ಕರ್ನಾಟಕ

ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಬಿಬಿಎಂಪಿ ಚುಕ್ಕಾಣಿ: ಮೇಯರ್ ಮಂಜುನಾಥ ರೆಡ್ಡಿ ಉಪಮೇಯರ್ ಹೇಮಲತಾ

Pinterest LinkedIn Tumblr

150911kpn93ಬೆಂಗಳೂರು, ಸೆ.11: ಬಿಬಿಎಂಪಿ ರಾಜ ಕೀಯ ಮೇಲಾಟಕ್ಕೆ ಶುಕ್ರವಾರ ತೆರೆ ಬಿದ್ದಿದೆ. ಮೇಯರ್ ಹಾಗೂ ಉಪಮೇಯರ್ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಎರಡೂ ಸ್ಥಾನಗಳು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಪಾಲಾಗಿವೆ. ಚುನಾವಣೆಯಲ್ಲಿ ಬಹು ಮತ ಪಡೆದ ಬಿಜೆಪಿಗೆ ಮುಖಭಂಗವಾಗಿದೆ.
ಬಿಬಿಎಂಪಿಯ 49ನೆ ಮೇಯರ್ ಆಗಿ ಕಾಂಗ್ರೆಸ್‌ನ ಮಂಜುನಾಥ್ ರೆಡ್ಡಿ ಹಾಗೂ 50ನೆ ಉಪಮೇಯರ್ ಆಗಿ ಜೆಡಿಎಸ್‌ನ ಹೇಮಾವತಿ ಗೋಪಾಲಯ್ಯ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ಕಳೆದ 10 ದಿನಗಳಿಂದ ಬಿಬಿಎಂಪಿ ಗದ್ದುಗೆಗಾಗಿ ನಡೆಯುತ್ತಿದ್ದ ಹಗ್ಗಜಗ್ಗಾಟದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟ ಗೆಲುವು ಸಾಧಿಸಿದೆ. ವಿವಾದ, ಕಚ್ಚಾಟ, ಕೆಸರೆರಚಾಟ, ಮಾಸ್ಟರ್ ಪ್ಲಾನ್, ಪ್ರತಿಭಟನೆ ಸೇರಿದಂತೆ ರಾಜಕೀಯ ಹೈಡ್ರಾಮಾಗಳಿಗೆ ತೆರೆಬಿದ್ದಿದೆ.
ಮೇಯರ್ ಚುನಾವಣೆಯಲ್ಲಿ ಬೆಂಗಳೂರು ನಗರ ವ್ಯಾಪ್ತಿಗೆ ಬರುವ ಶಾಸಕರು, ಸಂಸದರು, ವಿಧಾನ ಪರಿಷತ್ತಿನ ಸದಸ್ಯರು, ರಾಜ್ಯಸಭಾ ಸದಸ್ಯರು ಪಾಲ್ಗೊಂಡು ತಮ್ಮ ಪರವಾಗಿ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಪರ ಮತ ಚಲಾಯಿಸಿದರು. ಅಂಕಿ-ಸಂಖ್ಯೆಗಳ ಆಟದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಗೆಲುವು ಸಾಧಿಸಿದ್ದು, ಮೂರನೆ ಬಾರಿ ಕಾರ್ಪೊರೇಟರ್ ಆಗಿ ಆಯ್ಕೆಯಾಗಿರುವ ಮಂಜುನಾಥ್‌ರೆಡ್ಡಿ ಅವರು ನಗರದ ಪ್ರಥಮ ಪ್ರಜೆಯಾಗಿ ಆಯ್ಕೆಯಾದರು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 100 ಸ್ಥಾನಗಳನ್ನು ಪಡೆದರೂ ಪಾಲಿಕೆಯ ಚುಕ್ಕಾಣಿಯನ್ನು ಹಿಡಿಯುವಲ್ಲಿ ವಿಫಲವಾಗಿದೆ. ಬಿಜೆಪಿ ಪರವಾಗಿ ನಾಮಪತ್ರ ಸಲ್ಲಿಸಿದ್ದ ಕಾಡುಮಲ್ಲೇಶ್ವರ ವಾರ್ಡ್ ಸದಸ್ಯ ಮಂಜುನಾಥರಾಜು ಹಾಗೂ ಉಪಮೇಯರ್ ಸ್ಥಾನಕ್ಕಾಗಿ ನಾಮಪತ್ರ ಸಲ್ಲಿಸಿದ್ದ ಪಟ್ಟಾಭಿರಾಮನಗರ ವಾರ್ಡ್‌ನ ಸದಸ್ಯೆ ಎಚ್.ಸಿ.ನಾಗರತ್ನಾರಿಗೆ ಮ್ಯಾಜಿಕ್ ನಂಬರ್ ಪಡೆಯಲು ಸಾಧ್ಯವಾಗಲಿಲ್ಲ.
ಕೊನೆಯ ಕ್ಷಣದವರೆಗೂ ಮೇಯರ್ ಸ್ಥಾನ ದೊರೆಯುತ್ತದೆ ಎಂಬ ಬಿಜೆಪಿ ನಾಯಕರ ಭರವಸೆ ಹುಸಿಯಾಯಿತು. ಉಪಮೇಯರ್ ಸ್ಥಾನಕ್ಕೆ ಮತ ಚಲಾಯಿಸಿದ ನಂತರ ಬಿಜೆಪಿ ನಾಯಕರು ಮೈತ್ರಿಯನ್ನು ದೂರುತ್ತಾ ಸಭೆಯಿಂದ ಹೊರನಡೆದರು. ಫಲ ನೀಡಿದ ಮ್ಯಾಜಿಕ್ ನಂಬರ್ ಆಟ: 103 ಸ್ಥಾನಗಳನ್ನು ಹೊಂದಿದ್ದ ಕಾಂಗ್ರೆಸ್ ಜೆಡಿಎಸ್‌ನ 21 ಸ್ಥಾನಗಳು ಹಾಗೂ 7 ಪಕ್ಷೇತರರನ್ನು ಸೇರಿಸಿಕೊಂಡು ಮ್ಯಾಜಿಕ್ ನಂಬರ್ 131 ಮತಗಳನ್ನು ಗಳಿಸಿತು. ಈ ಮೂಲಕ ಕಾಂಗ್ರೆಸ್ ನಿರೀಕ್ಷೆಯಂತೆ ಮ್ಯಾಜಿಕ್ ನಂಬರ್‌ನಿಂದ ಬಿಬಿಎಂಪಿ ಚುಕ್ಕಾಣಿ ಹಿಡಿಯುವಲ್ಲಿ ಸಫಲವಾದರೆ, ಬಿಜೆಪಿ 128 ಮತಗಳನ್ನು ಪಡೆದು ವಿಫಲವಾಗಿದೆ. ಬಿಜೆಪಿಗೆ ಬಹುಮತವಿಲ್ಲ, ಹೀಗಾಗಿಯೇ ಮೈತ್ರಿ ಮಾಡಿಕೊಳ್ಳಲಾಯಿತು.

