ತುಮಕೂರು, ಸೆ.12: ವಿದ್ಯಾರ್ಥಿಗಳು ಪಡೆಯುವ ಶಿಕ್ಷಣದಿಂದ ದೇಶದ ಅಭಿವೃದ್ಧಿಗೆ ಅಮೂಲ್ಯ ಕೊಡುಗೆ ನೀಡಬೇಕೆಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ)ಯ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಕರೆ ನೀಡಿದ್ದಾರೆ.
ಸಿದ್ಧಾರ್ಥ ಮೆಡಿಕಲ್ ಕಾಲೇಜಿನ ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಜರಗಿದ ಸಿದ್ಧಾರ್ಥ ಅಕಾಡಮಿ ಆಫ್ ಹೈಯರ್ ಎಜುಕೇಶನ್‌ನ ನಾಲ್ಕನೆ ವರ್ಷದ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ನಮ್ಮ ಕಾಲದಲ್ಲಿನ ಶಿಕ್ಷಣಕ್ಕೂ ಈಗಿನ ಶಿಕ್ಷಣ ವ್ಯವಸ್ಥೆಗೂ ಮಹತ್ತರವಾದ ಬದಲಾವಣೆಯಾಗಿದೆೆ. ಈಗಿನಂತೆ ಅಂತರ್ಜಾಲ ಹಾಗೂ ತಂತ್ರಜ್ಞಾನದ ಸೌಲಭ್ಯಗಳು ಈ ಹಿಂದೆ ಇರಲಿಲ್ಲ. ವಿದ್ಯಾರ್ಥಿಗಳು ಎಲ್ಲ ರೀತಿಯ ಆಧುನಿಕ ಸಂಪರ್ಕ ಸಾಧನಗಳ ಸಹಾಯದಿಂದ ದಿನನಿತ್ಯ ಹೊಸ ವಿಷಯವನ್ನು ಕಲಿಯಬಹುದಾಗಿದೆ. ಈ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ವಿದ್ಯಾರ್ಥಿಗಳು ತಮ್ಮಲ್ಲಿನ ಪ್ರತಿಭೆಯನ್ನು ಸಮಾಜದ ಒಳಿತಿಗೆ ಉಪಯೋಗಿಸಬೇಕು ಎಂದು ಸಲಹೆ ನೀಡಿದರು.
ಡಾ.ವಿಕ್ರಮ ಸಾರಾಭಾಯಿ ಅವರ ದೂರದೃಷ್ಟಿಯ ಫಲವಾಗಿ ಪ್ರಾರಂಭವಾದ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಂದು ತನ್ನ ಮಹತ್ತರ ಸಾಧನೆಗಳ ಮೂಲಕ ಜಗತ್ತಿನ ಇತರೆ ರಾಷ್ಟ್ರಗಳು ಭಾರತದತ್ತ ತಿರುಗಿ ನೋಡುವಂತೆ ಮಾಡಿದೆ. ಇದು ಭಾರತೀಯರೆಲ್ಲರೂ ಹೆಮ್ಮೆಪಡಬೇಕಾದ ವಿಷಯವಾಗಿದೆ ಎಂದು ಈ ಸಂದರ್ಭದಲ್ಲಿ ನುಡಿದರು. ಸಿದ್ಧಾರ್ಥ ಉನ್ನತ ಶಿಕ್ಷಣ ಸಂಸ್ಥೆಯ ಕುಲಪತಿ ಡಾ.ಬಾಲಕೃಷ್ಣ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿ, ಸಂಸ್ಥೆ ನಡೆದು ಬಂದ ಹಾದಿ ಹಾಗೂ ಮೈಲಿಗಲ್ಲುಗಳ ಬಗ್ಗೆ ವಿವರಿಸಿದರು. ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಸುಸಜ್ಜಿತ ಹಾಗೂ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು ವೈದ್ಯ ಶಿಕ್ಷಣ, ದಂತವೈದ್ಯ ಶಿಕ್ಷಣ, ಎಂಜಿನಿಯರಿಂಗ್ ಶಿಕ್ಷಣ ಇತ್ಯಾದಿ ಎಲ್ಲ ಕ್ಷೇತ್ರಗಳಲ್ಲಿಯೂ ವೃತ್ತಿಗೆ ಸಜ್ಜಾಗುವಂತೆ ಸನ್ನದ್ಧರಾಗಿಸುವಂತೆ ಅನುಕೂಲ ಸೃಷ್ಟಿಸಲಾಗಿದೆ ಎಂದರು.
ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕುಲಾಧಿಪತಿ ಡಾ.ಜಿ. ಶಿವಪ್ರಸಾದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಮಾರುತಿ ಡಿ.ಮಾಲೆ, ಪ್ರಾಧ್ಯಾಪಕರಾದ ಡಾ.ಶ್ರೀನಿವಾಸಮೂರ್ತಿ, ಪ್ರೊ.ಕಾಶಿನಾಥ್, ಕುಲಸಚಿವ ಡಾ.ಎಂ.ಝಡ್ ಕುರಿಯನ್, ಪ್ರಾಂಶುಪಾಲ ಡಾ.ಎಂ.ಕೆ.ವೀರಯ್ಯ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಪದವಿ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ರ್ಯಾಂಕ್ ಪಡೆದ 35 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ವಿತರಿಸಲಾಯಿತು. ವೈದ್ಯಕೀಯ ವಿದ್ಯಾರ್ಥಿ ಯಶಸ್ವಿನಿ ಪ್ರಾರ್ಥಿಸಿದರು. ಕುಲಪತಿ ಡಾ.ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು.