ಕರ್ನಾಟಕ

ಬ್ಯಾಟ್‌ -ಬಾಲ್ ಎತ್ತಿಕೊಂಡು ಹೋದ ಮಹಿಳೆ ವಿರುದ್ಧ ಪೊಲೀಸರಿಗೆ ದೂರು ನೀಡಿದ ಬಾಲಕರು !

Pinterest LinkedIn Tumblr

bat-ball

ಬೆಂಗಳೂರು: ಅಪಾರ್ಟ್‌ಮೆಂಟ್‌ನ ಮಹಡಿ ಮೇಲೆ ಕ್ರಿಕೆಟ್ ಆಡದಂತೆ ಬೆದರಿಸಿ, ಬ್ಯಾಟ್‌ ಮತ್ತು ಚೆಂಡನ್ನು ಎತ್ತಿಟ್ಟುಕೊಂಡ ಮಹಿಳೆಯೊಬ್ಬರ ವಿರುದ್ಧ, ಐವರು ಮಕ್ಕಳು ಸುಬ್ರಮಣ್ಯಪುರ ಠಾಣೆ ಪೊಲೀಸರಿಗೆ ದೂರು ನೀಡಿರುವ ಘಟನೆ ನಡೆದಿದೆ. ಉತ್ತರಹಳ್ಳಿ ಮುಖ್ಯರಸ್ತೆಯ ಸಾಯಿ ಪ್ಯಾರಾಡೈಸ್‌ ಅಪಾರ್ಟ್‌ಮೆಂಟ್‌ನ ಯಶ್‌ ಆರಾಧ್ಯ, ಸುಜಿತ್, ಕಿರಣ್‌, ಅವಿನಾಶ್ ಹಾಗೂ ಶಿವರಾಜ್‌ ದೂರು ಕೊಟ್ಟ ಬಾಲಕರು. ಎಲ್ಲರೂ ನಗರದ ವಿವಿಧ ಶಾಲೆಗಳಲ್ಲಿ ಓದುತ್ತಿದ್ದಾರೆ.

ನಾಲ್ವರು ಶುಕ್ರವಾರ ಸಂಜೆ ಅಪಾರ್ಟ್‌ಮೆಂಟ್‌ನ ಮಹಡಿ ಮೇಲೆ ಕ್ರಿಕೆಟ್‌ ಆಟವಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಮಹಡಿ ಕೆಳಗಿನ ಮನೆಯ ಮಹಿಳೆಯೊಬ್ಬರು, ‘ಮಹಡಿ ಮೇಲೆ ನೀವು ಕ್ರಿಕೆಟ್ ಆಡುವುದರಿಂದ ನಮಗೆ ತೊಂದರೆಯಾಗುತ್ತಿದೆ. ನಿಮ್ಮ ಕಿರುಚಾಟ ಕೇಳಿಸಿಕೊಳ್ಳಲು ಆಗುತ್ತಿಲ್ಲ’ ಎಂದು ಬ್ಯಾಟ್‌ ಮತ್ತು ವಿಕೆಟ್‌ಗಳನ್ನು ಕಿತ್ತುಕೊಂಡು ಪಕ್ಕದ ಮನೆಯ ತಡೆಗೋಡೆಯೊಳಕ್ಕೆ ಎಸೆದಿದ್ದರು. ನಂತರ ಮಕ್ಕಳು ಒಂದೆರಡು ಬಾರಿ ಆ ಮಹಿಳೆಯ ಮನೆಗೆ ಹೋಗಿ, ಬ್ಯಾಟ್‌ ಮತ್ತು ಚೆಂಡು ಕೊಡಿಸು ವಂತೆ ಕೋರಿದ್ದಾರೆ. ಆದರೆ, ಮಹಿಳೆ ಮತ್ತೆ ಅವರ ಮೇಲೆ ರೇಗಾಡಿ ವಾಪಸ್‌ ಕಳುಹಿಸಿದ್ದರು. ಇದರಿಂದ ಕುಪಿತಗೊಂಡ ಅವರು, ಸ್ನೇಹಿತನ ತಂದೆಯ ನೆರವಿ ನೊಂದಿಗೆ ಭಾನುವಾರ ಠಾಣೆಗೆ ಬಂದು ಮಹಿಳೆ ವಿರುದ್ಧ ದೂರು ಕೊಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ, ಮಹಿಳೆಯನ್ನು ಠಾಣೆಗೆ ಕರೆಸಿ, ಎಚ್ಚರಿಕೆ ನೀಡಲಾಯಿತು. ಜತೆಗೆ, ಯಾವುದೇ ಸುರಕ್ಷತೆ ಇಲ್ಲದ ಅಪಾರ್ಟ್‌ಮೆಂಟ್‌ನ ಮಹಡಿ ಮೇಲೆ ಆಟವಾಡದಂತೆ ಮಕ್ಕಳಿಗೆ ಬುದ್ಧಿವಾದ ಹೇಳಿ ಕಳುಹಿಸಲಾಯಿತು ಎಂದು ಪೊಲೀಸರು ಹೇಳಿದರು.

Write A Comment