ಬೆಂಗಳೂರು: ಅದೊಂದು ವಿನೂತನ ಜನ್ಮ ದಿನಾಚರಣೆ. ಅಲ್ಲಿ ಆಪ್ತೇಷ್ಟ ಬಂಧುಗಳ ಬದಲು ಕತ್ತೆಗಳಿದ್ದವು. ಹುಟ್ಟುಹಬ್ಬ ಆಚರಿಸಿಕೊಂಡವರು ಕೇಕ್ ಕತ್ತರಿಸಲಿಲ್ಲ, ಕತ್ತೆಗಳ ಪಾದಪೂಜೆ ಮಾಡಿ ಕೈಮುಗಿದರು. ಹಾರ ತುರಾಯಿಗಳ ಅರ್ಪಣೆಗಂತೂ ಅಲ್ಲಿ ಆಸ್ಪದವಿರಲಿಲ್ಲ. ಕಾಣಿಕೆಯಾಗಿ ಬಂದ ಚಿತ್ರಪಟದಲ್ಲಿ ಹುಟ್ಟುಹಬ್ಬ ಆಚರಿಸಿ ಕೊಂಡವರಿಗೆ ಪೊಲೀಸ್ ಅಧಿಕಾರಿ ಬೂಟಿನಿಂದ ಹೊಡೆಯುತ್ತಿರುವ ಚಿತ್ರವಿತ್ತು!
ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ಹುಟ್ಟುಹಬ್ಬ ಆಚರಿಸಿಕೊಂಡ ಪರಿಯಿದು.
ಐದು ದಶಕಗಳ ಹಿಂದೆ ಕನ್ನಡ ಚಳವಳಿಯಲ್ಲಿ ಭಾಗವಹಿಸಿದ್ದಾಗ ಪೊಲೀಸ್ ಅಧಿಕಾರಿಯಿಂದ ಬೂಟಿನ ಏಟು ತಿಂದ ದಿನವನ್ನೇ ವಾಟಾಳ್ ಅವರು ತಮ್ಮ ಹುಟ್ಟುಹಬ್ಬವನ್ನಾಗಿ ಆಚರಿಸಿಕೊಂಡು ಬರುತ್ತಿರುವುದು ವಿಶೇಷ ಎನಿಸಿದೆ.
ಈ ಕಾರ್ಯಕ್ರಮದಲ್ಲಿ ಮಾತ ನಾಡಿದ ವಾಟಾಳ್, ‘ಸಂಶೋಧಕ ಎಂ.ಎಂ. ಕಲಬುರ್ಗಿ ಅವರ ಹತ್ಯೆ ಖಂಡಿಸಲು ಮಠಾಧಿಪತಿಗಳು, ಕವಿ–ಸಾಹಿತಿಗಳು, ಕಲಾವಿದರು ಮಡಿವಂತಿಕೆ ಬಿಟ್ಟು ಬೀದಿಗೆ ಇಳಿಯಬೇಕು.
ಸರ್ಕಾರ ಕೂಡ ತನಿಖೆ ತೀವ್ರಗೊಳಿಸಿ, ಅಪರಾಧಿಗಳನ್ನು ಪತ್ತೆ ಮಾಡಬೇಕು’ ಎಂದು ವಾಟಾಳ್ ಆಗ್ರಹಿಸಿದರು. ಕರ್ನಾಟಕ ಬಂದ್: ಕಳಸಾ ಬಂಡೂರಿ ಯೋಜನೆಗಾಗಿ, ಉತ್ತರ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶಗಳ ಅಭಿವೃದ್ಧಿಗಾಗಿ, ಸಂಶೋಧಕ ಎಂ.ಎಂ.ಕಲಬುರ್ಗಿ ಹತ್ಯೆ ಖಂಡಿಸಿ ಹಾಗೂ ನಂಜುಂಡಪ್ಪ ವರದಿ ಅನು ಷ್ಠಾನಕ್ಕೆ ಒತ್ತಾಯಿಸಿ ಕನ್ನಡ ಒಕ್ಕೂಟ ಸೆಪ್ಟೆಂಬರ್ 26 ರಂದು ಅಖಂಡ ಕರ್ನಾಟಕ ಬಂದ್ ಕರೆ ನೀಡಲಾಗಿದೆ.
ಆ ದಿನ ಗೋವಾ ಮತ್ತು ಮಹಾ ರಾಷ್ಟ್ರ ಸರ್ಕಾರದ ವಿರುದ್ಧ ಪುರಭವನ ದಿಂದ ಸ್ವಾತಂತ್ರ್ಯ ಉದ್ಯಾನದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ‘ಅದಾದ ನಂತರ ಬಳಿಕ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗುವುದು’ ಎಂದು ವಾಟಾಳ್ ತಿಳಿಸಿದರು.