟಿಕೆಗಳ ಕುರಿತು ಜಾಗೃತಿ ಮೂಡಿಸಲಾಗುವುದು. ಎಲ್ಲ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರು ಮಾತನಾಡಲಿದ್ದು, ಇದನ್ನು ‘ಸಿಡಿ’ ರೂಪಕ್ಕೆ ತರಲಾಗುವುದು ಎಂದು ತಿಳಿಸಿದರು.

ದಸರೆಯ ಕಡೆಯ ದಿನ ವಿಜಯದಶಮಿ ಮೆರವಣಿಗೆಗೆ ಮೈಸೂರು ಜಿಲ್ಲೆಯ 20 ಇಲಾಖೆಗಳಿಗೆ ಸ್ತಬ್ಧಚಿತ್ರ ನಿರ್ಮಾಣ ಮಾಡಲು ಸೂಚಿಸಲಾಗಿದ್ದು, ವಿದ್ಯುತ್ ಅಲಂಕಾರವನ್ನು ರಾಜಪಥಕ್ಕೆ ಸೀಮಿತಗೊಳಿಸಲಾಗಿದೆ. ಸರಕಾರಿ ಕಟ್ಟಡಗಳಿಗೆ ಮಾಡಲಾ ಗುತ್ತಿದ್ದ ದೀಪಾಲಂಕಾರವನ್ನು ರದ್ದು ಪಡಿಸಲಾಗಿದೆ ಎಂದು ತಿಳಿಸಿದರು.

ಫಲಪುಷ್ಪಪ್ರದರ್ಶನಕ್ಕೆ ಸೋಲಾರ್ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಎರಡು ಕಾರ್ಯಕಾರಿಣಿ ಸಭೆ ನಡೆಯಬೇಕಾಗಿದ್ದು, ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ರಾಜ್ಯದಲ್ಲಿ ತಲೆದೋರಿರುವ ಭೀಕರ ಬರ ಮತ್ತು ರೈತರ ಆತ್ಮಹತ್ಯೆ ಹಿನ್ನೆಲೆಯಲ್ಲಿ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಲು ಅನುಮತಿ ಕೋರಲಾಗಿದ್ದು, ಸೆ.16ಕ್ಕೆ ದಿನಾಂಕ ನಿಗದಿಯಾಗಿದೆ. ಈಗಾಗಲೇ ಕೇಂದ್ರ ಬರ ಅಧ್ಯಯ ತಂಡ ರಾಜ್ಯದ 14 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಮಾಹಿತಿ ಪಡೆದಿದೆ ಎಂದು ಸಚಿವ ಶ್ರೀನಿವಾಸಪ್ರಸಾದ್ ತಿಳಿಸಿದರು. ಸಭೆಯಲ್ಲಿ ಸಚಿವ ಎಚ್.ಎಸ್.ಮಹಾದೇವ ಪ್ರಸಾದ್, ಶಾಸಕರಾದ ತನ್ವೀರ್ ಸೇಠ್, ಸೋಮ ಶೇಖರ್, ಮುಡಾ ಅಧ್ಯಕ್ಷ ಕೆ.ಆರ್.ಮೋಹನ್ ಕುಮಾರ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ರಿಹಾನ ಬಾನು, ಜಿಲ್ಲಾಧಿಕಾರಿ ಸಿ.ಶಿಖಾ, ನಗರಪಾಲಿಕೆ ಆಯುಕ್ತ ಸಿ.ಜೆ. ಬೆಟ್ಸೂರ್ ಮಠ್ ಮೊದಲಾವದರು ಉಪಸ್ಥಿತರಿದ್ದರು.

ದಸರಾ ಹೈಲೈಟ್ಸ್…
ಈ ಬಾರಿ ರೈತ ದಸರಾ.
8 ಉಪಸಮಿತಿ ರಚನೆ.
ಇನ್ನೆರಡು ಸಭೆ ಬಳಿಕ ಉದ್ಘಾಟಕರ ನೇಮಕ.
ಅ.14ರಂದು ದಸರಾಗೆ ಅಧಿಕೃತ ಚಾಲನೆ.
ಅಂದು ಸಂಜೆ 5ಕ್ಕೆ ಅರಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ.
ಸ್ಥಳೀಯ ಕಲಾವಿದರಿಗೆ ಮಾತ್ರ ಅವಕಾಶ.
ಪ್ರಗತಿಪರ ರೈತರಿಂದ ಸಂದೇಶ.
ಕಾರ್ಯಕ್ರಮವನ್ನು ಸಿಡಿ ರೂಪದಲ್ಲಿ ಹೊರತರಲು ತೀರ್ಮಾನ.
ವಿದ್ಯುತ್ ಅಲಂಕಾರ ರಾಜಪಥಕ್ಕೆ ಸೀಮಿತ.
20 ಇಲಾಖೆಗಳಿಂದ ಸ್ತಬ್ಧಚಿತ್ರ.
ಫಲಪುಷ್ಪಪ್ರದರ್ಶನಕ್ಕೆ ಸೋಲಾರ್ ವ್ಯವಸ್ಥೆ.

Write A Comment