ಬೆಂಗಳೂರು/ಹುಬ್ಬಳ್ಳಿ: ವಿಜಯಪುರ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಮಳೆ ಸುರಿಯುತ್ತಿದ್ದು, ತಾಳಿಕೋಟೆ ಸಮೀಪದ ಹಡಗಿನಾಳ ಮಾರ್ಗದಲ್ಲಿ ಡೋಣಿ ನದಿಗೆ ನಿರ್ಮಿಸಿರುವ ನೆಲಮಟ್ಟದ ಸೇತುವೆ ಜಲಾವೃತ ಗೊಂಡಿದ್ದರಿಂದ ಸೋಮವಾರ ಸಂಜೆಯಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ.
ರಾಯಚೂರು ನಗರ ಸೇರಿದಂತೆ ರಾಯಚೂರು ಜಿಲ್ಲೆಯ ಮಾನ್ವಿ, ಮಸ್ಕಿ, ಹಟ್ಟಿ ಗಣಿ ಪ್ರದೇಶಗಳಲ್ಲಿ ಭಾನುವಾರ ಮಳೆಯಾಗಿದೆ. ಜಿಲ್ಲೆಯಾದ್ಯಂತ ಭಾನುವಾರ ಉತ್ತಮ ಮಳೆಯಾಗಿದ್ದು, ಸರಾಸರಿ 28 ಮಿ.ಮೀ. ಮಳೆ ಸುರಿದಿದೆ. ರಾಯಚೂರು ಹೋಬಳಿಯಲ್ಲಿ ಅತಿ ಹೆಚ್ಚು 95 ಮಿ.ಮೀ. ಮಳೆ ದಾಖಲಾಗಿದೆ.
ರಾಯಚೂರು ನಗರದ ಅರಬ್ ಮೊಹಲ್ಲಾ, ಹಾಜಿ ಕೊಲನಿ, ಕುಲಕುಂದಿ ಕಾಲೊನಿ, ಮೇದಾರವಾಡಿ, ದೇವಿ ನಗರ ಸೇರಿದಂತೆ ವಿವಿಧ ತಗ್ಗಿನ ಪ್ರದೇಶಗಳಿಗೆ ಮತ್ತು ಕೊಳೆಗೇರಿ ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿ, ಇಲ್ಲಿನ ನಿವಾಸಿಗಳು ಪರದಾಡುವಂತಾಯಿತು.
ಮಾನ್ವಿ ತಾಲ್ಲೂಕಿನಲ್ಲಿ ಭಾನುವಾರ ಮಧ್ಯಾಹ್ನ ಹಾಗೂ ರಾತ್ರಿ ನಿರಂತರ ಧಾರಾಕಾರ ಮಳೆ ಸುರಿದಿದೆ. ಕೆಲವೆಡೆ ವಿದ್ಯುತ್ ಕಂಬಗಳು ಹಾಗೂ ಪರಿವರ್ತಕಗಳು ನೆಲಕ್ಕುರುಳಿವೆ. ತಾಲ್ಲೂಕಿನ ಕುರುಕುಂದ ಭಾಗದಲ್ಲಿ ಅತ್ಯಧಿಕ 83ಮಿ.ಮೀ ಮಳೆಯಾಗಿದೆ.
ಮಸ್ಕಿಯಲ್ಲಿ ಭಾನುವಾರ ಇಡೀ ರಾತ್ರಿ ಮಸ್ಕಿ ಸುತ್ತಮುತ್ತ ಭಾರಿ ಮಳೆಯಾಗಿದೆ. ಹೆದ್ದಾರಿ ಸೇರಿದಂತೆ , ವಿವಿಧ ರಸ್ತೆಗಳಲ್ಲಿ ಬಿದ್ದಿರುವ ದೊಡ್ಡ ಗುಂಡಿಗಳಲ್ಲಿ ನೀರು ನಿಂತಿದ್ದು ವಾಹನ ಚಾಲಕರು ಪರದಾಡುವಂತಾಯಿತು. ಭಾನುವಾರ ರಾತ್ರಿ 35.6 ಮಿ.ಮೀ ಮಳೆಯಾಗಿದೆ.
