ಅಂತರಾಷ್ಟ್ರೀಯ

ಮಕ್ಕಾದ ಮಸೀದಿ ಮೇಲೆ ಕ್ರೇನ್ ಕುಸಿದು 65 ಸಾವು: 154ಕ್ಕೂ ಅಧಿಕ ಜನರಿಗೆ ಗಾಯ

Pinterest LinkedIn Tumblr

Craneಮಕ್ಕಾ, ಸೆ.11: ಸೌದಿ ಅರೇಬಿಯದ ಮಕ್ಕಾದ ಪ್ರಮುಖ ಮಸೀದಿಯ ಮೇಲೆ ಶುಕ್ರವಾರ ಕ್ರೇನ್ ಕುಸಿದು ಬಿದ್ದು ಕನಿಷ್ಠ 65 ಮಂದಿ ಮೃತಪಟ್ಟಿದ್ದು, 154ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಸೌದಿ ಅರೇಬಿಯದ ನಾಗರಿಕ ರಕ್ಷಣಾ ಪ್ರಾಧಿಕಾರವು ತನ್ನ ಟ್ವಿಟರ್ ಖಾತೆಯಲ್ಲಿ ದುರ್ಘಟನೆ ಸಂಭವಿಸಿರುವುದನ್ನು ಖಚಿತ ಪಡಿಸಿದೆ. ಸಾವು-ನೋವಿನ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆಗಳಿವೆ.
ಶುಕ್ರವಾರ ಸಂಜೆ 5:45ರ ಹೊತ್ತಿಗೆ ಮಸೀದಿಯ ಮೂರನೆ ಅಂತಸ್ತಿನ ಮೇಲೆ ಕ್ರೇನ್ ಉರುಳಿ ಬಿತ್ತು. ಆಗ ಪ್ರಬಲವಾಗಿ ಗಾಳಿ ಬೀಸುತ್ತಿತ್ತು ಎಂದು ಸೌದಿ ಅರೇಬಿಯದ ಅಲ್ ಅರಬಿಯ ಟಿವಿವಾಹಿನಿ ವರದಿ ಮಾಡಿದೆ.
ಸಂಜೆ 6:30ರ ಪ್ರಾರ್ಥನೆಗೂ ಮುನ್ನ ದುರ್ಘಟನೆ ಸಂಭವಿಸಿದ್ದರೂ ಮಸೀದಿಯಲ್ಲಿ ಬಹಳ ಜನಸಂದಣಿ ಇತ್ತೆಂದು ಅಲ್ ಜಝೀರಾ ಟಿವಿವಾಹಿನಿಯ ಹಸನ್ ಪಟೇಲ್ ವರದಿ ಮಾಡಿದ್ದಾರೆ. ಮಸೀದಿಯ ಸ್ಥಳದಲ್ಲಿ ನಿರ್ಮಾಣ ಕಾಮಗಾರಿಗಳು ನಡೆಯುತ್ತಿದ್ದವು. ಸಂಜೆ 5:30ರ ಹೊತ್ತಿಗೆ ಭಾರೀಗಾಳಿಯೊಂದಿಗೆ ಮಳೆ ಬೀಳುತ್ತಿತ್ತು ಎಂದು ಅವರು ತಿಳಿಸಿದ್ದಾರೆ.
ದುರ್ಘಟನೆಯ ಹಿನ್ನೆಲೆಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿದ್ದು, ತುರ್ತು ಪರಿಹಾರ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ. ಸೌದಿಯ ರೆಡ್ ಕ್ರೆಸೆಂಟ್ ಸದಸ್ಯರು ಕಾರ್ಯಾಚರಣೆಯಲ್ಲಿ ನೆರವಾಗಿದ್ದಾರೆ ಎಂದು ಸೌದಿ ನಾಗರಿಕ ರಕ್ಷಣಾ ಪ್ರಾಧಿಕಾರ ತಿಳಿಸಿದೆ.
ಈ ತಿಂಗಳ ಉತ್ತರಾರ್ಧದಲ್ಲಿ (ಸೆ.21) ಮಕ್ಕಾದಲ್ಲಿ ವಾರ್ಷಿಕ ಹಜ್ ಯಾತ್ರೆ ಆರಂಭಗೊಳ್ಳಬೇಕಿದ್ದು, ಲಕ್ಷಾಂತರ ಜನರು ಆಗಮಿಸುವವರಿದ್ದಾರೆ. ಪ್ರಮುಖ ಮಸೀದಿಯ ಸುತ್ತಮುತ್ತ ನಿರ್ಮಾಣ ಕಾಮಗಾರಿಗಳ ಕಾರಣದಿಂದ ಕಳೆದ ವರ್ಷ ಹಜ್ ಯಾತ್ರಿಕರ ಸಂಖ್ಯೆಯನ್ನು ಸೌದಿ ಆಡಳಿತ ಕಡಿತಗೊಳಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

Write A Comment