ಬೆಂಗಳೂರಿಗೆ ತನ್ನದೇ ಆದ ಬ್ರಾಂಡ್ ನೇಮ್ ಇದೆ. ಇದನ್ನು ಉಳಿಸಲು ಸಂಪೂರ್ಣವಾಗಿ ಶ್ರಮಿಸಲಾಗುವುದು.
ಸಿದ್ದರಾಮಯ್ಯ, ಮುಖ್ಯಮಂತ್ರಿ

ಸುಪ್ರೀಂ ಕೋರ್ಟ್‌ವರೆಗೂ ಹೋಗುತ್ತೇವೆ
ರಾಜ್ಯದ ಕಾಂಗ್ರೆಸ್ ಸರಕಾರ ಜನಾದೇಶವನ್ನು ಸಂಪೂರ್ಣವಾಗಿ ವಿರೋಧಿಸಿ ಇಂದು ಪಾಲಿಕೆಯ ಮೇಯರ್ ಸ್ಥಾನವನ್ನು ಪಡೆದುಕೊಂಡಿದೆ. ಇದನ್ನು ಬೆಂಗಳೂರು ನಾಗರಿಕರು ಮರೆಯುವುದಿಲ್ಲ. ಈ ಬಗ್ಗೆ ಈಗಾಗಲೇ ಕೋರ್ಟ್‌ನಲ್ಲಿ ದೂರು ದಾಖಲು ಮಾಡಿದ್ದು, ಸುಪ್ರೀಂ ಕೋರ್ಟ್‌ವರೆಗೂ ಹೋಗಿ ನ್ಯಾಯವನ್ನು ಪಡೆಯುತ್ತೇವೆ.
ಆರ್. ಅಶೋಕ್, ಮಾಜಿ ಉಪಮುಖ್ಯಮಂತ್ರಿ

Write A Comment