ಹಟ್ಟಿ ಚಿನ್ನದ ಗಣಿ ಸೇರಿದಂತೆ ಸುತ್ತಮುತ್ತ ಗ್ರಾಮಗಳಲ್ಲಿ ಭಾನುವಾರ ತಡರಾತ್ರಿಯಿಂದ ಬೆಳಗಿನವರೆಗೆ ಧಾರಾಕಾರ ಮಳೆ ಸುರಿಯಿತು. ಪರಿಣಾಮವಾಗಿ ಪಟ್ಟಣದ ತಗ್ಗು ಪ್ರದೇಶದಲ್ಲಿರುವ ಅಂಗಡಿ ಮುಂಗಟ್ಟುಗಳಲ್ಲಿ ನೀರು ನುಗ್ಗಿದೆ. ಪಟ್ಟಣದ ಸಿಹಿ ನೀರಿನ ಹಳ್ಳ ಮತ್ತು ಉಪ್ಪು ನೀರಿನ ಹಳ್ಳ ತುಂಬಿ ಹರಿದವು.
ತಂಪನ್ನೆರೆದ ಮಳೆರಾಯ: ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಒಂದು ವಾರದಿಂದ ಬಿಡುವು ಕೊಟ್ಟಿದ್ದ ಮಳೆ ಸೋಮವಾರ ಸಂಜೆ ತುಂತುರಾಗಿ ಸುರಿದು ತಂಪನ್ನು ಎರೆಯಿತು.
ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲೂ ತುಂತುರು ಮಳೆ ಸುರಿದಿದೆ. ದಾವಣಗೆರೆ ಜಿಲ್ಲೆಯ ಹೆಚ್ಚಿನ ಕಡೆ ಭಾನುವಾರ ರಾತ್ರಿ ಮತ್ತು ಸೋಮವಾರ ಬೆಳಗಿನ ಜಾವ ಉತ್ತಮ ಮಳೆಯಾಗಿದೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನಲ್ಲಿ ಭಾನುವಾರ ಸಂಜೆ ಮಳೆಯಿಂದಾಗಿ ಕೆಲವು ಮನೆಗಳ ಗೋಡೆಗಳು ಕುಸಿದಿವೆ.
ಮತ್ತೆ ಮಳೆ: ಬೆಂಗಳೂರು: ‘ಕರ್ನಾಟಕ, ಆಂಧ್ರಪ್ರದೇಶ, ಒಡಿಶಾ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ವಾತಾವರಣದಲ್ಲಿ ಉಷ್ಣತೆ ಹೆಚ್ಚಾಗಿ, ಗಾಳಿಯ ಒತ್ತಡ ಕಡಿಮೆಯಾಗಿದೆ. ಹೀಗಾಗಿ ಅರಬ್ಬಿ ಸಮುದ್ರದಲ್ಲಿ ರೂಪುಗೊಂಡಿರುವ ಮೋಡಗಳು ಈ ರಾಜ್ಯಗಳತ್ತ ಚಲಿಸುತ್ತಿರುವುದರಿಂದ ಮಳೆಯಾಗುತ್ತಿದೆ’ ಎಂದು ಹವಾಮಾನ ತಜ್ಞ ಪ್ರೊ.ಎಂ.ಬಿ.ರಾಜೇಗೌಡ ತಿಳಿಸಿದರು.
‘ಇನ್ನೆರಡು ದಿನ ಈ ಮೋಡಗಳ ಚಲನೆ ಇರಲಿದೆ. ಹೀಗಾಗಿ ರಾಜ್ಯದ ಕೋಲಾರ, ಬೆಂಗಳೂರು, ಮೈಸೂರು, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಬೀದರ್ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿ ಕಡಿಮೆ ಮಳೆಯಾಗಲಿದೆ’ ಎಂದು ಹೇಳಿದರು.
ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಸೋಮವಾರದವರೆಗೆ (ಸೆ. 7) 703.06 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ, 548.03 ಮಿ.ಮೀ ಮಾತ್ರ ಮಳೆಯಾಗಿದೆ. ಶೇ 22ರಷ್ಟು ಮಳೆ ಕೊರತೆಯಾಗಿದೆ.
ಪೂರಕ ಮಾಹಿತಿ: ವಿವಿಧ ಬ್ಯುರೊಗಳಿಂದ